ಮುಂದಿನ ವರ್ಷ ಮಾದರಿ ರಾಜ್ಯಮಟ್ಟದ ವಾಲ್ಮೀಕಿ ಜಾತ್ರೆ : ಸ್ವಾಮೀಜಿ


ಕೊಪ್ಪಳ, ಮಾ. ೨೧: ಬರುವ ವರ್ಷ ರಾಜ್ಯಮಟ್ಟದ ವಾಲ್ಮೀಕಿ ಜಾತ್ರೆಯನ್ನು ಇನ್ನಷ್ಟು ಅದ್ಧೂರಿಯಾಗಿ, ಇನ್ನಷ್ಟು ವಿಶೇಷವಾಗಿ ಆಚರಿಸಲಾಗುವದು ಎಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿರುವ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ಹೇಳಿದರು.
ಅವರು ನಗರದ ವಾಲ್ಮೀಕಿ ಭವನದಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ವಾಲ್ಮೀಕಿ ಜಾತ್ರೆ ಲೆಕ್ಕಪತ್ರ ನೀಡುವ ಸಭೆ ಮಾತನಾಡಿದರು.
ರಾಜ್ಯದಲ್ಲಿ ನಾಲ್ಕನೆ ಅತಿ ದೊಡ್ಡ ಸಮುದಾಯವಾಗಿರುವ ವಾಲ್ಮೀಕಿ ನಾಯಕರು ದೊಡ್ಡ ಶಕ್ತಿಯಾಗಿ ಹೊರಹೊಮ್ಮಬೇಕು, ಅದಕ್ಕಾಗಿ ಇಂದಿನಿಂದಲೇ ಸನ್ನದ್ಧರಾಗಿ, ಮುಖಂಡರು ತಮ್ಮ ತಮ್ಮ ಪಕ್ಷದ ನಾಯಕರ ಮುಂದೆ ಸಮುದಾಯದ ಪ್ರಮುಖ ಬೇಡಿಕೆಗಳಾದ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದ ೭.೫% ಮೀಸಲಾತಿ, ಕೇಂದ್ರದಲ್ಲಿ ಸಚಿವ ಸ್ಥಾನ ಮತ್ತು ರಾಜ್ಯದ ೨೦೨೩ರ ಚುನಾವಣೆಯಲ್ಲಿ ಸಮುದಾಯದವರನ್ನ ಮುಖ್ಯಮಂತ್ರಿ ಮಾಡುವ ಕುರಿತು ಸಿದ್ಧತೆಯನ್ನು ಮಾಡಬೇಕು, ಸಮುದಾಯ ಪ್ರತಿ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದರು.
ಸಮಾಜದ ಮಠ ಕರೆ ನೀಡಿದ ತಕ್ಷಣ ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧಗೊಳ್ಳಬೇಕು, ಎಲ್ಲರೂ ಒಗ್ಗೂಡಿ ನಡೆಯಬೇಕು, ರಾಜಕೀಯವನ್ನು ತಮ್ಮ ಪಕ್ಷದಲ್ಲಿ ಮಾತ್ರ ಇಟ್ಟುಕೊಂಡು ಸಮಾಜದ ಕೆಲಸಕ್ಕೆ ಒಗ್ಗಟ್ಟಾಗಿ ನಿಲ್ಲಬೇಕು ಎಂದರು. ಅದೇ ರೀತಿ ಯಾರೇ ಸಮುದಾಯವನ್ನು ಗಡೆಗಣಿಸಿದರೂ, ಮಾಧ್ಯಮ ಅಲಕ್ಷ ಮಾಡಿದರೂ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ಮಠದ ಕರೆಗೆ ಓಗೊಟ್ಟು ರಾಜ್ಯದಲ್ಲಿ ಜಾತ್ರೆಗೆ ಕೊಪ್ಪಳ ಜಿಲ್ಲೆಯಿಂದ ದವಸ ಧಾನ್ಯಗಳು ಹಾಗೂ ಸುಮಾರು ೮ ಲಕ್ಷ ದೇಣಿಗೆ ಬಂದಿದೆ, ಅದೇ ರೀತಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಸೇರಿ ಸುಮಾರು ೩ ಕೋಟಿ ದೇಣಿಗೆ ಬಂದಿದೆ, ಅದರಲ್ಲಿ ಸುಮಾರು ೧ ಕೋಟಿ ೧೭ ಲಕ್ಷ ಜಾತ್ರೆಗೆ ಖರ್ಚಾಗಿದ್ದು ಉಳಿದ ಹಣವನ್ನು ಮಠದ ಖಾತೆಯಲ್ಲಿ ಜಮಾ ಮಾಡಲಾಗಿದೆ. ರಾಜ್ಯ ಸಮಿತಿಯ ಸಭೆಯಲ್ಲಿ ಉಳಿದ ಹಣವನ್ನು ಯಾವ ರೀತಿ ಸದ್ವಿನಿಯೋಗ ಮಾಡಬೇಕು ಎನ್ನುವ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವದು ಎಂದರು.
ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಟಿ. ರತ್ನಾಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ರಾಮಣ್ಣ ಚೌಡ್ಕಿ, ಗಂಗಾವತಿಯ ಮಾಜಿ ನಗರಸಭೆ ಅಧ್ಯಕ್ಷ ಬಸಪ್ಪ ನಾಯಕ್, ಸದಸ್ಯ ವೀರಭದ್ರಪ್ಪ ನಾಯಕ, ಚೌಡ್ಕಿ ಹನುಮಂತಪ್ಪ, ಮಲ್ಲೇಶಪ್ಪ ಹೊಸಮಲೆ, ಕನಕಗಿರಿ ಮಾಜಿ ಜಿ. ಪಂ. ಸದಸ್ಯ ಹನುಮೇಶ ನಾಯಕ, ಯಲಬುರ್ಗಾದ ಹಂಚ್ಯಾಳಪ್ಪ ತಳವಾರ, ಎಪಿಎಂಸಿ ಮಾಜಿ ಅಧ್ಯಕ್ಷ ಮಾನಪ್ಪ ಪೂಜಾರ್, ಸಂಜೀವಕುಮಾರ ನಾಯಕ್, ಕೊಪ್ಪಳದ ಶರಣಪ್ಪ ನಾಯಕ, ರುಕ್ಮಣ್ಣ ಶಾವಿ, ಸುರೇಶ ಡೊಣ್ಣಿ, ಗ್ರಾ. ಪಂ. ಅಧ್ಯಕ್ಷ ಯಮನೂರಪ್ಪ ನಾಯಕ, ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ವೈದ್ಯ ಡಾ. ಜಗನ್ನಾಥ, ಶ್ರೀನಿವಾಸ ಪೂಜಾರ, ಶರಣಗೌಡ ನಾಯಕ್ ಇತರರು ಇದ್ದರು. ಆರಂಭದಲ್ಲಿ ವಾಲ್ಮೀಕಿ ಮತ್ತು ಹನುಮ ಶ್ಲೋಕವನ್ನು ಸಾಮೂಹಿಕವಾಗಿ ಪಠಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಾಜದ ಎಲ್ಲಾ ಕಾರ್ಯಕ್ರಮಗಳ ಆರಂಭದಲ್ಲಿ ಈ ಶ್ಲೋಕಗಳನ್ನು ಹೇಳಿ ಆರಂಭಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.

Please follow and like us:
error