ಲ್ಯಾಪ್‌ಟಾಪ್ ಹಗರಣ, ರಾಯರಡ್ಡಿ ವಜಾ ಮಾಡಿ : ನವೀನ್ ಗುಳಗಣ್ಣವರ

ಕೊಪ್ಪಳ: ಪದವಿ ಶಿಕ್ಷಣ ಪಡೆಯುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುತ್ತೇವೆ ಎಂದು ಹೇಳಿದ್ದ ಉನ್ನತ ಶಿಕ್ಷಣ ಇಲಾಖೆ ಹಣ ಲೂಟಿ ಮಾಡಲು ಹೊರಟಿರುವುದು ಇದೀಗ ಬಹಿರಂಗವಾಗಿದೆ. ಈ ಕುರಿತು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಕೂಡಲೇ ಸೂಕ್ತ ತನಿಖೆ ನಡೆಸಬೇಕು. ಇದಲ್ಲದೆ ಈ ಹಗರಣ ನಡೆಯಲು ಕಾರಣರಾದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಉನ್ನತ ಶಿಕ್ಷಣ ಸಚಿವರಾದ   ಬಸವರಾಜ ರಾಯರಡ್ಡಿ ಅವರನ್ನು ಈ ಕೂಡಲೇ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸುತ್ತೇನೆ.
ವರ್ಗಾವಣೆಗೂ ಮುನ್ನ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತ ಅಜಯ್ ನಾಗಭೂಷಣ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ರಾಜ್ಯದ ೧.೫೦ ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡಲು ಸರ್ಕಾರ ಹೊರಟಿದೆ. ಆದರೆ ಖರೀದಿಯಲ್ಲಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ, ಗೋಲ್‌ಮಾಲ್ ನಡೆದಿರುವ ಸಾಧ್ಯತೆ ಇದೆ ಎಂದು ಹಿಂದಿನ ಆಯುಕ್ತ ಅಜಯ್ ನಾಗಭೂಷನ್ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವುದು ಇದೀಗ ಬಹಿರಂಗವಾಗಿದೆ.
ಕೋಟ್ಯಂತರ ರುಪಾಯಿ ವಹಿವಾಟು ನಡೆಯುವ ಆದೇಶಗಳಿಗೆ ಸರ್ಕಾರದ ಅಧಿಕಾರಿಗಳು ಸಹಿ ಹಾಕಬೇಕು. ಆದರೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಕೆಳಗೆ ಬರುವ ಬೋಧಕ ಸಿಬ್ಬಂದಿ ಭಾಗ್ಯವಾನ್ ಮುದಿಗೌಡರ ಅವರಿಂದ ಸಹಿ ಮಾಡಿಸಿ ಆದೇಶ ಹೊರಡಿಸಲಾಗಿದೆ.
ಒಂದು ಪ್ಯಾಕೇಜ್‌ನಲ್ಲಿ ಲ್ಯಾಪ್‌ಟಾಪ್‌ಗಳನ್ನು ಖರೀದಿ ಮಾಡುವುದನ್ನು ಬಿಟ್ಟು ನಾಲ್ಕು ಪ್ಯಾಕೇಜ್‌ಗಳಲ್ಲಿ ಖರೀದಿ ಮಾಡಲು ಹೊರಟ್ಟಿದ್ದಾರೆ. ಇದರಿಂದ ಗುಣಮಟ್ಟ ಹಾಗು ಬೇರೆ ಬೇರೆ ದರಗಳು ನಿಗದಿಯಾಗುವ ಸಾಧ್ಯತೆ ಇದೆ ಎಂದು ಅಜಯ್ ಪತ್ರ ಬರೆದಿದ್ದಾರೆ. ಆದರೆ ಪತ್ರ ಬರೆದು ಒಂದು ವಾರ ಕಳೆದರೂ ಮುಖ್ಯ ಕಾರ್ಯದರ್ಶಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಈ ಎಲ್ಲ ವ್ಯವಹಾರಗಳ ಹಿಂದೆ ಉನ್ನತ ಶಿಕ್ಷಣ ಸಚಿವ ರಾಯರಡ್ಡಿಯವರ ಕೈವಾಡ ಇರುವುದು ಕಂಡುಬಂದಿದೆ. ಇಲಾಖೆಯಲ್ಲಿ ಉತ್ತಮ ಕಾರ್ಯ ಮಾಡುವುದನ್ನು ಬಿಟ್ಟು, ಕ್ಷೇತ್ರದ ಅಭಿವೃದ್ಧಿ ಮರೆತು, ಕೃಷ್ಣಾ ಬಿ ಸ್ಕೀಂ ಬಗ್ಗೆ ತಲೆಕೆಡಿಸಿಕೊಳ್ಳದ ಸಚಿವರು ಕೋಟಿ ಕೋಟಿ ಹಣ ಗುಳುಂ ಮಾಡುವಲ್ಲಿ ನಿರತರಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನೆಲ್ಲೆ ಮನಗಂಡು ಮುಖ್ಯಮಂತ್ರಿಗಳು ರಾಯರಡ್ಡಿಯವರನ್ನು ತಮ್ಮ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸುವೆ.

Please follow and like us:
error