Kannadanet NEWS ಬಾಯಿ ಚಪಲಕ್ಕೆ ಮಾತನಾಡುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಕೂಡಲೇ ಪಕ್ಷದಿಂದ ಕಿತ್ತುಹಾಕಬೇಕು ಎಂದು ನಾನು ಪಕ್ಷದ ರಾಜ್ಯಾಧ್ಯಕ್ಷರಿಗೆ ಒತ್ತಾಯ ಮಾಡುತ್ತೇನೆ. ಅಯೋಗ್ಯ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಕೊಪ್ಪಳದ ಶಿವಶಾಂತವೀರ ಮಂಗಲ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಮುಖರ ಸಭೆಯಲ್ಲಿ ಬುಧವಾರ ಮಾತನಾಡಿದರು.
ಇತ್ತೀಷೆಗಷ್ಟೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿದೆ. ಸಭೆಯಲ್ಲಿ ಎಲ್ಲ ಶಾಸಕರ ಕುಂದು ಕೊರತೆ ಸಮಸ್ಯೆ ಏನಿವೆ ಚರ್ಚಿಸಿ ಅಂತಾ ಕೇಳಿದ್ದೇವೆ. ಆ ಸಭೆಗೆ ಅವರೂ(ಯತ್ನಾಳ) ಹಾಜರಾಗಿದ್ದರು. ಸಭೆಯಲ್ಲಿ ಬಾಯಿ ಮುಚ್ಚಿಕೊಂಡು ಕುಳಿತಿದ್ದ ಯತ್ನಾಳ ಉತ್ತರ ಪೌರುಷದಂತೆ ಹೀಗೆ ಮಾತಾಡಿದ್ರೆ ಹೇಗೆ? ಅದಕ್ಕೆ ನಾನು ಯತ್ನಾಳ ಅವರದ್ದು ಫೂಲೀಶ್ ಹೇಳಿಕೆ ಅಂತಾ ಹೇಳಿದ್ದು ಎಂದು ಸ್ವ ಪಕ್ಷೀಯ ಶಾಸಕರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದಲ್ಲಿ ಇದ್ದುಕೊಂಡು ಶಿಸ್ತಿಗೆ ಭಂಗ ತರುವ ಕೆಲಸ ಸರಿಯಲ್ಲ. ಯತ್ನಾಳ ವಿರುದ್ಧ ರಾಜ್ಯಾಧ್ಯಕ್ಷರು ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ನಾವು ಅಂದರೆ ಬಿಜೆಪಿಯವರು ಶಿಸ್ತಿನ ಸಿಪಾಯಿಗಳಾಗಿರಬೇಕು ಎಂದರು.
ಎರಡು ಅಸೆಂಬ್ಲಿ, ನಾಲ್ಕು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಮುಂದಿನ ದಿಕ್ಸೂಚಿ ಎಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ಹೇಳಿಕೆಯನ್ನು ಸವಾಲಾಗಿ ಬಿಜೆಪಿ ಸ್ವೀಕರಿಸುತ್ತದೆ. ಫಲಿತಾಂಶ ಕಾದು ನೋಡಿ ದಿಕ್ಸೂಚಿ ಯಾವ ಕಡೆ ಇದೆ ಅಂತ ಗೊತ್ತಾಗುತ್ತೆ ಎಂದು ಹೇಳಿದರು. ನಮಗೆ ನೂರಕ್ಕೆ ನೂರು ವಿಶ್ವಾಸ ಇದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆದ್ದೇ ಗೆಲ್ಲುತ್ತಾರೆ. ಎರಡನೇ ಬಾರಿ ಮತದಾರರನ್ನ ಭೇಟಿ ಮಾಡಿದ್ದೇನೆ. ಕಾಂಗ್ರೆಸ್ನ ಯಾರಾದರೂ ಒಮ್ಮೆಯಾದರೂ, ಒಬ್ಬರನ್ನಾದರೂ ಭೇಟಿ ಮಾಡಿದಾರಾ? ಎಂದು ಪ್ರಶ್ನಿಸಿದರು.