ರಾಜ್ಯದ ಸಮಗ್ರ ಅಭಿವೃದ್ಧಿಗೆ ಜನಾಭಿಪ್ರಾಯ ಸಂಗ್ರಹ ಯತ್ನ ದೇಶದಲ್ಲೇ ಮೊದಲು- ರೇಣುಕಾ ಚಿದಂಬರಂ

: ರಾಜ್ಯದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ತಜ್ಞರು, ಸಾರ್ವಜನಿಕರು, ವಿವಿಧ ಸ್ಥರಗಳ ಪ್ರತಿನಿಧಿಗಳಿಂದ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸುವಂತಹ ವಿಷನ್ ೨೦೨೫ ಕಾರ್ಯಕ್ರಮ ಕರ್ನಾಟಕ ರಾಜ್ಯದಲ್ಲಿ ಇದೀಗ ಜರುಗುತ್ತಿದ್ದು, ಇಂತಹ ಪ್ರಯತ್ನ ದೇಶದಲ್ಲಿಯೇ ಇದೇ ಮೊದಲ ಯತ್ನವಾಗಿದೆ ಎಂದು ವಿಷನ್ ೨೦೨೫ ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರೇಣುಕಾ ಚಿದಂಬರಂ ಅವರು ಹೇಳಿದರು.

ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾದ ವಿಷನ್ ೨೦೨೫ ಜನಾಭಿಪ್ರಾಯ ಸಂಗ್ರಹಣೆ ಜಿಲ್ಲಾ ಮಟ್ಟದ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.  ರಾಜ್ಯದ ಸಮಗ್ರ ಅಭಿವೃದ್ಧಿಯ ಬಗ್ಗೆ ಗುರಿಯನ್ನು ಹೊಂದುವುದು ನಮ್ಮ ಮೊದಲ ಕರ್ತವ್ಯವಾಗಿದ್ದು, ಆ ಗುರಿ ಸಾಧನೆಗೆ ತಲುಪಬೇಕಾದ ಮಾರ್ಗಗಳ ಬಗ್ಗೆ ನಂತರ ಯೋಜಿಸಿ, ಕಾರ್ಯ ಸಾಧಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ.  ಭವಿಷ್ಯದ ೦೭ ವರ್ಷಗಳಲ್ಲಿ ರಾಜ್ಯದಲ್ಲಿ ಆಗಲಿರುವ ಜನಸಂಖ್ಯೆಗೆ ಅನುಗುಣವಾಗಿ, ಪ್ರತಿಯೊಂದು ಪ್ರದೇಶದ ಜನರ ಹಿತಕ್ಕಾಗಿ ಹಲವು ಕ್ಷೇತ್ರಗಳಲ್ಲಿ ಏನೆಲ್ಲಾ ಯೋಜನೆಗಳು ಜಾರಿಗೊಳ್ಳಬೇಕು ಎನ್ನುವ ನವ ಕರ್ನಾಟಕ ಮುನ್ನೋಟವನ್ನು ಸಿದ್ಧಪಡಿಸಲು ವಿಷನ್ ೨೦೨೫ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದ್ದು, ಬರುವ ಏಳು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಯ ದಾರಿ ನಕಾಶೆ ಇದಾಗಲಿದೆ.  ಅಲ್ಲದೆ ವಿಷನ್ ೨೦೨೫ ದೇಶದ ಅಪರೂಪದ ದಾಖಲೆಯೂ ಆಗಲಿದೆ.  ಯಾವುದೇ ರಾಜ್ಯದ ಅಭಿವೃದ್ಧಿಯನ್ನು ಸಾರ್ವಜನಿಕರು ಆಯಾ ವರ್ಷದ ಬಜೆಟ್ ಅನ್ನು ಗಮನಿಸಿ, ಅಭಿಪ್ರಾಯ ವ್ಯಕ್ತಪಡಿಸುವುದು ಸಹಜ.  ಆದರೆ ವ್ಯಕ್ತಿಗಳು, ತಮ್ಮ ಆಸಕ್ತಿ ಕ್ಷೇತ್ರದ ಅಭಿವೃದ್ಧಿಯನ್ನು ಮಾತ್ರ ಗಮನಿಸಿ, ಅದರ ಬಗ್ಗೆ ವಿಮರ್ಶೆ ಮಾಡುತ್ತಾರೆ.  ಹೀಗಾಗಿ, ಪ್ರತಿಯೊಬ್ಬರಿಗೂ ತಮ್ಮದೇ ಆದ ಕ್ಷೇತ್ರ, ವ್ಯಾಪ್ತಿಯ ಬಗ್ಗೆ ಆಸಕ್ತಿ ಇದ್ದು, ಅದರ ಬಗ್ಗೆ ಗಮನ ಕೇಂದ್ರೀಕರಿಸುತ್ತಾರೆ.  ಇದಕ್ಕೆಂದೇ ಸರ್ಕಾರ ಯಾವುದೋ ಒಂದು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತ್ರ ಯೋಚಿಸದೆ, ರಾಜ್ಯದ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಜನೆ ರೂಪಿಸುವಾಗ, ಪ್ರತಿಯೊಂದು ಕ್ಷೇತ್ರದ ತಜ್ಞರು, ಪ್ರಗತಿಪರ ಚಿಂತಕರು, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಇದೀಗ ಮುಂದಾಗಿದ್ದು, ಪ್ರತಿ ಕ್ಷೇತ್ರದ ಗುಂಪುಗಳ ಆಸಕ್ತಿ, ಅವಶ್ಯಕತೆಗಳನ್ನು ಪರಿಶೀಲಿಸಿ, ಸಲಹೆಗಳನ್ನು ಪಡೆದು, ಅದನ್ನು ದಾಖಲಿಸಬೇಕಾಗಿದೆ.  ಸಾಮಾನ್ಯ ಜನರ ಅಭಿಪ್ರಾಯ, ಸಲಹೆಗಳನ್ನು ಪಡೆಯುವ ಸರ್ಕಾರದ ಯತ್ನ ದೇಶದಲ್ಲಿಯೇ ಇದೇ ಮೊದಲಾಗಿದೆ.  ಜನರ ನಡುವೆ ಕುಳಿತು, ಅವರಿಂದ ಭವಿಷ್ಯದಲ್ಲಿ ನಮ್ಮ ರಾಜ್ಯ, ಜಿಲ್ಲೆ ಹೀಗೆಯೇ ಅಭಿವೃದ್ಧಿ ಹೊಂದಬೇಕೆಂಬುದರ ಬಗ್ಗೆ ಸಲಹೆಗಳನ್ನು ಪಡೆದು, ವಿಷನ್ ೨೦೨೫ ಡಾಕ್ಯುಮೆಂಟ್ ತಯಾರಿಸಲಾಗುತ್ತಿದೆ.  ಈಗಾಗಲೆ ರಾಜ್ಯದ ೨೫ ಜಿಲ್ಲೆಗಳಲ್ಲಿ ಅಭಿಪ್ರಾಯ, ಸಲಹೆಗಳ ಸಂಗ್ರಹಣೆ ಆಗಿದ್ದು, ಕೊಪ್ಪಳ ಜಿಲ್ಲೆ ೨೬ ನೇ ಜಿಲ್ಲೆಯಾಗಿದೆ.  ಪ್ರತಿಯೊಂದು ಜಿಲ್ಲೆಗಳಿಂದಲೂ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಸಂಗ್ರಹಿಸಿ, ಪ್ರತಿಯೊಂದು ಕ್ಷೇತ್ರಕ್ಕೂ ಪ್ರತ್ಯೇಕವಾಗಿ ಕರಡನ್ನು ಸಿದ್ಧಪಡಿಸಿ, ಉನ್ನತ ಮಟ್ಟದ ಅಧಿಕಾರಿಗಳ ಮಟ್ಟದಲ್ಲಿ ಕರಡನ್ನು ಪರಿಶೀಲಿಸಿ, ಹೆಚ್ಚುವರಿಯಾಗಿ ಅಭಿವೃದ್ಧಿಗೆ ಅಗತ್ಯ ಸಲಹೆಗಳಿದ್ದಲ್ಲಿ ಅವುಗಳನ್ನೂ ಸಹ ಸೇರ್ಪಡೆ ಮಾಡಲಾಗುವುದು.  ನಂತರ ಕರಡು ಯೋಜನೆಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ರಾಜ್ಯದ ಉನ್ನತ ಮಟ್ಟದ ಸಮಿತಿಗೆ ಸಲ್ಲಿಸಲಾಗುವುದು.  ಈ ಸಮಿತಿಗೆ ರಾಜ್ಯದ ಎಲ್ಲ ಸಚಿವರುಗಳು ಸದಸ್ಯರುಗಳಾಗಿದ್ದು, ಈ ಸಮಿತಿಯ ಪರಿಶೀಲನೆ ನಂತರ, ವರದಿಯು ಸಾರ್ವಜನಿಕ ದಾಖಲೆಯಾಗಿ ಹೊರ ಬರಲಿದೆ.  ಡಿಸೆಂಬರ್ ಅಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿಷನ್ ೨೦೨೫ ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರೇಣುಕಾ ಚಿದಂಬರಂ ಅವರು ಹೇಳಿದರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ವಿಷನ್ ೨೦೨೫ ಕಾರ್ಯಕ್ರಮವು ಮುಖ್ಯಮಂತ್ರಿಗಳ ದೂರದೃಷ್ಟಿ ಯೋಜನೆಯಾಗಿದ್ದು, ಈ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ದಾಪುಗಾಲು ಇಡುವ ಕಾರ್ಯಕ್ರಮ ಇದಾಗಿದೆ.  ಯಾವುದೇ ಸರ್ಕಾರ ದೂರದೃಷ್ಟಿ ಹೊಂದಿಲ್ಲದಿದ್ದರೆ, ರಾಜ್ಯದ ಅಭಿವೃದ್ಧಿ ಕೈಗೊಳ್ಳಲು ಕಷ್ಟ ಸಾಧ್ಯ.  ಜನರೊಂದಿಗೆ ಚರ್ಚೆ ಮಾಡಿ, ಇಂತಹ ವರದಿ ಸಿದ್ಧಪಡಿಸಲು ಹೊರಟಿರುವುದು ದೇಶದಲ್ಲೇ ಮೊದಲ ರಾಜ್ಯವಾಗಿದೆ.  ಈ ಹಿಂದೆ ಸಾರ್ವಜನಿಕರೊಂದಿಗೆ ಚರ್ಚಿಸಿಯೇ ೩೭೧(ಜೆ) ಕಲಂ ತಿದ್ದುಪಡಿ ಮಾಡಲಾಗಿತ್ತು.  ಕೊಪ್ಪಳದಲ್ಲಿ ಕೆರೆ ತುಂಬಿಸುವ ಯೋಜನೆಗಳು, ಶಾಶ್ವತ ಕುಡಿಯುವ ನೀರಿನ ಯೋಜನೆಗಳು ಕೂಡ ಇಂತಹ ದೂರದೃಷ್ಟಿ ಯೋಜನೆಗಳಾಗಿದ್ದು, ನಮ್ಮ ಸರ್ಕಾರ ಇಂತಹ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪ ವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಸೇರಿದಂತೆ ಹಲವು ಅಧಿಕಾರಿಗಳು, ನಾನಾ ತಾಲೂಕುಗಳಿಂದ ಆಗಮಿಸಿದ್ದ ಜನಪ್ರತಿನಿಧಿಗಳು, ಪ್ರಗತಿಪರ ಚಿಂತಕರು, ರೈತರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಕಾರ್ಯಕ್ರಮ ನಿರೂಪಿಸಿದರು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ವಂದಿಸಿದರು.  ಉದ್ಘಾಟನಾ ಸಮಾರಂಭದ ಬಳಿಕ, ಜಿಲ್ಲಾಡಳಿತ ಭವನದ ಹಲವು ಸ್ಥಳಗಳಲ್ಲಿ ವಿವಿಧ ಕ್ಷೇತ್ರವಾರು, ಸಾರ್ವಜನಿಕರು, ತಜ್ಞರೊಂದಿಗೆ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಅಗತ್ಯವಿರುವ ಸಲಹೆ, ಸೂಚನೆಗಳು, ಅಭಿಪ್ರಾಯಗಳ ಸಂಗ್ರಹಣೆಗೆ ಗುಂಪು ಚರ್ಚೆಗಳು ಜರುಗಿದವು.

Please follow and like us:
error