ಮೋದಿ ಸಾಯಲಿ ಎಂದವರನ್ನು ಮನೆಗೆ ಕಳಿಸಿ: ಸಂಗಣ್ಣ ಕರಡಿ

ಕೃಷ್ಣಾ ಬಿ ಸ್ಕೀಂ ಯೋಜನೆಗಳ ಜಾರಿಗೆ ಬಿಜೆಪಿ ಆಗ್ರಹ | ಅಭಿವೃದ್ಧಿ ನಿರ್ಲಕ್ಷ್ಯಿಸಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಕುಷ್ಟಗಿ: ಜನಪರ ಕೆಲಸಗಳ ಮೂಲಕ ನವಚೈತನ್ಯ ಮೂಡಿಸುತ್ತಿರುವ ಹಾಗೂ ಜಾಗತಿಕ ನಾಯಕರಾಗಿ ಹೊಮ್ಮಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸಾಯಲಿ ಎಂದು ಹೇಳಿದವರನ್ನು ಜನತೆ ಮನೆಗೆ ಕಳಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಕೃಷ್ಣಾ ಬಿ ಸ್ಕೀಂ ಯೋಜನೆಗಳ ಜಾರಿಗೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕುಷ್ಟಗಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಜಾಗೃತಿ ಚೈತನ್ಯ ರಥಯಾತ್ರೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಡವಿರಾಯ ದೇವಸ್ಥಾನದ ಹತ್ತಿರ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಂಗಣ್ಣ ಕರಡಿ ಅವರು ಸಂಸದರಾಗಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳ ವಿವರ ನೀಡಿದರು. ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ಕುಷ್ಟಗಿ ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ; ಕೊಪ್ಪಳ, ಮುನಿರಾಬಾದ್ ಹಾಗೂ ಗಿಣಿಗೇರಾದಲ್ಲಿ ರೈಲ್ವೆ ಮಾರ್ಗಕ್ಕೆ ಮೇಲ್ಸೇತುವೆಗಳ ನಿರ್ಮಾಣ; ಗಂಗಾವತಿಗೆ ಕೇಂದ್ರೀಯ ವಿದ್ಯಾಲಯ, ಕೊಪ್ಪಳದ ಕೇಂದ್ರೀಯ ವಿದ್ಯಾಲಯಕ್ಕೆ ನೂತನ ಕಟ್ಟಡ, ಹಲವಾರು ಹೊಸ ರೈಲ್ವೆ ಮಾರ್ಗಗಳು, ರೈಲ್ವೆ ಜೋಡಿ ಹಳಿ ನಿರ್ಮಾಣದಂತಹ ಜನಪರ ಕೆಲಸಗಳನ್ನು ಪ್ರಸ್ತಾಪಿಸಿದರು.
ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಮರೆತು ಭ್ರಷ್ಟಾಚಾರವನ್ನೇ ಏಕೈಕ ಉದ್ದೇಶವಾಗಿಟ್ಟುಕೊಂಡಿದೆ ಎಂದು ಆರೋಪಿಸಿದ ಸಂಗಣ್ಣ ಕರಡಿ, ರಾಜ್ಯಾದ್ಯಂತ ನೈಸರ್ಗಿಕ ಸಂಪತ್ತನ್ನು ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡಲಾಗುತ್ತಿದೆ. ಕೊಪ್ಪಳದಲ್ಲಿ ಸಹ ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಮರಳು ಅಕ್ರಮ ಗಣಿಗಾರಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿದ್ದಾರೆ. ರೈತರ ಬಗ್ಗೆ, ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇರದ ಇಂತಹ ವ್ಯಕ್ತಿಗಳನ್ನು ಜನತೆ ಮನೆಗೆ ಕಳಿಸಲು ಮುಂದಾಗಬೇಕು ಎಂದು ಹೇಳಿದರು.

ವ್ಯಾಪಕ ಭ್ರಷ್ಟಾಚಾರ: ತಮ್ಮ ಭ್ರಷ್ಟಾಚಾರ ಪ್ರಕರಣಗಳು ಬಯಲಿಗೆ ಬಾರದಿರಲೆಂದು ಇವರು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚುವ ಕೆಲಸ ಮಾಡಿದರು. ಸ್ವತಃ ಮುಖ್ಯಮಂತ್ರಿಯವರ ಪುತ್ರನೇ ಲ್ಯಾಬ್ ಅಕ್ರಮದಲ್ಲಿ ಸಿಕ್ಕಿಕೊಂಡ. ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಸಿ ಸಿಕ್ಕಿಬಿದ್ದರೂ, ಅವರ ವಿರುದ್ಧ ತನಿಖೆ ನಡೆಯದಂತೆ ಮಾಡಿದರು. ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಕೆಲಸ ಮಾಡಿದರು. ಇಂತಹ ಭ್ರಷ್ಟ ವ್ಯಕ್ತಿಗಳು ಮತ್ತು ಸರ್ಕಾರವನ್ನು ಮನೆಗೆ ಕಳಿಸಲು ಜನತೆ ಮುಂದಾಗಬೇಕು ಎಂದು ಸಂಗಣ್ಣ ಕರಡಿ ಕರೆ ಕೊಟ್ಟರು.

೨೦೧೮ರಲ್ಲಿ ಬಿಜೆಪಿ ಸರ್ಕಾರ: ಕೃಷ್ಣೆಯ ಕಡೆಗೆ ನಮ್ಮ ನಡಿಗೆ ಎಂದು ಜನರ ಕಣ್ಣಿಗೆ ಮಂಕುಬೂದಿ ಎರಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನಂತರ ನಡೆದಿದ್ದು ಭ್ರಷ್ಟಾಚಾರದ ಕಡೆಗೆ. ಅದು ಈಗಾಗಲೇ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ೨೦೧೮ರ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಹುದ್ದೆಯಲ್ಲಿ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಕೂರಿಸಲು ಜನತೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಲಕ್ಷಣ ಸವದಿ, ಶ್ರೀರಾಮುಲು, ಗೋವಿಂದ ಕಾರಜೋಳ ಹಾಗೂ ಸಮಾರಂಭದ ಉಸ್ತುವಾರಿ ವಹಿಸಿದ್ದ ಶಾಸಕ ದೊಡ್ಡನಗೌಡ ಪಾಟೀಲ್ ಸೇರಿದಂತೆ ಹಲವಾರು ಗಣ್ಯರು ವೇದಿಕೆ ಮೇಲಿದ್ದರು.

Please follow and like us:
error