ಮತ್ತೆರಡು ರೈಲ್ವೆ ಸೇತುವೆಗಳಿಗೆ ಒಪ್ಪಿಗೆ: ಸಂಗಣ್ಣ ಕರಡಿ

ಮುನಿರಾಬಾದ್-ಹೊಸಪೇಟೆ ಮತ್ತು ಗಿಣಿಗೇರಾ-ಮುನಿರಾಬಾದ್ ಮಧ್ಯೆ ಅಬಾಧಿತ ಸಂಚಾರ

ಕೊಪ್ಪಳ: ಕೊಪ್ಪಳ ಮತ್ತು ಹೊಸಪೇಟೆ ನಡುವಿನ ರೈಲು ಮಾರ್ಗಕ್ಕೆ ಮತ್ತೆರಡು ಕೆಳ/ಮೇಲು ಸೇತುವೆಗಳು ಮಂಜೂರಾಗಿವೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಗಿಣಿಗೇರಾ-ಮುನಿರಾಬಾದ್ ನಿಲ್ದಾಣಗಳ ನಡುವಿನ ರೈಲ್ವೆ ಗೇಟ್ ನಂ. ೭೨ ಮತ್ತು ಮುನಿರಾಬಾದ್-ಹೊಸಪೇಟೆ ನಿಲ್ದಾಣಗಳ ನಡುವಿರುವ ರೈಲ್ವೆ ಗೇಟ್ ನಂ. ೭೯ರ ಜಾಗದಲ್ಲಿ ಈ ಸೇತುವೆಗಳನ್ನು ನಿರ್ಮಿಸಲು ರೈಲ್ವೆ ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ. ಈ ಕುರಿತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸೆಪ್ಟೆಂಬರ್ ೧೪ರಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ ಮುಖ್ಯ ಸೇತುವೆ ಎಂಜಿನಿಯರ್ ಅವರಿಗೆ ದೃಢೀಕರಣ ಪತ್ರ ಬರೆದಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.
ಪ್ರಸ್ತಾವಿತ ಈ ಎರಡೂ ಸೇತುವೆಗಳ ನಿರ್ಮಾಣ ವೆಚ್ಚವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮಪ್ರಮಾಣದಲ್ಲಿ ಭರಿಸಲಿವೆ. ಜೋಡಿಹಳಿಗಳ ಅಳವಡಿಕೆ ಭರದಿಂದ ಸಾಗಿದ್ದು, ರೈಲುಗಳ ಸಂಚಾರದಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ರೈಲ್ವೆ ಗೇಟ್ ನಂ. ೭೨ ಮತ್ತು ೭೯ರ ನಡವೆ ಕೆಳ/ಮೇಲು ಸೇತುವೆ ನಿರ್ಮಿಸುವುದು ಅವಶ್ಯವಾಗಿದೆ ಎಂದು ತಾವು ಸಲ್ಲಿಸಿದ್ದ ಪ್ರಸ್ತಾಪಕ್ಕೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಶೀಘ್ರ ಈ ಯೋಜನೆಗೆ ಸರ್ವೇ ಕೆಲಸ ಪ್ರಾರಂಭವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.
ಕೆಳ/ಮೇಲು ಸೇತುವೆಗಳ ನಿರ್ಮಾಣದಿಂದ ಹಲವಾರು ಮಹತ್ವದ ಪ್ರಯೋಜನಗಳು ಲಭಿಸಲಿದ್ದು, ರೈಲ್ವೆ ಮಾರ್ಗದ ಮಧ್ಯೆ ಬರುವ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಅಡೆತಡೆ ಮುಕ್ತವಾಗಲಿವೆ. ಇದರಿಂದ ಸಂಚಾರ ದಟ್ಟಣೆಯೂ ತಗ್ಗಲಿದ್ದು, ಈ ಪ್ರದೇಶಗಳ ಬೆಳವಣಿಗೆಗೆ ವೇಗ ಸಿಗಲಿದೆ.

Please follow and like us:
error