ಮಹಿಳೆ ಕೇವಲ ಮನೆಯ ಕೆಲಸಕ್ಕೆ ಎಂಬ ಭ್ರಮೆಯಿಂದ ಹೊರಬನ್ನಿ : ಗೊಂಡಬಾಳ

ಕೊಪ್ಪಳ, ಮಾ. ೧೩: ಮಹಿಳೆ ಕೇವಲ ಮನೆಯ ಕೆಲಸಕ್ಕೆ ಎಂಬ ಭ್ರಮೆಯಿಂದ ಹೊರಬಂದು ಸ್ವಂತದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು, ಹಾಗಂತ ಮನೆಯವರನ್ನು ಧಿಕ್ಕರಿಸಬಾರದು ಎಂದು ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಹೇಳಿದರು.
ಅವರು ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಭಾಗ್ಯನಗರ ಇನ್ನರ್‌ವ್ಹೀಲ್ ಕ್ಲಬ್ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ಸಮಾಜ ಮುಖಿ ಚಿಂತನೆ ಇವತ್ತು ಅತ್ಯಂತ ತುರ್ತು ಅವಶ್ಯಕವಾಗಿದೆ, ಮಹಿಳೆಗೆ ಒಂದು ಯೋಜನೆ ಜಾರಿಗೆ ತಂದ ಮಾತ್ರಕ್ಕೆ ಅದರಿಂದ ಪ್ರಯೋಜನವಾಗದು, ಅದನ್ನು ಸರಿಯಾದ ರೀತಿಯಲ್ಲಿ ಸರಕಾರ ಜಾರಿಗೆ ತರಬೇಕು ಇಲ್ಲವಾದಲ್ಲಿ ಅದು ಪ್ರಯೋಜನಕ್ಕೆ ಬಾರದು, ಶೇ. ೪೮ ರಷ್ಟಿರುವ ಮಹಿಳೆಯರಿಗೆ ಅರೆಕಾಸಿನ ಮಜ್ಜಿಗೆಯ ತಂಪನ್ನು ಸರಕಾರಗಳು ಎರಚುತ್ತಿರುವದನ್ನು ಖಂಡಿಸಬೇಕಿದೆ, ಮಹಿಳೆ ಎಂದರೆ ಅಲ್ಲಿ ಮಹಿಳೆಯಷ್ಟೇ ಹೊರತು ರಾಜಕಾರಣ, ಪಕ್ಷವಲ್ಲ, ಎಲ್ಲಾ ಜಾತಿ ಧರ್ಮ ಮೀರಿ ಮಹಿಳೆಯರು ಒಂದು ಧ್ವನಿಯಾಗಬೇಕಿದೆ ಎಂದರು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಮಹಿಳೆ ಓದಿನಲ್ಲಿ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.
ಎಎಸ್‌ಐ ಉಮೆರಾಬಾನು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಪಾನಘಂಟಿ, ಕಾರ್ಯದರ್ಶಿ ಸುನಿತಾ ಅಂಟಾಳಮರದ, ಸಮಾಜ ಸೇವಕಿ ಕೋಮಲಾ ಕುದರಿಮೋತಿ, ಡಾ. ಶೈಲಜಾ ಇನಾಮ್‌ದಾರ್, ಶಾಂತಾ ಸಂಕಲಾಪೂರ್, ಯುವ ಉದ್ಯಮಿ ಭಾರತಿ ಗುಡ್ಲಾನೂರ್ ಇತರರು ಇದ್ದರು. ಸ್ವಾಗತ ಸುವರ್ಣ ಘಂಟಿ ಮಾಡಿದರು, ಶ್ವೇತಾ ಗುಗ್ಗರಿ ನಿರೂಪಿಸಿದರು, ಸುಮಾ ಮಹೇಶ್ ವಂದಿಸಿದರು. ಇದೇ ವೇಳೆ ಪುಷ್ಟ ಅಲಂಕಾರಿಕ ಪ್ರದರ್ಶನ ಮತ್ತು ಪುಷ್ಟ ರಂಗೋಲಿ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.

Please follow and like us:
error