ಲಾಕ್‍ಡೌನ್ ವಿಶೇಷ ಪ್ಯಾಕೇಜ್ ಘೋಷಣೆಗೆ ಆದಿಲ್ ಪಟೇಲ್ ಒತ್ತಾಯ

ಕೊಪ್ಪಳ : ಮಹಾಮಾರಿ ಕೊರೊನಾ ಸಂಕ್ರಮಿತ ಕಾಲದಲ್ಲಿ ಸರಕಾರ ಲಾಕ್‍ಡೌನ್ ಮಾಡಿರುವುದು ಸರಿಯಷ್ಟೆ. ಆದರೆ, ಬಡವರ, ಮಧ್ಯಮ ವರ್ಗದ ಜೀವನ ದುಡಿಮೆ ಇಲ್ಲದೇ ನಡೆಸುವುದು ಕಷ್ಟಕರವಾಗಿದೆ. ತೀವ್ರ ಸಂಕಷ್ಟದಲ್ಲಿ ಬದುಕುತ್ತಿರುವ ಬಡ-ಮಧ್ಯಮ ವರ್ಗಕ್ಕೆ ಸರಕಾರ ಕೂಡಲೇ ವಿಶೇಷ ಪ್ಯಾಕೇಜ್‍ಅನ್ನು ಘೋಷಣೆ ಮಾಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಆದಿಲ್ ಪಟೇಲ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕೋವಿಡ್-19ರ ಎರಡನೇ ಅಲೆ ಆರಂಭವಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿಯೂ ರೋಗಿಗಳ ಸಂಖ್ಯೆ ಉಲ್ಬಣಿಸುತ್ತಿದೆ. ಕೂಡಲೇ ಸರಕಾರ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್, ಬೆಡ್‍ಗಳು ಹಾಗೂ ರೆಮ್ಡಿಸಿವರ್ ಔಷಧಿಯ ವ್ಯವಸ್ಥೆ ಮಾಡಬೇಕು. ಸತತ ಲಾಕ್‍ಡೌನ್‍ನಿಂದ ಕೂಲಿ ಕಾರ್ಮಿಕರು, ರೈತರು, ಕುಶಲಕರ್ಮಿಗಳ, ಕ್ಷೌರಿಕರು, ಕಟ್ಟಡ ಕಾರ್ಮಿಕರು, ಟೈಲರ್, ಅಟೋ, ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಮಡಿವಾಳರು, ಅಂಬಿಗರು, ಅಲೆಮಾರಿ ಸಮುದಾಯದವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯದವರು ತಮ್ಮ ವೃತ್ತಿಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುವವರಿಗೆ ಜೀವನ ನಡೆಸುವುದು ಕಷ್ಟಕರವಾಗಿದೆ.

ಕೂಡಲೇ ಸರಕಾರ ಪ್ರತಿಯೊಂದು ಕುಟುಂಬದ ವ್ಯಕ್ತಿಗೆ 10 ಕೆಜಿ ಅಕ್ಕಿ, ರೇಷನ್ ಕಿಟ್ ಹಾಗೂ 10 ಸಾವಿರ ರೂಪಾಯಿ ಆರ್ಥಿಕ ಸಹಾಯ ಮಾಡಬೇಕು. ಕೋವಿಡ್-19 ಬಂದ ರೋಗಿಗೆ ಉಚಿತವಾಗಿ ಚಿಕಿತ್ಸೆ ಕೊಡಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಮತ್ತು ಆಕ್ಸಿಜನ್, ಬೆಡ್, ರೆಮ್ಡಿಸಿವರ್ ಔಷಧಿಯ ವ್ಯವಸ್ಥೆ ಮಾಡಬೇಕು. ವಿದ್ಯುತ್ ಬಿಲ್, ಫೈನಾನ್ಸ್ ಹಾಗೂ ಬ್ಯಾಂಕ್‍ಗಳಲ್ಲಿ ಬಡ್ಡಿ ವಿನಾಯಿತಿ ಮಾಡಬೇಕು ಎಂದು ಆದಿಲ್ ಪಟೇಲ್ ಒತ್ತಾಯಿಸಿದರು.

ಕೊರೋನಾ ಮಹಾಮಾರಿಯಿಂದ ಜನ ಬದುಕಿಗಾಗಿ ಹೋರಾಡುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸಿಲ್ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ. ಇದೊಂದು ಕರುಣೆಯಿಲ್ಲದ ಜನ ವಿರೋಧಿ ಸರಕಾರ ಎಂದು ಹೇಳಿದ್ದಾರೆ.

ಸರಕಾರದ ಈ ನಿಲುವನ್ನು ಖಂಡಿಸಿದ್ದು, ವಿಶ್ವ ಮಾರಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಮತ್ತು ರೂಪಾಯಿ ಎಂದು ಎದುರು ಡಾಲರ್ ವೌಲ್ಯ ಯಥಾಸ್ಥಿತಿ ಕಾಯ್ದು ಕೊಂಡಿದ್ದರೂ ಡೀಸೆಲ್, ಪೆಟ್ರೋಲ್ ಬೆಲೆಯನ್ನು ಲೀಟರಿಗೆ ಸರಿ ಸುಮಾರು 28 ಪೈಸೆ ಹಾಗೂ 32 ಪೈಸೆ ಏರಿಸುವ ಔಚಿತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಇದರಿಂದ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಸ್ಥಳೀಯ ವ್ಯತ್ಯಯದೊಂದಿಗೆ ಕನಿಷ್ಟ 92.67ರೂ.ನಿಂದ ಗರಿಷ್ಟ 97.58 ರೂ.ವರೆಗೆ ಏರಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಲಿದೆ ಎಂದಿದ್ದಾರೆ.

ರಾಜ್ಯದಲ್ಲಿ 2018ರ ಪ್ರಕೃತಿ ವಿಕೋಪದಡಿ ರೈತರ ಸಾಲ ಮನ್ನಾ ಮಾಡಲು ಹೇರಿದ್ದ ಶೇ. ಸೆಸ್ಸನ್ನು ಈಗಲೂ ಮುಂದುವರಿಸಲಾಗುತ್ತಿದ್ದು ಅದನ್ನು ಕೂಡಲೇ ತಡೆ ಹಿಡಿದು ಕೊರೋನಾ ಸಂಕಷ್ಟ ನಿಧಿಗೆ ಆ ಹಣವನ್ನು ವರ್ಗಾಯಿಸಬೇಕು ಎಂದವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Please follow and like us:
error