ಶಂಕರ ಹರಟಿಯವರಿಗೆ ಕಾವ್ಯಕಟ್ಟುವ ಕಲೆ ಕರಗತವಾಗಿದೆ- ಡಾ.ಪವನಕುಮಾರ ಗುಂಡೂರು


ಕೊಪ್ಪಳ: ಕವಿಗಳ ಮನಸ್ಸು ಆರೋಗ್ಯಪೂರ್ಣ, ಪ್ರಬುದ್ಧವಾಗಿರಬೇಕು. ಕವಿಗೆ ಮೂಲತಃ ಆತ್ಮಪ್ರಜ್ಞೆಯಿರಬೇಕು. ಮನುಷ್ಯ ಬದುಕಿರುವವರೆಗೂ ಸಾಹಿತ್ಯ ಜೀವಂತವಿರುತ್ತದೆ. ಕಾವ್ಯದ ದಾರಿ ಸದಾ ಹಸಿರಾಗಿರುತ್ತದೆ. ಕವಿ ಮಾಗಿದರೆ ಮಾತ್ರ ಕಾವ್ಯ ಮಾಗುತ್ತದೆ. ಕವಿಗಳು ನಿರಂತರವಾಗಿ ಸಮಾಜದ ವಿದ್ಯಮಾನಗಳನ್ನು ಗಮನಿಸುತ್ತಿರುತ್ತಾರೆ. ಕವಿ ಶಬ್ದ ಸಾಗರದ ಪಯಣಿಗ. ಕವಿಯೇ ಪದಗಳನ್ನು ಹುಡುಕಿಕೊಂಡು ಹೋಗದೇ, ಪದಗಳೇ ಕವಿಯನ್ನು ತಬ್ಬಿ ರಮಿಸುವ ಸಹಜ ಕಾವ್ಯಪ್ರತಿಭೆ ಅಪರೂಪ. ಅಂತಹ ಅಪರೂಪದ ಕಾವ್ಯಪ್ರತಿಭೆಗಳಲ್ಲಿ ಶಂಕರ ಹರಟಿಯವರೂ ಒಬ್ಬರು. ಇವರ ಕಾವ್ಯಗಳಲ್ಲಿ ವ್ಯಂಗ್ಯ, ವಿಡಂಬನೆ, ಮಾರ್ಮಿಕತೆಯಿದೆ. ವ್ಯವಸ್ಥೆಯ ವಿರುದ್ಧದ ಆಕ್ರೋಶ, ಹತಾಶೆ, ಹಳಹಳಿಕೆಗಳನ್ನು ಶಂಕರ ಹರಟಿಯವರು ಕವಿತೆಯಾಗಿಸಿದ್ದಾರೆ. ಇವರಿಗೆ ಭಾಷೆಯ ಕುರಿತು ಅಭಿಮಾನವಿದೆ, ಕಾಳಜಿಯಿದೆ. ಇವರಲ್ಲಿ ಸಾಮಾಜಿಕ ತಹತಹಿಕೆಯಿದೆ. ಸುಕೋಮಲ ಕಾವ್ಯಯಾನ ಕೈಗೊಂಡಿರುವ ಶಂಕರ ಹರಟಿಯವರು ಇತ್ತೀಚಿನ ಯುವಕವಿಗಳ ನಡುವೆ ಭಿನ್ನವಾಗಿ ಬರೆಯುತ್ತಾರೆ. ಕಾವ್ಯದ ಭಾಷೆ, ಸೂಕ್ಷ್ಮ ಸಂವೇದನಾಶೀಲ ಕವಿತೆ ಅಂತರಂಗದ ಕ್ರಿಯೆಯಾಗಿದೆ. ಕಾವ್ಯ ಸುಲಭವಾಗಿ ಒಲಿಯುವಂಥದ್ದಲ್ಲ. ಕಾವ್ಯ ಕಡುವ್ಯಾಮೋಹಿಗೆ ಒಲಿಯುತ್ತದೆ. ಕಾವ್ಯದ ಮೋಹವಿರುವ ಕವಿ ಹರಟಿಯವರ ಅಂತರಾಳದಿಂದ ಹೊರಹೊಮ್ಮುವ ಸಂವೇದನೆಗಳು ಇಲ್ಲಿ ಕವಿತೆಗಳಾಗಿವೆ ಎಂದು ಗಂಗಾವತಿಯ ಹಿರಿಯ ಸಾಹಿತಿಗಳು ಮತ್ತು ಪ್ರಾಧ್ಯಾಪಕರಾದ ಡಾ.ಪವನಕುಮಾರ ಗುಂಡೂರು ಹೇಳಿದರು.
ಅವರು ರವಿವಾರ ಕೊಪ್ಪಳದ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ ಕೊಪ್ಪಳ ಇವರ ಸಹಯೋಗದೊಂದಿಗೆ ಕವಿ ಶಂಕರ ಹರಟಿಯವರ ‘ನಳಿಕೆಗಳ ನಡುವಣ ಮುಗುಳುನಗು’ ಕೃತಿ ಕುರಿತು ಮಾತನಾಡಿದರು.
ಕೊಪ್ಪಳದ ಕವಯಿತ್ರಿ ಅರುಣಾ ನರೇಂದ್ರ ಅವರು ಶಂಕರ ಹರಟಿಯವರ ‘ರಾಧೇಗೇನೋ ಹಾಡುವಾಸೆ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, ‘ರಾಧೇಗೇನೋ ಹಾಡುವಾಸೆ’ ಕೃತಿಯು ಸುಂದರ ಭಾವಗೀತೆಗಳ ಗುಚ್ಛವಾಗಿದೆ. ರಾಧೆ ಎಂದ ಕೂಡಲೇ ಕೃಷ್ಣನ ಆರಾಧನೆಯಲ್ಲೇ ದೈವತ್ವಕ್ಕೇರಿದ ನಿಸ್ವಾರ್ಥ ಮತ್ತು ಕಾಲಾತೀತ ಪ್ರೇಮಿಕೆಯ ರೂಪ ನಮ್ಮ ಕಣ್ಮುಂದೆ ಇದೆ. ನಮಗೆ ಭಾರತೀಯ ಮನೋಭೂಮಿಕೆಯನ್ನು ಆಳುತ್ತಿರುವ ಹಲವು ಸ್ತ್ರೀ ಪಾತ್ರಗಳಲ್ಲಿ ರಾಧೆಯ ವ್ಯಕ್ತಿತ್ವ ಎಲ್ಲಕ್ಕಿಂತ ಸಂಪೂರ್ಣ ಭಿನ್ನವಾಗಿ ಕಾಣುತ್ತದೆ. ಶಂಕರ ಹರಟಿಯವರ ಭಾವಗೀತೆಗಳಲ್ಲಿ ಪ್ರೀತಿ, ಪ್ರೇಮ, ಶೃಂಗಾರ, ವಿರಹವೇದನೆಗಳು ತುಂಬಾ ಸುಂದರವಾಗಿ ಚಿತ್ರಿತವಾಗಿವೆ. ಇಲ್ಲಿಯ ಭಾವಗೀತೆಗಳಿಗೆ ಜೀವನಾನುಭವದ ಶ್ರೀಮಂತಿಕೆಯಿದೆ. ಇವರ ನಿರೂಪಣಾ ಶೈಲಿ ಓದುಗರನ್ನು ಮುದಗೊಳಿಸುತ್ತದೆ. ಇವರ ಭಾವಗೀತೆಗಳಲ್ಲಿ ಭಾವನೆಗಳ ಉತ್ಕಟತೆ ಮತ್ತು ತೀವ್ರತೆ ಇದೆ, ಮನಸ್ಸನ್ನು ಪುಳಕಗೊಳಿಸುವಂತಹ ಶಕ್ತಿ ಇದೆ ಎಂದರು.
ಕೊಪ್ಪಳದ ಕವಯಿತ್ರಿ ವಿಜಯಲಕ್ಷ್ಮಿ ಕೊಟಗಿ ಅವರು ಶಂಕರ ಹರಟಿಯವರ ‘ನಳಿಕೆಗಳ ನಡುವಣ ಮುಗುಳುನಗು’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, ಶಂಕರ ಹರಟಿಯವರು ನಳಿಕೆಗಳ ನಡುವೆ ಮುಗುಳುನಗು ಅರಳಿಸಲು ಹೊರಟಿದ್ದಾರೆ. ಹಳ್ಳಿಯ ಜೀವನವನ್ನು ಹತ್ತಿರದಿಂದ ಕಂಡು ಅನುಭವಿಸಿರುವ ಇವರ ಕವಿತೆಗಳಲ್ಲಿ ಪ್ರತಿಭಟನೆ, ಸಾತ್ವಿಕ ಸಿಟ್ಟಿದೆ. ಸಮಾಜದಲ್ಲಿ ನಡೆಯುವ ಅವ್ಯವಸ್ಥೆಯ ಬಗ್ಗೆ ನೋವು, ಹತಾಶೆ, ಅಸಹಾಯಕತೆ, ಮುಜುಗರ ವ್ಯಕ್ತಪಡಿಸುತ್ತಾರೆ ಎಂದರು.
ಕೊಪ್ಪಳದ ಯುವಕವಿ ಮಹೇಶ ಬಳ್ಳಾರಿ ಅವರು ಶಂಕರ ಹರಟಿಯವರ ‘ರಾಧೇಗೇನೋ ಹಾಡುವಾಸೆ’ ಕೃತಿ ಕುರಿತು ಮಾತನಾಡುತ್ತಾ, ಶಂಕರ ಹರಟಿಯವರು ಪ್ರಖರ ಕಾವ್ಯಗಳನ್ನು, ಗಜಲ್‌ಗಳನ್ನು ಬರೆಯುತ್ತಿರುವುದು ಸಂತಸದ ಸಂಗತಿ. ಇವರು ಕೊಪ್ಪಳ ಜಿಲ್ಲೆಯ ಹೆಮ್ಮೆಯ ಕವಿ. ಇವರ ಭಾವಗೀತೆಗಳು ಧ್ವನಿಸುರುಳಿಗಳ ಮೂಲಕ ಹೊರಬರಲಿ. ಹೊಸ ಕನಸುಗಳನ್ನು ಜೊತೆಯಾಗಿಸಿಕೊಂಡು ಬರಹವನ್ನು ಸಶಕ್ತವಾಗಿ ಸಿದ್ಧಿಸಿಕೊಂಡು ಕವಿಯಾಗಿ ಬೆಳೆಯುತ್ತಿರುವ ಇವರು ತ್ರಿಪದಿ, ಚೌಪದಿ, ಷಟ್ಪದಿಗಳಲ್ಲಿ ನಿರರ್ಗಳವಾಗಿ, ಪರಿಣಾಮಕಾರಿಯಾಗಿ ಬರೆಯುತ್ತಿರುವ ಕೆಲವೇ ಕೆಲವು ಕವಿಗಳಲ್ಲಿ ಇವರೂ ಒಬ್ಬರು. ಜಡತ್ವದಿಂದ ಚೇತನದೆಡೆಗೆ ಸಾಗಬೇಕೆನ್ನುವ ಕವಿಯ ಅದಮ್ಯ ಉತ್ಸಾಹ, ಶೂನ್ಯತ್ವದಿಂದ ಮಾನ್ಯತ್ವದ ಕಡೆಗೆ ಕವಿ ಬೆಳೆದು ಬಂದ ಪರಿ ಮೆಚ್ಚುವಂತಹದ್ದು ಎಂದರು.
ಯಲಮಗೇರಿಯ ಪ್ರಗತಿಪರ ರೈತರಾದ ಯಂಕನಗೌಡ ಮೇಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಶಂಕರ ಹರಟಿಯವರು ಬಾಲ್ಯದಲ್ಲಿ ಕುರಿ ಮೇಯಿಸುತ್ತಿದ್ದರು. ಮುಂದೆ ತಮ್ಮ ನಿರಂತರ ಪ್ರಯತ್ನದಿಂದಾಗಿ ಓದಿ ಶಿಕ್ಷಕರಾಗಿ, ಸಾಹಿತಿಗಳಾಗಿ ಹೊರಹೊಮ್ಮಿ ನಮ್ಮೂರಿಗೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೊಪ್ಪಳದ ಕವಯಿತ್ರಿ ಅನುಸೂಯಾ ಜಹಗೀರದಾರ ಅವರು ಮಾತನಾಡುತ್ತಾ, ಶಂಕರ ಹರಟಿಯವರು ಒಳ್ಳೆಯ ಭರವಸೆಯ ಕವಿಯಾಗಿದ್ದಾರೆ. ಅನ್ನ ದೇಹದ ಹಸಿವನ್ನು ಹಿಂಗಿಸಿದರೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ಮನದ ಹಸಿವನ್ನು ಹಿಂಗಿಸುತ್ತವೆ. ಕವಿಗೆ ತನ್ನದೆಯಾದ ನಿಲುವು ಮತ್ತು ಧೋರಣೆಯಿರಬೇಕು. ಇವರಿಗೆ ಗೇಯತೆಯ ಕಡೆಗೆ, ಭಾವಗೀತಾತ್ಮಕತೆಗಳ ಕಡೆಗೆ ಒಲವಿದೆ ಎಂದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾದ ಗವಿಸಿದ್ಧಪ್ಪ ಕೊಪ್ಪಳ, ಕವಿ ಶಂಕರ ಹರಟಿ, ಸಾಹಿತಿಗಳಾದ ಎ.ಎಂ.ಮದರಿ, ಈಶ್ವರ ಹತ್ತಿ, ಎಸ್.ಖಾಸೀಂಸಾಹೇಬ, ಎಸ್.ಎನ್.ತಿಮ್ಮನಗೌಡರ, ವಿಮಲಾ ಇನಾಮದಾರ, ಪುಷ್ಪಲತಾ ಏಳುಬಾವಿ, ಸಾವಿತ್ರಿ ಮುಜಮದಾರ, ಶ್ರೀನಿವಾಸ ಚಿತ್ರಗಾರ, ವಿಜಯ ಅಮೃತರಾಜ, ಮದ್ದಾನೆಪ್ಪ ಮನ್ನಾಪೂರ, ಮೆಹಬೂಬ ಮಠದ, ಡಿ.ರಾಮಣ್ಣ, ಅಲ್ಮರ್‍ಸಿಕೇರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕನ್ನಡ ಜಾನಪದ ಪರಿಷತ್ತಿನ ಕೊಪ್ಪಳ ತಾಲೂಕಾಧ್ಯಕ್ಷರಾದ ಹನುಮಂತಪ್ಪ ಕುರಿ ನಿರೂಪಿಸಿದರು. ಚುಟುಕು ಕವಿ ಶಿ.ಕಾ.ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆರಗು ಪ್ರಕಾಶನದ ಮುಖ್ಯಸ್ಥರಾದ ಡಿ.ಎಂ.ಬಡಿಗೇರ ಸ್ವಾಗತಿಸಿದರು. ಸಾಹಿತಿ ಅಕ್ಬರ ಸಿ.ಕಾಲಿಮಿರ್ಚಿ ವಂದಿಸಿದರು.
ಫೋಟೋ: ರವಿವಾರ ಕೊಪ್ಪಳದ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ ಕೊಪ್ಪಳ ಇವರ ಸಹಯೋಗದೊಂದಿಗೆ ಕವಿ ಶಂಕರ ಹರಟಿಯವರ ‘ನಳಿಕೆಗಳ ನಡುವಣ ಮುಗುಳುನಗು’ ಕೃತಿ ಹಾಗೂ ‘ರಾಧೇಗೇನೋ ಹಾಡುವಾಸೆ’ ಕೃತಿಗಳನ್ನು ಅರುಣಾ ನರೇಂದ್ರ ಮತ್ತು ವಿಜಯಲಕ್ಷ್ಮಿ ಕೊಟಗಿ ಬಿಡುಗಡೆಗೊಳಿಸಿದರು.

Please follow and like us:
error