ಮರೆಯಾದ ‘ಮಿಷನ್-150’ರ ಮಾತು!

ಕು.ಸ.ಮಧುಸೂದನ, ರಂಗೇನಹಳ್ಳಿ

ಇತ್ತೀಚಿನವರೆಗೂ ಮಿಷನ್ 150ರ ಬಗ್ಗೆ ಮಾತನಾಡುತ್ತಿದ್ದ ಭಾಜಪದ ಆತ್ಮವಿಶ್ವಾಸ ನಿಧಾನವಾಗಿ ಕುಸಿದುಹೋಗುತ್ತಿರುವಂತೆ ಕಾಣುತ್ತಿದೆ.  2014ರ ಸಾರ್ವತ್ರಿಕ ಚುನಾವಣೆಗಳ ಭಾರೀ ದಿಗ್ವಿಜಯದ ನಂತರ ಒಂದಾದಮೇಲೆ ಒಂದರಂತೆ ಒಂದೊಂದೇ ರಾಜ್ಯಗಳನ್ನು ಗೆಲ್ಲುತ್ತಾ ಬಂದ ಭಾಜಪಕ್ಕೆ ಕರ್ನಾಟಕವನ್ನು ಸಹ ಸುಲಭವಾಗಿ ಗೆಲ್ಲುವ ಭಾರೀ ನಿರೀಕ್ಷೆ ಇತ್ತು. ನರೇಂದ್ರ ಮೋದಿಯವರ ನಾಮಬಲವೇ ತಮ್ಮನ್ನು ಗೆಲ್ಲಿಸುತ್ತದೆಯೆಂಬ ಭ್ರಮಾಲೋಕದಲಿದ್ದ ಭಾಜಪಕ್ಕೆ ಇದೀಗ ವಾಸ್ತವ ಅರ್ಥವಾಗುತ್ತಿದೆ.ಅದಕ್ಕೆ ತಕ್ಕಂತೆ ರಾಜ್ಯದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ ಬಹುತೇಕ ಸಂಸ್ಥೆಗಳು ಮತ್ತು ಮಾಧ್ಯಮಗಳು ಕರ್ನಾಟಕ ಮುಂದಿನ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆಗೆ ಸಾಕ್ಷಿಯಾಗಲಿದೆ ಎನ್ನುವಂತಹ ವರದಿಗಳನ್ನು ನೀಡಿವೆ. ಹಾಗಿದ್ದರೆ ಉತ್ತರಪ್ರದೇಶದಂತಹ ರಾಜ್ಯದಲ್ಲಿಯೇ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಅಬ್ಬರಕ್ಕೆ ಸಿಲುಕಿ ಸುಮಾರು ಎರಡು ದಶಕಗಳ ಕಾಲ ಅಧಿಕಾರದ ಸಮೀಪಕ್ಕೂ ಬರಲಾಗದಂತಹ ಸ್ಥಿತಿಯಲ್ಲಿದ್ದ ಭಾಜಪ ಮೊನ್ನೆಯ ಚುನಾವಣೆಯಲ್ಲಿ ಅದ್ಭ್ಬುತ ಗೆಲುವು ಸಾಧಿಸಿರಬೇಕಾದರೆ ಕೇವಲ ನಾಲ್ಕೂವರೆ ವರ್ಷಗಳ ಹಿಂದಿನವರೆಗೂ ಅಧಿಕಾರದಲ್ಲಿದ್ದ ಕರ್ನಾಟಕದಲ್ಲಿ ಯಾಕೆ ಗೆಲ್ಲುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಸಿಗುವುದು ಹಲವು ಕಾರಣಗಳು. ಅವನ್ನು ಒಂದೊಂದಾಗಿ ನೋಡೋಣ:

ಅಧಿಕೃತ ವಿರೋಧ ಪಕ್ಷವಾಗಿ ವಿಫಲವಾಗಿದ್ದು!

ಒಂದು ಅಧಿಕೃತ ವಿರೋಧಪಕ್ಷವಾಗಿ ಸಿದ್ದರಾಮಯ್ಯನವರ ಸರಕಾರವನ್ನು ವಿರೋಧಿಸಿ ನಿಲ್ಲುವ ನೈತಿಕತೆಯನ್ನು ಕಳೆದುಕೊಂಡಿದ್ದ ಭಾಜಪ ವಿಧಾನಸಭೆಯಲ್ಲಿ ಮತ್ತು ಹೊರಗೆ ಜನರ ಮಧ್ಯದಲ್ಲಿ ಚರ್ಚಿಸಬೇಕಾಗಿದ್ದ ಹಲವಾರು ವಿಚಾರಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡಲು ವಿಫಲವಾಗುತ್ತ ಹೋಯಿತು. ಮೊದಲೆರಡು ವರ್ಷಗಳಲ್ಲಿ ಭಾಜಪ ಯಾವುದೇ ಸಮಸ್ಯೆಯನ್ನು ಗಂಭೀರವಾಗಿ ಬಳಸಿಕೊಂಡು ಹೋರಾಟ ಮಾಡಲು ಸಿದ್ದತೆ ನಡೆಸುವುದರಲ್ಲಿಯೇ ವಿಫಲವಾಯಿತು. ತದನಂತರ ಸರಕಾರದ ಕೆಲವು ಸಚಿವರ ಮೇಲೆ ಹಾಗೂ ಉನ್ನತ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಾಗಲೂ ಅದನ್ನು ವಿರೋಧಿಸುವ ಎದೆಗಾರಿಕೆ ತೋರಲು ಭಾಜಪ ವಿಫಲವಾಗುತ್ತಾ ಹೋಯಿತು ಇಂತಹ ಆರೋಪಗಳನ್ನು ಮಾಡ ಹೊರಟಾಗಲೆಲ್ಲ ಸಿದ್ದರಾಮಯ್ಯನವರು ಯಡಿಯೂರಪ್ಪನವರು ಮತ್ತವರ ಕೆಲವು ಸಚಿವ ಸಹೋದ್ಯೋಗಿಗಳು ಜೈಲಿಗೆ ಹೋಗಿದ್ದ ವಿಷಯವನ್ನು ಪ್ರಸ್ತಾಪಿಸುತ್ತಾ ಭಾಜಪದ ನಾಯಕರ ಬಾಯಿ ಮುಚ್ಚಿಸುತ್ತಲೇ ಬಂದರು. ಒಂದು ಸರಕಾರದ ಭ್ರಷ್ಟಾಚಾರ ಹಗರಣಗಳ ಬಗ್ಗೆ ಹೋರಾಟ ನಡೆಸಲು ಕಳಂಕರಹಿತ ನಾಯಕತ್ವದ ಅಗತ್ಯ ಬಹಳ ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಭಾಜಪ ಎಡವಿತೆಂದೇ ಹೇಳಬಹುದು. ಲಿಂಗಾಯುತ ಮತಬ್ಯಾಂಕ್‌ನ ಮೇಲೆ ಕಣ್ಣಿಟ್ಟು ಯಡಿಯೂರಪ್ಪನವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಅದಕ್ಕೆ ಈ ವಿಷಯದಲ್ಲಂತೂ ತಿರುಗುಬಾಣವಾಗುತ್ತಾ ಹೋಯಿತು. ನಂತರ ನಡೆದ ಸಚಿವ ಡಿ.ಕೆ.ಶಿವಕುಮಾರ್ ಮನೆಯ ಮೇಲಿನ ಆದಾಯ ತೆರಿಗೆ ದಾಳಿಯೂ ಭಾಜಪದ ಕೈ ಹಿಡಿಯುವಲ್ಲಿ ವಿಫಲವಾಯಿತು. ದಾಳಿಯ ಸಮಯ ಸ್ವತ: ಭಾಜಪಕ್ಕೇನೇ ಮುಜುಗರ ತರುವಂತೆ ಆಯಿತು. ಇನ್ಯಾವುದೇ ಸಂದರ್ಭದಲ್ಲಿ ಆ ದಾಳಿ ನಡೆದಿದ್ದರೆ ಜನರಲ್ಲಿ ಕಾಂಗ್ರೆಸ್ ಸಚಿವರ ಭ್ರಷ್ಟಾಚಾರದ ಬಗ್ಗೆ ಆಕ್ರೋಶ ಉಂಟಾಗುತ್ತಿತ್ತೇನೊ!. ಆದರೆ ಗುಜರಾತಿನ ಕಾಂಗ್ರೆಸ್ ಶಾಸಕರಿಗೆ ಆಶ್ರಯ ಕೊಟ್ಟ ಸಮಯದಲ್ಲಿಯೇ ನಡೆದ ಈ ದಾಳಿ ಶಿವಕುಮಾರ್ ಬಗ್ಗೆ ಜನರಲ್ಲಿ ಸಹಾನುಭೂತಿ ಸೃಷ್ಟಿಯಾಗುವಂತೆ ಮಾಡಿತು. ಜೊತೆಗೆ ಇದು ಒಕ್ಕಲಿಗ ಸಮುದಾಯದ ಮೇಲೆ ನಡೆದಂತಹ ದಾಳಿಯೆಂಬುದು ಮತ್ತು ಶಿವಕುಮಾರ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಭಾಜಪ ಅನುಸರಿಸಿದ ತಂತ್ರಗಾರಿಕೆ ಎಂಬುದಾಗಿ ಭಾವಿಸಿದ ಜನರು ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅದೇ ವೇಳೆಗೆ ಈ ದಾಳಿಯ ಸಮಯದಲ್ಲಿ ಬಹುತೇಕ ಭಾಜಪ ನಾಯಕರು ಮೌನ ವಹಿಸಿದ್ದು ಜನರಲ್ಲಿ ಭಾಜಪದ ನೈಜ ಉದ್ದೇಶದ ಬಗ್ಗೆ ಅನುಮಾನ ಹುಟ್ಟಿಸಿತು.

ನಂತರ ನಡೆದ ಹಲವು ಅಧಿಕಾರಿಗಳ ಆತ್ಮಹತ್ಯೆಗಳ ವಿಚಾರದಲ್ಲಿಯೂ ಅವಸರಕ್ಕೆ ಬಿದ್ದ ಭಾಜಪ ತಪ್ಪು ಹೆಜ್ಜೆಗಳನ್ನು ಇಡುತ್ತಾ ಜನರ ಕಣ್ಣಲ್ಲಿ ನಗೆಪಾಟಲಿಗೆ ಈಡಾಗುತ್ತ ಹೋಯಿತು. ಉದಾಹರಣೆಗೆ ಐಎಎಸ್ ಅಧಿಕಾರಿ ಡಿ.ಕೆ.ರವಿಯವರ ಆತ್ಮಹತ್ಯೆಯ ಪ್ರಕರಣದಲ್ಲಿ ಒಂದೇ ಬಾರಿಗೆ ಅದನ್ನು ಕೊಲೆ ಎಂದು ಆರೋಪಿಸಿ ಪ್ರತಿಭಟನೆಗಳನ್ನು ಮಾಡತೊಡಗಿದ್ದು ಭಾಜಪದ ದೌರ್ಬಲ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು. ತದನಂತರದಲ್ಲಿ ಡಿವೈಎಸ್ಪಿಗಳಾದ ಕಲ್ಲಪ್ಪಮತ್ತು ಗಣಪತಿಯವರ ಆತ್ಮಹತ್ಯೆಗಳ ಪ್ರಕರಣದಲ್ಲಿಯೂ ಅದು ಅನುಸರಿಸಿದ ದ್ವಿಮುಖ ನೀತಿ ಜನರಲ್ಲಿ ಅನುಮಾನ ಹುಟ್ಟಿಸಿತು. ಅದರ ಪಕ್ಷದ ಕಾರ್ಯಕರ್ತರ ಪಾಲಿದೆ ಎನ್ನಲಾದ ಕಲ್ಲಪ್ಪನವರ ಆತ್ಮಹತ್ಯೆಯ ಬಗ್ಗೆ ಯಾವುದೇ ಮಾತನಾಡದ ಭಾಜಪ, ಗಣಪತಿಯವರ ಸಾವಿನ ಬಗ್ಗೆ ಮಾತ್ರ ರಾಜ್ಯಮಟ್ಟದಲ್ಲಿ ಪ್ರತಿಭಟನೆಗಳನ್ನು ಮಾಡಿದ್ದು ಜನರಿಗೆ ಭಾಜಪದ ಉದ್ದೇಶಗಳ ಬಗ್ಗೆ ಶಂಕೆ ಉಂಟಾಗುವಂತೆ ಮಾಡಿತು. ಈ ಪ್ರಕರಣದಲ್ಲಿ ಕೇವಲ ಸಚಿವ ಜಾರ್ಜ್ ಅವರನ್ನು ಬಲಿಪಡೆಯಲೆಂದೇ ಭಾಜಪ ಅದನ್ನು ವೈಭವೀಕರಿಸುತ್ತಿದೆಯೆಂಬ ಭಾವನೆ ಜನತೆಯಲ್ಲಿ ಮೊಳೆಯ ತೊಡಗಿತು. (ಇದೀಗ ಈ ಪ್ರಕರಣ ಸಿಬಿಐ ಕೈಲಿದೆ). ಇದೇ ರೀತಿ ಪೊಲೀಸ್ ಅಧಿಕಾರಿಣಿ ಅನುಪಮಾ ಶೆಣೈ ರಾಜೀನಾಮೆ ನೀಡಿದಾಗ ಪ್ರತಿಭಟಿಸುವ ಪ್ರಯತ್ನವನ್ನು ಭಾಜಪ ಮಾಡಿತಾದರೂ ಶೆಣೈ ನಿರ್ಧಾರದ ಹಿಂದೆ ಭಾಜಪದ ಕೆಲವು ನಾಯಕರೇ ಇದ್ದಾರೆಂಬುದು ಜನಜನಿತ ವಾಗಿ ಅದೂ ಕೆಲಸಕ್ಕೆ ಬಾರದೇ ಹೋಯಿತು.

ನಂತರ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮುಖ್ಯಮಂತ್ರಿಗಳು ಆ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದಾಗ ತಕ್ಷಣಕ್ಕೆ ಯಾವುದೇ ಒಂದು ನಿಲುವನ್ನು ಪ್ರಕಟಿಸಿ ಆ ಸಮುದಾಯದ ವಿಶ್ವಾಸ ಗಳಿಸಲು ಭಾಜಪ ವಿಫಲವಾಯಿತು. ಇವತ್ತಿಗೂ ಭಾಜಪ ಲಿಂಗಾಯತ ಮತ್ತು ವೀರಶೈವ ಧರ್ಮಗಳ ಜಟಾಪಟಿಯ ಬಗ್ಗೆ ಯಾವುದೇ ಸ್ವಷ್ಟವಾದ ಸೈದ್ಧಾಂತಿಕ ನಿಲುವನ್ನು ಪ್ರಕಟಿಸಿಲ್ಲ. ಮಾಧ್ಯಮಗಳು ಈ ಬಗ್ಗೆ ಕೇಳಿದಾಗೆಲ್ಲ ಭಾಜಪದ ನಾಯಕರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆಯೇ ಮಾತನಾಡುತ್ತಿದ್ದಾರೆಯೇ ಹೊರತು ಅವರಲ್ಲಿ ಒಂದು ಸ್ಪಷ್ಟತೆ ಇಲ್ಲ. ಇನ್ನು ಕನ್ನಡ ಬಾವುಟದ ವಿಚಾರ ಬಂದಾಗಲೂ ಸಹ ಭಾಜಪ ತನ್ನ ರಾಷ್ಟ್ರೀಯ ವಾದದ ಮಾತನಾಡುತ್ತ ಕನ್ನಡಬಾವುಟದ ಅಗತ್ಯದ ಬಗ್ಗೆಯೇ ಕೊಂಕು ತೆಗೆದಿದ್ದು ಕನ್ನಡದ ಅಸ್ಮಿತೆಯನ್ನು ಕೆಣಕಿದಂತಾಗಿದೆ. ಸಂವಿಧಾನದ ಅರಿವಿಲ್ಲದಂತೆ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಹೇಳತ್ತಾ ಕನ್ನಡಪರ ಸಂಘಟನೆಗಳ ವಿಚಾರದಲ್ಲಿಯೂ ಭಾಜಪ ಎಡವುತ್ತಾ ಹೋಗಿದೆ

ಇನ್ನು ಕಾವೇರಿ ವಿವಾದಕ್ಕೆ ಸಂಬಂಧಿಸಿ ನಡೆದ ಸರ್ವಪಕ್ಷಗಳ ಸಭೆಯನ್ನು ಒಂದು ಹಂತದಲ್ಲಿ ಬಹಿಷ್ಕರಿಸಿದ ಭಾಜಪದ ನಾಯಕರು ಅದರಿಂದ ಸಾಕಷ್ಟು ಟೀಕೆಗೆ ಒಳಗಾಗಬೇಕಾಯಿತು. ಇದೆಲ್ಲಕ್ಕಿಂತ ಮುಖ್ಯವಾಗಿ ಕಳಸಾ ಬಂಡೂರಿ-ಮಹಾದಾಯಿ ವಿಚಾರದಲ್ಲಿ ರಾಜ್ಯದ ಭಾಜಪದ ಸಂಸದರು ಒಂದು ಸ್ಪಷ್ಟವಾದ, ರಾಜ್ಯದ ಪರ ನಿಲುವು ತೆಗೆದುಕೊಳ್ಳದೆ ಗೋವಾದಲ್ಲಿ ತಮ್ಮದೇ ಸರಕಾರವಿದ್ದರೂ ಆ ಬಗ್ಗೆ ಪ್ರಧಾನಮಂತ್ರಿಗಳ ಮಧ್ಯಸ್ಥಿಕೆಗೆ ಒತ್ತಾಯಿಸಿ ಮಾತನಾಡದೆ ಆ ಭಾಗದ ಜನರ ಕಣ್ಣಲ್ಲಿ ಖಳನಾಯಕರಾಗಿ ಹೊರ ಹೊಮ್ಮಿದ್ದಾರೆ. ಮಹಾದಾಯಿ ವಿಚಾರವಾಗಿ ಪತ್ರಿಕಾ ಹೇಳಿಕೆ ನೀಡುವ ಭಾಜಪದ ನಾಯಕರು ಅಧಿಕೃತವಾಗಿ ಪ್ರಧಾನಿಮಂತ್ರಿಯವರನ್ನು ಕಂಡು ಈ ಬಗ್ಗೆ ಯಾವತ್ತಿಗೂ ಚರ್ಚೆ ನಡೆಸಿಲ್ಲ. ಇದೀಗ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಎರಡನೆ ದಿನ ಮಹಾದಾಯಿ ವಿಚಾರ ಪ್ರಸ್ತಾಪವಾದಾಗ ಜನತಾದಳದ ಶಾಸಕರಾದ ಕೋನರೆಡ್ಡಿಯವರೊಬ್ಬರು ಮಾತನಾಡಿದ್ದು ಬಿಟ್ಟರೆ ಸದನದ ಒಳಗಿದ್ದ ಯಾವುದೇ ಭಾಜಪದ ಶಾಸಕರೂ ಆ ಬಗ್ಗೆ ತುಟಿ ಬಿಚ್ಚಲಿಲ್ಲ. ಎಲ್ಲಿ ಕಳಸಾಬಂಡೂರಿ ಬಗ್ಗೆ ಮಾತನಾಡಿದರೆ ತಮ್ಮಪಕ್ಷದ ಬುಡಕ್ಕೆ ಬರುತ್ತದೆಯೋ ಎನ್ನುವ ಆತಂಕದಲ್ಲಿಯೇ ಶಾಸಕರುಗಳು ಮೌನಕ್ಕೆ ಶರಣಾಗಿ ನಿರಾಯುಧರಾಗಿ ಕುಳಿತಿದ್ದರು.

ಆಂತರಿಕ ಭಿನ್ನಮತೀಯ ಚಟುವಟಿಕೆಗಳು

ಭಾಜಪದ ಒಳಗಿನ ಅಂತರ್ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಯಡಿಯೂರಪ್ಪನವರು ಪಕ್ಷದೊಳಗೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿಲ್ಲವೆಂಬ ಆರೋಪಗಳು ಇವತ್ತಿಗೂ ಕೇಳಿ ಬರುತ್ತಿವೆ. ಇದರಿಂದ ಭಿನ್ನಮತೀಯ ಚಟುವಟಿಕೆಗಳು ಕಣ್ಣಿಗೆ ಕಾಣುವಂತೆ ನಡೆಯದೇ ಹೋದರೂ ಆಂತರಿಕವಾಗಿ ಶೀತಲ ಸಮರ ನಡೆಯುತ್ತಲೇ ಇದೆ. ಮೊನ್ನೆ ನಡೆದ ಪರಿವರ್ತನಾ ಯಾತ್ರೆಯ ಉದ್ಘಾಟನೆಯು ವೈಫಲ್ಯವಾಗಲು ಸಹ ಇದು ಒಂದು ಕಾರಣವಾಯಿತು.

ಇದರ ಮಧ್ಯೆಯೇ ಅನಂತಕುಮಾರ ಹೆಗಡೆಯವರನ್ನು ಕೇಂದ್ರ ಸಚಿವರನ್ನಾಗಿ ನೇಮಿಸಿದ್ದು ಯಡಿಯೂರಪ್ಪನವರ ಕಣ್ಣು ಕೆಂಪಗಾಗಿಸಿದೆ. ನಾಳೆ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ ಉಗ್ರ ಹಿಂದುತ್ವವಾದಿಯಾದ ಅನಂತಕುಮಾರ ಹೆಗಡೆ ಮುಖ್ಯಮಂತ್ರಿಯ ಗಾದಿಗೆ ಪ್ರತಿಸ್ಪರ್ಧಿಯಾಗಬಹುದೆಂಬ ಆತಂಕ ಯಡಿಯೂರಪ್ಪನವರದ್ದಾಗಿದೆ ಬೆಂಗಳೂರಿನಲ್ಲಿ ನಡೆದ ಯಾತ್ರೆಯ ಉದ್ಘಾಟನೆ ಕಾರ್ಯಕ್ರಮದ ವೈಫಲ್ಯಕ್ಕೆ ಮಾಜಿ ಸಚಿವರಾದ ಅಶೋಕ್ ಕಾರಣವೆಂದು ಹೈಕಮಾಂಡಿಗೆ ದೂರು ನೀಡಿರುವ ಕ್ರಮದ ಬಗ್ಗೆ ಈಗಾಗಲೇ ಬೆಂಗಳೂರಿನ ಶಾಸಕರು ಮತ್ತು ಭಾಜಪದಲ್ಲಿರುವ ಒಕ್ಕಲಿಗ ಸಮುದಾಯಕ್ಕೆ ಅಸಮಾಧಾನ ಉಂಟು ಮಾಡಿದೆ. ಈ ಕ್ಷಣಕ್ಕೂ ಅಂದರೆ ಪರಿವರ್ತನಾ ಯಾತ್ರೆ ನಡೆಯುತ್ತಿರುವ ಸಂದರ್ಭದಲ್ಲಿಯೂ ಪಕ್ಷದ ಕಾರ್ಯಕ್ರಮಗಳ ವೇದಿಕೆಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಭಿನ್ನಮತದ ಬೆಂಕಿ ಕಾಣಿಸಿಕೊಳ್ಳುತ್ತಲಿದೆ.

ಹೀಗೆ ಮಿಷನ್ 150ರ ಬಗ್ಗೆ ಅತೀವ ಆತ್ಮ ವಿಶ್ವಾಸದಿಂದ ಮಾತನಾಡುತ್ತಿದ್ದ ಭಾಜಪ ಇದೀಗ ನಿಧಾನವಾಗಿ ತನ್ನ ಹೇಳಿಕೆ ಬದಲಾಯಿಸಿ ಸರಳ ಬಹುಮತ ಪಡೆಯುವ ಮಾತಾಡುವ ಹಂತಕ್ಕೆ ಬಂದು ನಿಂತಿದ್ದರೆ ಅದಕ್ಕೆ ಕಾರಣ: ಒಂದು ಅಧಿಕೃತ ವಿರೋಧಪಕ್ಷವಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಅದು ಸೋತಿದ್ದು ಮತ್ತು ತನ್ನ ಆಂತರ್ಯದಲ್ಲಿ ಭಿನ್ನಮತದ ಬೆಂಕಿಯನ್ನು ಕಟ್ಟಿಕೊಂಡಿರುವುದಾಗಿದೆ.

Please follow and like us:
error