ರಾಜಕೀಯ ಪಕ್ಷದ ಕಛೇರಿಯಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ : ಖಂಡನೆ

ಕೊಪ್ಪಳ : ಜಂಗಮರ ಕಲ್ಗುಡಿಯಲ್ಲಿ ನಡೆದಿರುವ ಗಂಗಾವತಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಗಂಗಾವತಿಯ ಬಿ.ಜೆ.ಪಿ. ಪಕ್ಷದ ಕಛೇರಿಯಲ್ಲಿ ಬಿಡುಗಡೆ ಮಾಡಿರುವುದಕ್ಕೆ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿ ಹನುಮಂತಪ್ಪ ಅಂಡಗಿ ಚಿಲವಾಡಗಿ ಖಂಡಿಸಿದ್ದಾರೆ. ಈ ಕುರಿತು ಅಧಿಕೃತ ಪತ್ರಿಕಾ ಹೇಳಿಕೆ ನೀಡಿರುವ ಅವರು ಗಂಗಾವತಿಯಲ್ಲಿ ಮಾಜಿ ಸಚಿವರಾದ ಇಕ್ಬಾಲ ಅನ್ಸಾರಿಯವರ ಅವಧಿಯಲ್ಲಿ ಭವ್ಯವಾದ ಕನ್ನಡ ಸಾಹಿತ್ಯ ಭವನವಿದೆ. ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್.ಬಿ.ಗೊಂಡಬಾಳ ಅವರು ಕನ್ನಡ ಸಾಹಿತ್ಯ ಭವನದಲ್ಲಿಯೇ ಬಿಡುಗಡೆ ಮಾಡಬೇಕಿತ್ತು. ಅದರ ಬದಲಾಗಿ ಗಂಗಾವತಿಯ ಬಿ.ಜೆ.ಪಿ. ಪಕ್ಷದ ಕಛೇರಿಯಲ್ಲಿ ಬಿಡುಗಡೆ ಮಾಡಿರುವುದು ಖೇದಕರ ಸಂಗತಿ. ಒಂದು ಗುಂಪಿನ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಿಕೊಂಡಿರುವ ಶರಣೇಗೌಡರು ಕೂಡ ಈ ಸಂದರ್ಭದಲ್ಲಿ ಹಾಜರಿದ್ದಾರೆ. ಶರಣೇಗೌಡರಿಗೂ ಕೂಡ ಕನ್ನಡ ಸಾಹಿತ್ಯ ಪರಿಷತ್ತು ಹೊಸ ಕ್ಷೇತ್ರವಾಗಿದೆ. ಅವರಿಗೂ ಕೂಡ ಕನ್ನಡ ಸಾಹಿತ್ಯ ಪರಿಷತ್ತಿನ ಗಂಧ ಗಾಳಿಯೂ ಗೊತ್ತಿಲ್ಲದೇ ಅಭ್ಯರ್ಥಿಯಾಗಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಇಂತಹವರಿಂದ ಕನ್ನಡ ಸಾಹಿತ್ಯ ಪರಿಷತ್ತು ಉದ್ಧಾರವಾಗುವುದು ಕನಸಿನ ಮಾತಾಗಿದೆ. ಇಂತಹ ಅವಘಡಗಳಿಗೆ ಕಾರಣರಾದ ಗಂಗಾವತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್.ಬಿ.ಗೊಂಡಬಾಳ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರಾಜಶೇಖರ ಅಂಗಡಿಯವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕು ಎಂದು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿ ಹನುಮಂತಪ್ಪ ಅಂಡಗಿ ಚಿಲವಾಡಗಿ ಒತ್ತಾಯಿಸಿದ್ದಾರೆ.
ಕನ್ನಡ ಬಾವುಟವನ್ನು ಅ.ನ.ಕೃಷ್ಣರಾಯರು, ನಾಡಿಗೇರ ಕೃಷ್ಣರಾಯರು, ತ.ರಾ.ಸು., ಎಂ.ರಾಮಮೂರ್ತಿ ಅವರು ಕನ್ನಡ ಭಾವುಟ ಅಸ್ತಿತ್ವಕ್ಕೆ ಬರಲು ಹೋರಾಟ ಮಾಡಿದ್ದಾರೆ. ವಾಟಾಳ್ ನಾಗರಾಜ, ಸಾ.ರಾ.ಗೋವಿಂದ, ಡಾ.ರಾಜಕುಮಾರ ಅಭಿಮಾನಿಗಳ ಬಳಗವು ಕನ್ನಡ ಬಾವುಟವನ್ನು ಕನ್ನಡಿಗರೆಲ್ಲರೂ ಹಾರಿಸುವ ವ್ಯವಸ್ಥೆ ಮಾಡಿದರು. ಕನ್ನಡದ ಬಾವುಟದಲ್ಲಿ ಹಳದಿ ಬಣ್ಣ ಮೇಲೆ, ಕೆಂಪು ಬಣ್ಣ ಕೆಳಗೆ ಇರಬೇಕೆಂದು ನಿಗಧಿಪಡಿಸಲಾಗಿದೆ. ಆದರೆ ಕನಕಗಿರಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಯ ಸಂದರ್ಭದಲ್ಲಿ ಹಳದಿ ಬಣ್ಣವನ್ನು ಕೆಳಗೆ ಮಾಡಿ, ಕೆಂಪು ಬಣ್ಣವನ್ನು ಮೇಲೆ ಮಾಡಿದ ಧ್ವಜವಿರುವ ಲಾಂಛನವನ್ನು ಬಿಡುಗಡೆ ಮಾಡಿ ಕನ್ನಡ ಬಾವುಟಕ್ಕೆ ಅವಮಾನ ಮಾಡಿರುವುದು ನೋವಿನ ಸಂಗತಿ. ಕನಕಗಿರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೆಹಬೂಬ ಹುಸೇನ ಅವರು ಈ ಅವಘಡಕ್ಕೆ ಕಾರಣರಾಗಿದ್ದಾರೆ. ಮೆಹಬೂಬ ಹುಸೇನ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು.
ಇಲ್ಲಿಯವರೆಗೆ ಮಲಗಿಕೊಂಡಿದ್ದ ಜಿಲ್ಲಾ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತುಗಳು ಈಗ ದಿಡೀರನೆ ಎದ್ದು ಕುಂತು ಒಂದು ತಿಂಗಳ ಅವಧಿಯ ಒಳಗಾಗಿ ಜಿಲ್ಲಾ ಮತ್ತು ಎಲ್ಲಾ ತಾಲೂಕಗಳ ಸಮ್ಮೇಳನಗಳನ್ನು ಕೇವಲ ಸರಕಾರದ ಅನುದಾನ ಖರ್ಚು ಮಾಡುವುದಕ್ಕಾಗಿಯೇ ಎನ್ನುವಂತಿದೆ. ರಾಜ್ಯ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ವೇಳಾಪಟ್ಟಿ ಘೋಷಣೆಯಾದ ನಂತರ ಈ ಸಮ್ಮೇಳನಗಳನ್ನು ಸಂತೆಯಲ್ಲಿ ಮೂರುಮೊಳ ನೆಯ್ದಂತೆ ಎನ್ನುವಂತೆ ಅವಸರಕ್ಕೆ ಬಿದ್ದು ಇಂತಹ ಅವಘಡಗಳನ್ನು ಮಾಡುತ್ತಿದ್ದಾರೆ.

ಕನ್ನಡ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರಾಜಶೇಖರ ಅಂಗಡಿಯವರು ಹಿಂದೊಮ್ಮೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ಯಾಂಪುರದ ಡಾ.ಸಿದ್ಧಯ್ಯ ಪುರಾಣಿಕರ ಕಾವ್ಯನಾಮ ‘ಕಾವ್ಯಾನಂದ’ ಎನ್ನುವುದರ ಬದಲಾಗಿ ‘ಆನಂದ ಕಂದ’ ಎಂದು ಸಂಬೋಧಿಸಿದ್ದರು. ‘ಶ್ರೀಮನ್ನಿರಂಜನ ಪ್ರಣವ ಸ್ವರೂಪಿ’ ಬದಲಾಗಿ ‘ಶ್ರೀಮನ್ನಿರಂಜನ ಪ್ರಣವ ಮುಖರ್ಜಿ’ ಎಂದು ಸಂಬೋಧಿಸಿದ್ದರು. ಇಂತಹ ಕನ್ನಡ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರಾಜಶೇಖರ ಅಂಗಡಿಯವರ ಮೊಂಡಾಟವನ್ನು ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಇನ್ನುಮುಂದೆ ಸಹಿಸಿಕೊಳ್ಳಲು ಸಾಧ್ಯವಿಲ್ಲದೇ ಅವರು ನಿಲ್ಲಿಸಿದ ಅಭ್ಯರ್ಥಿಯನ್ನು ಹೀನಾಯವಾಗಿ ಸೋಲಿಸುವುದರ ಮೂಲಕ ಸೇಡು ತೀರಿಸಿಕೊಳ್ಳಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿ ಹನುಮಂತಪ್ಪ ಅಂಡಗಿ ಚಿಲವಾಡಗಿ ಅಭಿಪ್ರಾಯಪಟ್ಟಿದ್ದಾರೆ.

Please follow and like us:
error