ವಾರಿಯರ್ಸ್ ಕ್ಲಬ್‌ನ ಸಮಾಜಮುಖಿ ಕಾರ್ಯ ಶ್ಲಾಘನೀಯ: ಸುರಳ್ಕರ್

-ಮಹಿಳೆಗೆ ಮಾತಿನಲ್ಲಿ ಗೌರವ ಸಲ್ಲಿಸಿದರೆ ಸಾಲದು
-ಮಹಿಳೆಗೂ ನೀಡಬೇಕಿದೆ ಆರ್ಥಿಕ ಸ್ವಾತಂತ್ರ್ಯ
ಕೊಪ್ಪಳ: ಮಹಿಳೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕೊಪ್ಪಳ ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಲಬ್‌ ಆಯೋಜಿಸಿರುವ ಮಾತೃಶ್ರೀ (ಅವ್ವ) ಕಪ್ ಕ್ರಿಕೆಟ್ ಟೂರ್ನಮೆಂಟ್ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಮಾತೃಶ್ರೀ (ಅವ್ವ) ಕಪ್ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾನ್ಯವಾಗಿ ಮಹಿಳಾ ದಿನದಂದು ಮಹಿಳೆಯರ ಬಗ್ಗೆ ಮಾತನಾಡುವುದು, ಬಾಯಿ ಮಾತಿನಲ್ಲಿ ಗೌರವಿಸುವುದಷ್ಟೇ ಮಾನ್ಯತೆಯಲ್ಲ. ಹೆಣ್ಣು ಹಲವು ರೂಪಗಳಲ್ಲಿ ನಮ್ಮೊಂದಿಗೆ ಇರುತ್ತಾಳೆ, ಅಮ್ಮ, ಅಕ್ಕ-ತಂಗಿ, ಹೆಂಡತಿ, ಮಗಳ ರೂಪದಲ್ಲಿರುವ ಮಹಿಳೆಯರನ್ನು‌ ನಿತ್ಯ ಗೌರವಿಸಬೇಕು‌ ಎಂದರು.
ಮಹಿಳೆ ಎಂದರೆ ಅಡುಗೆ ಮನೆಗೆ ಸೀಮಿತ ಎಂಬ ಕಲ್ಪನೆ ಕೊಂಚ ದೂರವಾಗಿರುವುದು ಸರಿಯಷ್ಟೇ ಆದರೂ ಅವಳಿಗೂ ಆರ್ಥಿಕ ಸ್ವಾತಂತ್ರ್ಯ ಬೇಕಿದೆ. ಆ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ನಾವೆಲ್ಲ ಬೆನ್ನೆಲುಬಾಗಿ ನಿಲ್ಲುವ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹನುಮೇಶ್ ಮುರಡಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಕ್ಲಬ್‌ನ ಗೌರವಾಧ್ಯಕ್ಷ ಬಸವರಾಜ ಕರುಗಲ್, ಅಧ್ಯಕ್ಷ ವಿನೋದ್ ಚಿನ್ನಿನಾಯ್ಕರ್, ಮುಖಂಡ ಗಿರೀಶ್ ಮುಂಡಾದ, ಪೊಲೀಸ್ ಅಧಿಕಾರಿಗಳಾದ ರವಿ ಉಕ್ಕುಂದ, ಅಮರೇಶ್ ಹುಬ್ಬಳ್ಳಿ, ಮಲ್ಲನಗೌಡ್ರ, ಧಾರವಾಡ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್ ಡೊಳ್ಳಿನ್, ವಾಣಿಜ್ಯೋದ್ಯಮಿ ಶರಣಬಸವರಾಜ ಗದಗ ಇದ್ದರು.
ಕೊಪ್ಪಳದ ಕರ್ನಾಟಕ ವಾರಿಯರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಅವ್ವ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ನಾಯಕತ್ವದ ತಂಡವು ಬಸವರಾಜ ಸಜ್ಜನ್ ನಾಯಕತ್ವದ ವಕೀಲರ ತಂಡದ ವಿರುದ್ಧ ಪಂದ್ಯವಾಡಿ ಸುಲಭವಾಗಿ ಗೆಲುವು ದಾಖಲಿಸಿದರು. ಟೂರ್ನಮೆಂಟ್‌ನ ಮೊದಲ ಪಂದ್ಯದ ಟಾಸ್ ಗೆದ್ದ ಡಿಸಿಯವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಓವರ್ ಬೌಲ್ ಮಾಡಿದ ಡಿಸಿ ವಿಕಾಸ್ ಕಿಶೋರ್ ಅವರು 12 ರನ್ ನೀಡಿ, ಮೊದಲ ವಿಕೆಟ್ ಉರುಳಿಸಿದರು. ಒಟ್ಟಾರೆ ವಕೀಲರ ತಂಡವನ್ನು‌ ನಿಗದಿತ 10 ಓವರ್‌ಗಳಲ್ಲಿ 73 ರನ್‌ಗಳಿಗೆ ಕಟ್ಟಿ ಹಾಕಿದ ಡಿಸಿ ನಾಯಕತ್ವದ ಜೀಜಾ ಮಾತಾ ಟೀಮ್, ಕೇವಲ 7.4ಓವರ್‌ಗಳಲ್ಲಿ  74ರನ್‌ಗಳ ಗುರಿ ತಲುಪಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಪೊಲೀಸ್ ಹಾಗೂ ಜಿಲ್ಲಾ ಪಂಚಾಯಿತಿ ನೌಕರರ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಪಂ ನೌಕರರ ಅಮ್ಮ ತಂಡವು 10ಓವರ್‌ಗಳಲ್ಲಿ 116 ರನ್‌ಗಳನ್ನು ಕಲೆ ಹಾಕಿತು. 117ರನ್‌ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಪೊಲೀಸರ ಕಿರಣ್ ಬೇಡಿ ತಂಡವು ಭಾರಿ ಪೈಪೋಟಿ ನೀಡಿ 109ರನ್‌ಗಳನ್ನ ಕಲೆ ಹಾಕಿ 8ರನ್‌ಗಳ ವಿರೋಚಿತ ಸೋಲೊಪ್ಪಿಕೊಂಡಿತು.
ಮಾರ್ಚ್ 8ರ ಮಹಿಳಾ ದಿನದ ಹಿನ್ನೆಲೆಯಲ್ಲಿ ನಡೆದ ಈ ಟೂರ್ನಿಯನ್ನು ಮಹಿಳಾ ಸಾಧಕಿಯರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದು, ಟೂರ್ನಮೆಂಟ್‌‌ನಲ್ಲಿ ಭಾಗವಹಿಸಿದ್ದ 10 ತಂಡಗಳಿಗೆ ವಿವಿಧ ಕ್ಷೇತ್ರಗಳ ಸಾಧಕಿಯರ ಹೆಸರನ್ನು ನೀಡಲಾಗಿದ್ದು, ಮಾರ್ಚ್ 14ರ ಸಂಜೆ ಟೂರ್ನಿ ಸಮಾರೋಪಗೊಳ್ಳಲಿದೆ.
Please follow and like us:
error