ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿನೂತನ ಕಾರ್ಯಕ್ರಮ

ರುದ್ರಭೂಮಿಯಲ್ಲಿ ವನಮಹೋತ್ಸವ, ಪ್ರಮಾಣ ವಚನ

ಕೊಪ್ಪಳ, ಜೂ. 5: ‘ನಮ್ಮ ಪ್ರೀತಿಪಾತ್ರರು ಇರುವ ಈ ರುದ್ರಭೂಮಿಯಲ್ಲಿ ನಾವೆಲ್ಲ ಒಂದೊಂದು ಗಿಡ ನೆಡುತ್ತೇವೆ. ಅದನ್ನು ನಾವೇ ಪೋಷಿಸಿ ಬೆಳೆಸುತ್ತೇವೆ. ಈ ಪರಿಸರ ಹಸಿರಾಗಿ ಹಾಗೂ ಆಹ್ಲಾದಕರವಾಗಿ ಕಾಣಿಸುವಂತೆ ನೋಡಿಕೊಳ್ಳುತ್ತೇವೆ’ ಎಂದು ಪ್ರಮಾಣ ಮಾಡುವ ಮೂಲಕ ಕೊಪ್ಪಳದ ವೀರಶೈವ-ಲಿಂಗಾಯತ ಬಾಂಧವರು ನಗರದ ರುದ್ರಭೂಮಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿದರು.

ಕೊಪ್ಪಳದ ಬಣಜಿಗ ಸಮಾನ ಮನಸ್ಕರ ವೇದಿಕೆ ಬುಧವಾರ ವೀರಶೈವ-ಲಿಂಗಾಯತ ರುದ್ರಭೂಮಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಜನರನ್ನು ಸೆಳೆದಿತ್ತು. ಹಗಲು ಹೊತ್ತಿನಲ್ಲಿಯೇ ಭಯ ಹುಟ್ಟಿಸುವಂತಿದ್ದ ರುದ್ರಭೂಮಿಯ ಕಸಕಡ್ಡಿ ತೆಗೆದು ಸ್ವಚ್ಛಗೊಳಿಸಲಾಗಿತ್ತು. ಅರಣ್ಯ ಇಲಾಖೆ ಹಾಗೂ ಲಿಂಗಾಯತ ಸಮಾಜದ ದಾನಿಗಳ ನೆರವಿನಿಂದ ಗಿಡ ನೆಡಲು ಗುಂಡಿ ತೋಡಿ, ನೀರುಣಿಸಿ ಹದಗೊಳಿಸಲಾಗಿತ್ತು.

ಬಣಜಿಗ ಸಮಾನ ಮನಸ್ಕರ ವೇದಿಕೆಯ ಕಾರ್ಯಕರ್ತರಾದ ಜಗದೀಶ ಗುತ್ತಿ, ರಾಜಶೇಖರ ಅಂಗಡಿ, ರಾಜೇಶ ಅಂಗಡಿ, ಮಂಜುನಾಥ ಹಲಗೇರಿ, ರಾಜೇಂದ್ರ ಶೆಟ್ಟರ್, ಸುನೀಲ್ ಹೆಸರೂರ, ದೊಡ್ಡೇಶ ಯಲಿಗಾರ, ಮಂಜುನಾಥ ಅಂಗಡಿ, ಬಸವರಾಜ ಏಳುರೊಟ್ಟಿ, ಶರಣು ಅಗಡಿ, ಸಿದ್ದು ಬುಳ್ಳಾ, ಮಹೇಶ ಅಂಗಡಿ, ಈಶಪ್ಪ ಮಟ್ಟಿ, ವೀರೇಶ ಬಾವಿಕಟ್ಟಿ, ಬಸವರಾಜ ಶಿರಗುಂಪಿಶೆಟ್ಟರ್, ಶಿವು ಪಾವಲಿಶೆಟ್ಟರ್, ಸಿದ್ದಣ್ಣ ವಾರದ ಮುಂತಾದವರು ಕಾರ್ಯಕ್ರಮವನ್ನು ಸಂಘಟಿಸಿದ್ದರು.

ಸಂಕ್ಷಿಪ್ತವಾಗಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಶಿವಪ್ಪ ಶೆಟ್ಟರ್, ಬಸವರಾಜ ಬಳ್ಳೊಳ್ಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ನಿವೃತ್ತ ಪ್ರಾಚಾರ್ಯ ಸಿ.ವಿ. ಕಲ್ಮಠ, ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅಂಗಡಿ, ಎಸ್.ಎಂ. ಪಾಟೀಲ್, ವಕೀಲರಾದ ಎ.ವಿ. ಕಣವಿ ಮಾತನಾಡಿ ರುದ್ರಭೂಮಿಯಲ್ಲಿ ಸಹಜ ಪರಿಸರ ಸೃಷ್ಟಿಸುವ ಅವಶ್ಯಕತೆ ಹಾಗೂ ಬದ್ಧತೆ ಕುರಿತು ಮಾತನಾಡಿದರು. ಮರಗಿಡಗಳನ್ನು ಬೆಳೆಸುವುದರಿಂದ ಪರಿಸರವೂ ತಂಪಾಗುತ್ತದೆ. ಮಡಿದ ನಮ್ಮ ಆತ್ಮೀಯರಿಗೂ ನೆಮ್ಮದಿ ಸಿಗುತ್ತದೆ ಎಂದರು.

ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ರುದ್ರಭೂಮಿಯಲ್ಲಿ ಶ್ರಮದಾನ ಕೈಗೊಳ್ಳುವುದಾಗಿ ಹೇಳಿದರು. ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಮಾತನಾಡಿ, ಈ ರುದ್ರಭೂಮಿಯನ್ನು ಸುಂದರ ಉದ್ಯಾನವನವಾಗಿಸುವ ನಿಟ್ಟಿನಲ್ಲಿ ನಗರಸಭೆಯಿಂದ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ಘೋಷಿಸಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೀರಶೈವ-ಲಿಂಗಾಯತ ಸಮಾಜದ ನೂರಾರು ಜನ ನಂತರ ಗುಂಪುಗುಂಪಾಗಿ ಗೊಬ್ಬರ ಹಾಕಿ, ಗಿಡ ನೆಟ್ಟು, ನೀರುಣಿಸಿದರು. ಮೂಢನಂಬಿಕೆ ಬದಿಗಿಟ್ಟು ರುದ್ರಭೂಮಿಯಲ್ಲಿಯೇ ಉಪಾಹಾರ ಸೇವಿಸಿದರು. ಸ್ವಚ್ಛವಾಗಿದ್ದ ರುದ್ರಭೂಮಿಯನ್ನು ಅದೇ ಮೊದಲು ಬಾರಿ ನೋಡುತ್ತಿದ್ದ ಅವರೆಲ್ಲ, ವಾರಕ್ಕೆ ಒಂದು ದಿನವಾದರೂ ಇಲ್ಲಿ ಬಂದು ಶ್ರಮದಾನ ಮಾಡುವುದಾಗಿ ಹೇಳಿದರು. ಮಡಿದ ತಮ್ಮ ಪ್ರೀತಿಪಾತ್ರರ ನೆನಪಿಗೆಂದು ತಾವೇ ಸ್ವಯಂಪ್ರೇರಿತರಾಗಿ ಒಂದೊಂದು ಗಿಡವನ್ನು ನೆಟ್ಟು ಪೋಷಿಸುವುದಾಗಿ ಘೋಷಿಸಿದರು. ಇನ್ನು ಮುಂದೆ ವಾಕಿಂಗ್‍ಗೆಂದು ರುದ್ರಭೂಮಿಗೇ ಬರುವುದಾಗಿಯೂ ಕೆಲವರು ತಮ್ಮ ನಿರ್ಧಾರ ಪ್ರಕಟಿಸಿದರು.

ರುದ್ರಭೂಮಿಯನ್ನು ಆಕರ್ಷಕ ಉದ್ಯಾನವನವಾಗಿಸುವ ಈ ವಿನೂತನ ಪ್ರಯತ್ನ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಬಂದ ಸಾರ್ವಜನಿಕರು, ವನಮಹೋತ್ಸವದ ಉತ್ಸಾಹ ಕಂಡು ಆಶ್ಚರ್ಯಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Please follow and like us:
error