ವೃತ್ತಿಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು-ಸಿ.ವಿ. ಚಂದ್ರಶೇಖರ್

ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಕೊಪ್ಪಳ;೨೫. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ದಿ ೨೫/ ೯ ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ  ಸಿ.ವಿ. ಚಂದ್ರಶೇಖರ್, ಭಾ.ಜ.ಪ. ರಾಷ್ಟ್ರೀಯ ಪರಿಷತ್ ಸದಸ್ಯರು, ಕೊಪ್ಪಳ ಇವರು ಮಾತನಾಡುತ್ತಾ ಪ್ರಥಮ ವರ್ಷದ ಎಲ್‌ಎಲ್.ಬಿ. ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವು ತುಂಬಾ ವಿಶೇಷತೆಯಿಂದ ಕೂಡಿದೆ. ವೃತ್ತಿಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಕ್ರಿಯಾಶೀಲತೆ ಮತ್ತು ಸತತ ಪರಿಶ್ರಮದಿಂದ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವೆಂದು ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿ ಜೀವನವು ಸುವರ್ಣ ಜೀವನವಾಗಿರುತ್ತದೆ, ಅದನ್ನು ಹಾಳುಮಾಡಿಕೊಳ್ಳಬಾರದೆಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಸಿ.ವಿ. ಕಟ್ಟಿ, ಹಿರಿಯ ವಕೀಲರು, ಕೊಪ್ಪಳ ಇವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಕಾನೂನು ಮಹಾವಿದ್ಯಾಲಯದಿಂದ ಈ ಭಾಗದ ಜನರಿಗೆ ಬಹಳ ಅನುಕೂಲವಾಗಿದೆ. ಇದರ ಸದುಪಯೋಗ ತೆಗೆದುಕೊಳ್ಳಬೇಕೆಂದು ಹೇಳಿದರು. ಕಾನೂನು ಯಾವಾಗಲೂ ಕ್ರಿಯಾತ್ಮಕವಾಗಿರುತ್ತದೆ ಮತ್ತು ಹೊಸ ಹೊಸ ಕಾನೂನುಗಳು ರಚನೆಯಾಗುತ್ತಿರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ನಿರಂತರವಾದ ಅಧ್ಯಯನ ನಡೆಸಿ ಹೊಸ ಕಾನೂನುಗಳ ಬಗ್ಗೆ ಅರಿವುಮೂಡಿಸಿಕೊಂಡಾಗ ಮಾತ್ರ ಯಶಸ್ಸನ್ನು ಕಾಣಬಹುದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಐ.ಎಸ್. ಇಂಗಳಳ್ಳಿ, ಹಿರಿಯ ವಕೀಲರು, ಕೊಪ್ಪಳ ಇವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕಲ್ಲದೆ ವೃತ್ತಿ ಕೌಶಲ್ಯ ಮತ್ತು ಮೌಲ್ಯವನ್ನು ಅಳವಡಿಸಿಕೊಂಡು ವೃತ್ತಿಯಲ್ಲಿ ತೊಡಗಬೇಕೆಂದು ಕಿವಿಮಾತು ಹೇಳಿದರು.
ಸಮಾರಂಭಕ್ಕೆ ಅಧ್ಯಕ್ಷರಾಗಿ ಆಗಮಿಸಿದ ಡಾ. ಕೆ.ಬಿ. ಬ್ಯಾಳಿ ಇವರು ಸಾಹಿತ್ಯದ ಮಹತ್ವವನ್ನು ತಿಳಿಸುತ್ತಾ ವಿದ್ಯಾರ್ಥಿಗಳು ಸಾಹಿತ್ಯದ ಮೇಲೆ ಒಲವು ಮೂಡಿಸಿಕೊಳ್ಳಬೇಕು ಇದರಿಂದ ಅವರು ತಮ್ಮ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯವೆಂದು ತಿಳಿಸಿದರು. ಜೀವನದಲ್ಲಿ ಕಷ್ಟಗಳು ಮತ್ತು ತೊಂದರೆಗಳು ಬರುತ್ತವೆ ಅವುಗಳನ್ನು ಮೀರಿ ಬೆಳೆಯಬೇಕೆಂದು ಹೇಳಿದರು. ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ರವರ ಆದರ್ಶಗಳನ್ನು ಬೆಳೆಸಿಕೊಂಡು ಮುಂದಿನ ವೃತ್ತಿಜೀವನದಲ್ಲಿ ಯಶಸ್ವಿಯಾಗಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಎಲ್‌ಎಲ್.ಬಿ. ಪ್ರಥಮ ವರ್ಷದಲ್ಲಿ ಮಹಾವಿದ್ಯಾಲಯಕ್ಕೆ ಅತೀ ಹೆಚ್ಚು ಅಂಕ ಪಡೆದ ಶ್ರೀ. ಅನಿಲ್ ಕುಮಾರ್ ರಾಜೂರ್ ಇವರಿಗೆ ಸನ್ಮಾನಿಸಲಾಯಿತು.
ದ್ವಿತೀಯ ವರ್ಷದ ವಿದ್ಯಾರ್ಥಿಯಾದ ಶ್ರೀ ರವಿಚಂದ್ರ ಮಾಟಲದಿನ್ನಿ ಮತ್ತು ಶ್ರೀ ಹನುಮಂತಪ್ಪ ಕಡ್ಲಿ ಇವರು ಪ್ರಾರ್ಥನಾ ಗೀತೆಯನ್ನು ಹಾಡಿದರು, ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಸವರಾಜ ಹನಸಿ ಇವರು ಅತಿಥಿಗಳನ್ನು ಸ್ವಾಗತಿಸಿ ಸನ್ಮಾನಿಸಿದರು, ಕುಮಾರ್ ಶಿವಪ್ರಸಾದ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರ್ ಕಂಪಾಲಿಯವರು ಅತಿಥಿಗಳ ಪರಿಚಯಮಾಡಿಕೊಟ್ಟರು, ಕುಮಾರಿ ಲಕ್ಷ್ಮಿಯವರು ಅತಿಥಿಗಳಿಗೆ ಪುಷ್ಪಾರ್ಪಣೆ ನೆರೆವೇರಿಸಿದರು. ಕುಮಾರ್ ಬಸವರಾಜ್ ರೆಡ್ಡಿಯವರು ವಂದಿಸಿದರು. ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀಮತಿ ಉಷಾದೇವಿ ಹಿರೇಮಠ, ಶ್ರೀ ಬಸವರಾಜ್ ಎಸ್.ಎಂ, ಕುಮಾರಿ ಸ್ಮಿತಾ ಅಂಗಡಿ, ಶ್ರೀ ಶೇಷಾದ್ರಿ ಕೆ. ಶ್ರೀ ಬಸವರಾಜ್ ಅಳ್ಳಳ್ಳಿ, ಶ್ರೀ ರವಿ ಬಡಿಗೇರ್, ಶ್ರೀಮತಿ ರಜಿಯಾ ಬೇಗಂ, ಕುಮಾರಿ ಸುಜಾತ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Please follow and like us:
error