ರುದ್ರಭೂಮಿಗಾಗಿ ಜಮೀನು ಗುರುತಿಸುವಂತೆ ತಹಶೀಲ್ದಾರರಿಗೆ ಸೂಚನೆ: ಪಿ. ಸುನೀಲ್ ಕುಮಾರ್

ಕೊಪ್ಪಳ : ಜಿಲ್ಲೆಯಲ್ಲಿ 165 ಗ್ರಾಮಗಳಿಗೆ ಸಾರ್ವಜನಿಕ ರುದ್ರಭೂಮಿಗಾಗಿ ಜಮೀನು ಕಾಯ್ದಿರಿಸಲು ಸರ್ಕಾರಿ ಜಮೀನು ಗುರುತಿಸಿ ಪ್ರಸ್ತಾವಣೆ
ಸಲ್ಲಿಸಲು ಹಾಗೂ ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಖಾಸಗಿ ಜಮೀನನ್ನು ಗುರುತಿಸಿ, ಸಾರ್ವಜನಿಕ ರುದ್ರಭೂಮಿಗಾಗಿ ಖರೀದಿಸಲು ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲೆಯ ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 629 ಗ್ರಾಮಗಳಿದ್ದು, ಇವುಗಳಲ್ಲಿ 34 ಬೇಚಾರಾಕ್ ಗ್ರಾಮಗಳಿರುತ್ತವೆ. ಈ ಬೇಚಾರಾಕ್ ಗ್ರಾಮಗಳನ್ನು ಹೊರತು ಪಡಿಸಿ ಉಳಿದ 594 ಗ್ರಾಮಗಳ ಪೈಕಿ ಸಾರ್ವಜನಿಕ ರುದ್ರಭೂಮಿ ಇಲ್ಲದೆ ಇರುವ ಗ್ರಾಮಗಳನ್ನು ಪರಿಶೀಲಿಸಲಾಗಿದ್ದು, ಕೊಪ್ಪಳ ತಾಲೂಕಿನ-78, ಗಂಗಾವತಿ ತಾಲ್ಲೂಕಿನ -53, ಕುಷ್ಟಗಿ ತಾಲ್ಲೂಕಿನ-57, ಯಲಬುರ್ಗಾ ತಾಲ್ಲೂಕಿನ -31, ಕುಕನೂರ ತಾಲ್ಲೂಕಿನ -39, ಕನಕಗಿರಿ ತಾಲ್ಲೂಕಿನ -23, ಕಾರಟಗಿ ತಾಲ್ಲೂಕಿನ -25 ಗ್ರಾಮಗಳು ಸೇರಿದಂತೆ ಒಟ್ಟು 306 ಗ್ರಾಮಗಳಲ್ಲಿ ಈಗಾಗಲೇ ಸರ್ಕಾರಿ ಜಮೀನಿನಲ್ಲಿ ಸಾರ್ವಜನಿಕ ರುದ್ರಭೂಮಿಗಾಗಿ ಜಮೀನನ್ನು ಹಾಗೂ ಕೊಪ್ಪಳ
ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಹಾಗೂ ಗಂಗಾವತಿ ತಾಲ್ಲೂಕಿನ ಒಂದು ಗ್ರಾಮದಲ್ಲಿ ಪಟ್ಟಾ ಜಮೀನನ್ನು ಖರೀದಿಸಿ ಒಟ್ಟು 309 ಗ್ರಾಮಗಳಲ್ಲಿ 615 ಎಕರೆ 18 ಗುಂಟೆ ಜಮೀನನ್ನು ಸಾರ್ವಜನಿಕ ರುದ್ರಭೂಮಿಗಾಗಿ ಕಾಯ್ದಿರಿಸಿ ಉಪಯೋಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬಾಕಿ ಉಳಿದ 285 ಗ್ರಾಮಗಳ ಪೈಕಿ 120 ಗ್ರಾಮಗಳಲ್ಲಿ ಸಾರ್ವಜನಿಕ ರುದ್ರಭೂಮಿಗಾಗಿ ಜಮೀನನ್ನು ಕಾಯ್ದಿರಿಸಲು ತಹಶೀಲ್ದಾರರು ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಈ ಪ್ರಸ್ತಾವನೆಗಳನ್ವಯ ಸಾರ್ವಜನಿಕ ರುದ್ರಭೂಮಿಗಾಗಿ ಕಾಯ್ದಿರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Please follow and like us:
error