ಮಣ್ಣಿನ ಆರೋಗ್ಯದಿಂದ ಸುಸ್ಥಿರ ಕೃಷಿ ಸಾಧ್ಯ

`ಮಣ್ಣಿನೊಂದಿಗೆ ಮಾತುಕತೆ’ಯಲ್ಲಿ ‘ಸಾಯಿಲ್ ವಾಸು’ ಪ್ರತಿಪಾದನೆ

ತಿರುಮಲಾಪುರ, :  ಮಣ್ಣಿನ ಸ್ವರೂಪ ಹೇಗೆ? ಅದರ ಗುಣಲಕ್ಷಣ ಏನೇನು? ಮಣ್ಣಿನ ಆರೋಗ್ಯ ರಕ್ಷಣೆ ಹೇಗೆ? ವ್ಯವಸಾಯದ ಹೊರತಾಗಿಯೂ ಮಣ್ಣಿನ ಬಳಕೆ ಏನು?

ಇಂಥವೇ ಹತ್ತು ಹಲವು ಸಂಗತಿಗಳನ್ನು ಅನಾವರಣಗೊಳಿಸುತ್ತ, ರೈತರಿಗೆ ಮಣ್ಣಿನ ಕುರಿತು ವಿಶಿಷ್ಟ ಮಾಹಿತಿ ನೀಡುವ ‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮ ಇಲ್ಲಿನ ಹಂಪಿ ಹನುಮಂತಯ್ಯ ಅವರ ಮಾವಿನ ತೋಟದಲ್ಲಿ ಭಾನುವಾರ ನಡೆಯಿತು. ಮಣ್ಣಿನ ಆರೋಗ್ಯ ಸಂರಕ್ಷಣೆಯನ್ನು ಚಳವಳಿಯಾಗಿ ರೂಪಿಸುತ್ತಿರುವ ಬೆಂಗಳೂರಿನ `ಸಾಯಿಲ್ ಟ್ರಸ್ಟ್’ ಸಂಸ್ಥಾಪಕ ಹಾಗೂ ಸುಸ್ಥಿರ ಕೃಷಿ ಕಾರ್ಯಕರ್ತ ಪಿ. ಶ್ರೀನಿವಾಸ್ (ಸಾಯಿಲ್ ವಾಸು), ಮಣ್ಣಿನ ಕುರಿತ ಮಾಹಿತಿಯನ್ನು ಸಭಿಕರ ಜತೆ ಹಂಚಿಕೊಂಡರು. ವಿವಿಧ ಬಗೆಯ ಕ್ರಿಯಾಶೀಲ ಚಟುವಟಿಕೆಗಳನ್ನು ನಡೆಸಿ, ಮಣ್ಣಿನ ಗುಣಲಕ್ಷಣ ಅರಿಯುವ ಬಗೆಯನ್ನು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸುಸ್ಥಿರ ಕೃಷಿಯಿಂದ ವಿಷಮುಕ್ತ ಆಹಾರ ಉತ್ಪಾದನೆ ಸಾಧ್ಯವಿದ್ದು, ಇದರ ಮೂಲವೇ ಮಣ್ಣಿನಲ್ಲಿದೆ. ಮಣ್ಣಿನ ಆರೋಗ್ಯದತ್ತ ಗಮನ ಕೊಡದೇ ಹೋದರೆ ಕೃಷಿಯ ಭವಿಷ್ಯ ಸಂಕಷ್ಟಕ್ಕೆ ಸಿಲುಕಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು. ಮಣ್ಣಿಗೆ ಜೀವ ತುಂಬುವ ಬದಲಿಗೆ ವ್ಯತಿರಿಕ್ತ ಪರಿಣಾಮ ಬೀರುವ ರಾಸಾಯನಿಕ ವಿಧಾನಗಳನ್ನು ಅನುಸರಿಸಿದ್ದರಿಂದ, ಮಣ್ಣಿನ ಆರೋಗ್ಯ ಹದಗೆಟ್ಟಿದೆ. ಆಹಾರ- ಪರಿಸರ ವಿಷಮಯವಾಗಿದೆ. ಇದರ ಪರಿಹಾರಕ್ಕೆ ಮಣ್ಣಿನ ಆರೋಗ್ಯ ಸಂರಕ್ಷಣೆಯೇ ಏಕೈಕ ಪರಿಹಾರ ಎಂದು ಅವರು ಸಲಹೆ ಮಾಡಿದರು.
ವಿವಿಧ ಪ್ರಯೋಗಗಳ ಮೂಲಕ ಮಣ್ಣಿನ ಭೌತಿಕ ರಚನೆ, ಸ್ವರೂಪ, ಗುಣಲಕ್ಷಣಗಳನ್ನು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಪ್ರಾತ್ಯಕ್ಷಿತೆ ಮೂಲಕ ವಾಸು ಅವರು ರೈತರಿಗೆ ಮನವರಿಕೆ ಮಾಡಿಕೊಟ್ಟರು. ರೈತರು ತಂದಿದ್ದ ತಮ್ಮ ಹೊಲದ ಮಣ್ಣುಗಳನ್ನು ಹೇಗೆ ಪರೀಕ್ಷೆಗೆ ಒಡ್ಡಬಹುದು ಎಂಬುದನ್ನು ತೋರಿಸಿಕೊಟ್ಟರು. ನೀರನ್ನು ಹಿಡಿದಿಟ್ಟುಕೊಳ್ಳುವುದರ ಜತೆಗೆ, ಬೆಳೆಗೆ ಪೋಷಕಾಂಶ ಒದಗಿಸುವ ಫಲವತ್ತಾದ ಮಣ್ಣನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬ ಮಾಹಿತಿ ನೀಡಿದರು.
ಮಣ್ಣಿನ ದ್ರಾವಣದಲ್ಲಿ ಬಿಳಿ ಕರವಸ್ತ್ರ ಅದ್ದಿ, ಅದಕ್ಕೆ ಬಣ್ಣ ತಂದುಕೊಡುವುದು; ಮಣ್ಣಿನಿಂದ ಬಣ್ಣ ತಯಾರಿಸಿ ಮಕ್ಕಳು ಬರೆಯುವ ಚಿತ್ರಕ್ಕೆ ಬಗೆಬಗೆಯ ವರ್ಣ ತಯಾರಿಸುವುದು; ಮಣ್ಣಿನ ಭೌತಿಕ ರಚನೆ ತಿಳಿಯುವ ಬಗೆ ಸೇರಿದಂತೆ ವಿವಿಧ ಬಗೆಯ ಚಟುವಟಿಕೆಗಳು ಜನಮನ ಸೆಳೆದವು. ಅಕ್ಕಡಿ ಬೆಳೆಪದ್ಧತಿ ಕುರಿತು ಕೋಲಾರದ ರೈತ ಪ್ರಭಾಕರ್ ಮಾಹಿತಿ ನೀಡಿದರು. ಮಣ್ಣು ಕುರಿತ ಪ್ರದರ್ಶಿಸಲಾದ ಭಿತ್ತಿಚಿತ್ರಗಳು ಆಕರ್ಷಕವಾಗಿದ್ದವು. ಭೂತಗನ್ನಡಿಯಲ್ಲಿ ಮಣ್ಣನ್ನು ನೋಡಿ, ರೈತರು ವಿಸ್ಮಯಗೊಂಡರು. ಇದೇ ಸಂದರ್ಭದಲ್ಲಿ. ರೈತರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ, ಮಾರಾಟ ನಡೆಸಲು ಅನುಕೂಲ ಕಲ್ಪಿಸಲಾಗಿತ್ತು.
ಹಂಪಿ ಹನುಮಂತಯ್ಯ ಹಾಗೂ ಶಕುಂತಲಾ ದಂಪತಿ ಸ್ವಾಗತಿಸಿದರು. ಡಾ. ಬದರಿಪ್ರಸಾದ್ ಪಿ.ಆರ್. ಸ್ವಾಗತಿಸಿದರು. ಶ್ರೀಪಾದರಾಜ ಮುರಡಿ, ಶ್ರೀನಾಥ್ ತೂನ, ಶರಣಬಸವರಾಜ ಗದಗ, ಉದಯ ರಾಯರಡ್ಡಿ ಉಪಸ್ಥಿತರಿದ್ದರು. ಸುಮಾರು ಇನ್ನೂರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆನೆಗೊಂದಿ ಸಮೀಪ ತಿರುಮಲಾಪುರದ ಹಂಪಿ ಹನುಮಂತಯ್ಯ ಅವರ ತೋಟದಲ್ಲಿ ಭಾನುವಾರ ನಡೆದ ‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮದಲ್ಲಿ ಮಣ್ಣಿನ ಕುರಿತ ಚಟುವಟಿಕೆಗಳನ್ನು ‘ಸಾಯಿಲ್ ವಾಸು’ ನಡೆಸಿಕೊಟ್ಟರು. ಹಾಗೂ ಆನೆಗೊಂದಿ ಸಮೀಪ ತಿರುಮಲಾಪುರದ ಹಂಪಿ ಹನುಮಂತಯ್ಯ ಅವರ ತೋಟದಲ್ಲಿ ಭಾನುವಾರ ನಡೆದ ‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತರು.

ಆನೆಗೊಂದಿ ಸಮೀಪ ತಿರುಮಲಾಪುರದ ಹಂಪಿ ಹನುಮಂತಯ್ಯ ಅವರ ತೋಟದಲ್ಲಿ ಭಾನುವಾರ ನಡೆದ ‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮದಲ್ಲಿ ಮಣ್ಣಿನ ಕುರಿತ ಚಟುವಟಿಕೆಗಳನ್ನು ‘ಸಾಯಿಲ್ ವಾಸು’ ನಡೆಸಿಕೊಟ್ಟರು. ಹಾಗೂ ಆನೆಗೊಂದಿ ಸಮೀಪ ತಿರುಮಲಾಪುರದ ಹಂಪಿ ಹನುಮಂತಯ್ಯ ಅವರ ತೋಟದಲ್ಲಿ ಭಾನುವಾರ ನಡೆದ ‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತರು.

Please follow and like us:
error