ಬೆಳೆ ಸಾಲ ಮನ್ನಾಯೋಜನೆಯಡಿ ನೊಂದಾಯಿಸಿಕೊಳ್ಳಲು ನಾಡ ಕಛೇರಿಗಳಲ್ಲಿ ಅವಕಾಶ


ಕೊಪ್ಪಳ ಡಿ. ೨೬  : ಕೊಪ್ಪಳ ಜಿಲ್ಲೆಯ ರೈತರ ಅನುಕೂಲಕ್ಕಾಗಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಪಡೆದ ಬೆಳೆ ಸಾಲ ಮನ್ನಾಯೋಜನೆಯಡಿ ನೊಂದಾಯಿಸಿಕೊಳ್ಳಲು ನಾಡ ಕಛೇರಿಗಳಲ್ಲಿಯೂ ಸಹ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಎಲ್ಲ ವಾಣಿಜ್ಯ ಬ್ಯಾಂಕಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುವ ಸಲುವಾಗಿ ರೈತರ ಸ್ವಯಂ ಘೋಷಣಾ ಪತ್ರವನ್ನು ಸಂಬಂಧಪಟ್ಟ ಬ್ಯಾಂಕಿನಲ್ಲಿ ಸಲ್ಲಿಸುವಲ್ಲಿ ಗ್ರಾಮೀಣ ಭಾಗದ ರೈತರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲ ವಾಣಿಜ್ಯ ಬ್ಯಾಂಕಗಳಲ್ಲಿ ರೈತರ ಸ್ವಯಂ ಘೋಷಣಾ ಪತ್ರವನ್ನು ಪಡೆಯುತ್ತಿರುವಂತೆ ಗ್ರಾಮೀಣ ಭಾಗದಲ್ಲಿಯೂ ಸಹ ರೈತರ ಸ್ವಯಂ ಘೋಷಣಾ ಪತ್ರವನ್ನು ನಾಡ ಕಛೇರಿಯ “ಅಟಲ್ ಜೀ ಜನಸ್ನೇಹಿ ಕೇಂದ್ರ”ದಲ್ಲಿ ಪಡೆಯುವುದರ ಮೂಲಕ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯನ್ನು ಯಶಸ್ವಿಗೊಳಿಸುವುದು ಜಿಲ್ಲಾಡಳಿತದ ಮುಖ್ಯ ಉದ್ದೇಶವಾಗಿದೆ.
ಜಿಲ್ಲೆಯ ಎಲ್ಲಾ ನಾಡ ಕಛೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ರೈತರ ಸಾಲಕ್ಕೆ ಸಂಬಂಧಿಸಿದ ಆಧಾರ ಕಾರ್ಡ, ಪಡಿತರ ಚೀಟಿ, ಪ್ರತಿಗಳೊಂದಿಗೆ ರೈತರು ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯ ರೈತ ಬಾಂಧವರು ತಮ್ಮ ಗ್ರಾಮದ ವ್ಯಾಪ್ತಿಯ ನಾಡ ಕಛೇರಿಗೆ ತೆರಳಿ ಸಾಲಕ್ಕೆ ಸಂಬಂಧಿಸಿದ ಆಧಾರ ಕಾರ್ಡ, ಪಡಿತರ ಚೀಟಿ, ಹಾಗೂ ಸಾಲ ಪಡೆದ ಬಾಂಕಿನ ಪಾಸ್‌ಪುಸ್ತಕದ ಪ್ರತಿಗಳನ್ನು ಹಾಗೂ ಸರ್ವೆ ನಂಬರಿನ ಮಾಹಿತಿಯನ್ನು ನೀಡಿ ಅಥವಾ ಸ್ವಯಂ ಘೋಷಣಾ ಪತ್ರವನ್ನು ಜಿಲ್ಲೆಯ ಯಾವುದೇ ನಾಡ ಕಛೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಸಲ್ಲಿಸಬಹುದಾಗಿದೆ. ಕರ್ನಾಟಕ ಸರಕಾರವು ವಾಣಿಜ್ಯ ಬ್ಯಾಂಕಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುವ ಸಲುವಾಗಿ ತಂತ್ರಾಂಶವನ್ನು ತಂದಿದ್ದು, ಈ ಎಲ್ಲಾ ಕ್ರಮಗಳನ್ನು ಪಾಲಿಸಿ, ಕೊಪ್ಪಳ ಜಿಲ್ಲೆಯ ರೈತರು ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error