ಮೈಸೂರು ಒಕ್ಕೂಟದ ಬಳಗದವರ ‘ಚುನಾವಣೆ: ಒಳ ಹೊರಗೆ’

ಇಡಿಯ ಭಾರತದ, ಅಷ್ಟೇ ಅಲ್ಲ, ವಿಶ್ವದ ಗಮನವನ್ನೇ ಸೆಳೆದ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದೆ. ಮತ್ತೊಂದು ಚುನಾವಣೆ ಬರಲಿದೆ. ಜನಮತ ಪ್ರಜಾತಂತ್ರದ ಜೀವಾಳ, ನಿಜ. ಆದರೆ ದಿನದಿಂದ ದಿನಕ್ಕೆ ಚುನಾವಣಾ ರಾಜಕೀಯವೇಕೆ ಪ್ರಜಾಪ್ರಭುತ್ವ ಆಶಯಗಳಿಂದ ದೂರ ಸಾಗುತ್ತಿದೆ? ಏಕೆ ಮಹಿಳೆಯರನ್ನು ನಿರ್ಲಕ್ಷಿಸಲಾಗುತ್ತಿದೆ? ಮಹಿಳಾ ಪ್ರಾತಿನಿಧ್ಯವು ಸದನದಲ್ಲಿ ಹಾಗೂ ಮಂತ್ರಿಮಂಡಲದಲ್ಲಿ ಕ್ಷೀಣವಾಗಿರಲು ಕಾರಣಗಳೇನು? ಮಹಿಳೆಯರೇಕೆ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದಾರೆ? ಸೂಕ್ತ ಮಹಿಳಾ ಪ್ರಾತಿನಿಧ್ಯ ದೊರಕಿದಲ್ಲಿ ಪ್ರಜಾಪ್ರಭುತ್ವದ ಆಶಯಗಳು ಜೀವಂತವಾಗುಳಿಯಬಲ್ಲವೆ? ಹಣ-ಜಾತಿ-ಕುಟುಂಬ ಹಿನ್ನೆಲೆ ಇಲ್ಲದವರೇಕೆ ಚುನಾವಣೆಯಲ್ಲಿ ಮತಗಳಿಸಲು ವಿಫಲರಾಗುತ್ತಿದ್ದಾರೆ? ಸ್ವಾತಂತ್ರ್ಯಕ್ಕಾಗಿ ಜೀವ ಸವೆಸಿದವರು, ಸಂವಿಧಾನ ಕರ್ತೃಗಳು ಬಯಸಿದ ದಿಸೆಯಲ್ಲಿ ನಮ್ಮ ಸಮಾಜ, ಸರ್ಕಾರಗಳು ಸಾಗುತ್ತಿವೆಯೆ? ಒಬ್ಬ ಪ್ರಜೆಯಾಗಿ, ಒಬ್ಬ ಮಹಿಳೆಯಾಗಿ, ಒಬ್ಬ ಅಧಿಕಾರಿಯಾಗಿ, ಒಬ್ಬ ರಾಜಕಾರಣಿಯಾಗಿ, ಹೋರಾಟಗಾರರಾಗಿ, ಬರಹಗಾರರಾಗಿ ಚುನಾವಣೆಯ ನನ್ನ ಅನುಭವಗಳೇನು? ಚುನಾವಣೆ, ಫಲಿತಾಂಶ ಕುರಿತ ನನ್ನ ಅನಿಸಿಕೆ, ಆಶಯ, ತಕರಾರುಗಳೇನು? ಆತಂಕ ನಿವಾರಣೆಗಿರುವ ಹೊರದಾರಿಗಳಾವುವು?
ಇವೇ ಮುಂತಾದ ಹತ್ತು ಹಲವು ವಿಷಯಗಳ ಹಂಚಿಕೊಳ್ಳಲು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಕರ್ನಾಟಕದ ಕೆಲವೆಡೆಗಳಲ್ಲಿ ‘ಚುನಾವಣೆ: ಒಳ ಹೊರಗೆ’ ಎಂಬ ಸರಣಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಚಿಂತಕರಿಂದ ರಾಜಕೀಯ ವಿಶ್ಲೇಷಣೆ ಹಾಗೂ ಮಹಿಳಾ ಜನಪ್ರತಿನಿಧಿಗಳಿಂದ ಅನುಭವ ಕಥನಗಳನ್ನು ಹಂಚಿಕೊಳ್ಳುವಂತೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದರ ಅಂಗವಾಗಿ ಐದನೆಯ ಸಂವಾದ ಕಾರ್ಯಕ್ರಮವನ್ನು ಮೈಸೂರು ಒಕ್ಕೂಟದ ಬಳಗದವರು ಇದೇ ಆಗಸ್ಟ್ 19ರಂದು ಬೆಳಿಗ್ಗೆ 10 ಗಂಟೆಗೆ ಕಲಾ ಮಂದಿರದ ಕಿರು ರಂಗಮಂದಿರದಲ್ಲಿ ಏರ್ಪಡಿಸಿದ್ದಾರೆ. ಅಂದು ನಮ್ಮೊಡನೆ ಶ್ರೀಮತಿ ಬಿ. ಟಿ. ಲಲಿತಾ ನಾಯಕ್, ಪ್ರೊ. ಉಮಾಪತಿ, ಶ್ರೀಮತಿ ನಂದಿನಿ ಜಯರಾಂ ಅವರಲ್ಲದೆ ಮೈಸೂರಿನ ಗಣ್ಯ ಮಹಿಳಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜೊತೆಗೆ ಜಿಲ್ಲೆಯಾದ್ಯಂತ ಮತ್ತು ಹೊರಜಿಲ್ಲೆಗಳಿಂದ ಬರುವ ಸಮಾನ ಮನಸ್ಕರು ಸೇರಲಿದ್ದಾರೆ.
Please follow and like us:
error

Related posts