ಬೆಲೆ ಏರಿಕೆ ನಿಯಂತ್ರಿಸಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒತ್ತಾಯ.

ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ವೆಲ್ಫೇರ್ ಪಾರ್ಟಿ
ಆಫ್ ಇಂಡಿಯಾ ಒತ್ತಾಯ.
Kannadanet NEWS ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಒತ್ತಾಯಿಸಿ ನಿಯಂತ್ರಿಸಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು.

 ಕೊಪ್ಪಳದ ಅಶೋಕ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು  ಜನರ ದೈನಂದಿನ ಅಗತ್ಯಗಳಾದ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಗ್ಯಾಸ್ ಬೆಲೆಯು ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ದೇಶದ ಸಾಮಾನ್ಯ ನಾಗರೀಕನ ಬದುಕು ಕಷ್ಟವಾಗುತ್ತಾ ಸಾಗಿದೆ. ದುಬಾರಿ ಬೆಲೆ ತೆರಲಾರದೇ ದೇಶದ ೧೩೦ ಕೋಟಿ ನಾಗರೀಕರು ಅನೇಕ ರೀತಿಯ ಆರ್ಥಿಕ ಮುಗ್ಗಟ್ಟುಗಳನ್ನು ಎದುರಿಸುತ್ತಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಟ್ರ್ಯಾಕ್ಟರ್, ಬಸ್, ಲಾರಿಗಳ, ಟ್ಯಾಕ್ಸಿ, ಆಟೋ, ಟಂಟಂ ಇತ್ಯಾದಿ ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಮಾರಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಮನಮೋಹನಸಿಂಗ್ ಸರ್ಕಾರದ ಅವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚತೈಲ ಬೆಲೆ ಬ್ಯಾರೆಲ್ ಒಂದಕ್ಕೆ ೧೩೦ ಡಾಲರ್ ರಷ್ಟಿತ್ತು. ಆಗ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ೭೦ ರೂಪಾಯಿ ನಿಗದಿಪಡಿಸಲಾಗಿತ್ತು. ಆದರೆ ಇಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚತೈಲ ಬೆಲೆ ಬ್ಯಾರೆಲ್ ಒಂದಕೆ ೫೫ ಡಾಲರ್‌ಗೆ ಇಳಿದಿದೆ. ಆದರೂ ಜನ ವಿರೋಧಿ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ೯೦ ರೂ.ಗಳಿಗಿಂತಲು ಹೆಚ್ಚಾಗಿ ವಸೂಲಿ ಮಾಡುತ್ತಿದೆ. ಅಂದು ೪೦ ರೂ. ಇದ್ದ ಡೀಸೆಲ್ ಬೆಲೆ ಇಂದು ೮೦ ರೂಪಾಯಿಗೆ ಏರಿಕೆಯಾಗಿದೆ.
ಇಂದು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಅಗತ್ಯ ವಸ್ತುಗಳಾಗಿ ಮಾರ್ಪಟ್ಟಿವೆ. ದೇಶದ ಬಹುತೇಕ ಜನರು ದ್ವಿಚಕ್ರ ವಾಹನ ಬಳಸುತ್ತಿದ್ದು ಸಾಗಾಣಿಕೆಗಾಗಿ ಪೆಟ್ರೋಲನ್ನು ಅವಲಂಬಿಸಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಯಿಂದ ದೇಶದ ಮಧ್ಯಮವರ್ಗ ಸಂಕಷ್ಟಕ್ಕೀಡಾಗಿದೆ. ಡೀಸೆಲ್ ಬೆಲೆ ಏರಿಕೆಯು ಪರೋಕ್ಷವಾಗಿ ಎಲ್ಲಾ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ದೇಶದಲ್ಲ್ಲಿ ಲಾರಿ, ಟ್ರಕ್, ಟ್ರ್ಯಾಕ್ಟರ್, ಕಂಟೇನರ್, ಟಂಟಂ ಇತ್ಯಾದಿ ವಾಹನಗಳ ಮೂಲಕ ಸಾಗಾಣಿಕೆ ನಡೆಯುತ್ತಿದೆ. ಈ ಎಲ್ಲಾ ವಾಹನಗಳು ನಡೆಯುವುದು ಡೀಸೆಲ್ ಮೂಲಕ. ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳು ಸೇರಿ ಎಲ್ಲಾ ವಸ್ತುಗಳ ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತ ಸಾಗಿದೆ. ಇದಿಲ್ಲದೇ ಡೀಸೆಲ್ ಬೆಲೆ ಏರಿಕೆಯಿಂದ ಬಸ್ ಚಾರ್ಜ್ ಏರಿಕೆಯಾಗಿದೆ. ಮೊದಲೇ ನೂರಾರು ಸಂಕಷ್ಟಗಳನ್ನು ಎದುರಿಸುತ್ತಿರುವ ರೈತಾಪಿ ವರ್ಗವು ಡೀಸೆಲ್ ಬೆಲೆ ಏರಿಕೆಯಿಂದ, ಕೃಷಿ ಅವಲಂಬಿತ ಸಣ್ಣ, ಮಧ್ಯಮ ರೈತರು ಎತ್ತುಗಳನ್ನು ಮಾರಿ ಟ್ರ್ಯಾಕ್ಟರ್‌ಗಳನ್ನೇ ಅವಲಿಂಬಿಸಿದ್ದಾರೆ. ಸರ್ಕಾರದ ಅವೈಜ್ಞಾನಿಕ ನೀತಿಗಳು ರೈತರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ತರಕಾರಿ, ಹೂವು, ಹಣ್ಣು ಬೆಳೆಸುವ ರೈತರು ತಮ್ಮ ಬೆಳೆಗಳನ್ನು ಮಾರಿ ಪಡೆಯುವುದಕ್ಕಿಂತ ಹೆಚ್ಚಿನ ಹಣವನ್ನು ಸಾಗಾಣಿಕೆಗೆ ಖರ್ಚು ಮಾಡುವ ಸಂಕಷ್ಟ ಎದುರಾಗಿದೆ.
ದೇಶದ ಬಹುತೇಕ ಕುಟುಂಬಗಳು ಇಂದು ಅಡುಗೆಗಾಗಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಅವಲಂಬಿಸಿವೆ. ಫುಟ್‌ಪಾತ್ ಹೋಟೆಲ್‌ಗಳಿಂದ ಹಿಡಿದು ದೊಡ್ಡ ಹೋಟೆಲ್‌ಗಳು ಅಡುಗೆಗಾಗಿ ಎಲ್‌ಪಿಜಿ ಕಮರ್ಷಿಯಲ್ ಸಿಲಿಂಡರ್‌ಗಳನ್ನೇ ಅವಲಂಬಿಸಿವೆ. ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್‌ಗಳಲ್ಲಿ ಚಹ, ತಿಂಡಿಗಳಂತಹ ವಸ್ತುಗಳ ಬೆಲೆ ಏರಿಕೆಯಾಗಿದೆ. ಸಿಲಿಂಡರ್ ಬೆಲೆ ಏರಿಕೆಯಿಂದಲೂ ದೇಶದ ಜನತೆಯ ಜೇಬಿಗೆ ಕತ್ತರಿ ಬಿದ್ದಿದೆ. ಈ ಹಿಂದೆ ನೀಡುತ್ತಿದ್ದ ಸಬ್ಸಿಡಿಯನ್ನು ಸರ್ಕಾರ ನೀಡುತ್ತಿಲ .
ರಾಷ್ಟ್ರಪತಿಗಳು ಈ ಕೂಡಲೇ ಮಧ್ಯ ಪ್ರವೇಶಿಸಿ ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಿಸಿ ಗೃಹ ಅನಿಲ ಗ್ಯಾಸ್ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ನೀಡಿ, ಸಿಲಿಂಡರ್ ಬೆಲೆ ಕಡಿತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಆದಿಲ್ ಪಟೇಲ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಹಸನುದ್ದೀನ್ ಆಲಂಬರ್ದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಲೀಮುದ್ದೀನ್, ನಗರಸಭೆ ಸದಸ್ಯರಾದ ಶ್ರೀಮತಿ ಸಬಿಹಾ ಪಟೇಲ್, ಮೌಲಾ ಹಣಗಿ, ನಾಸಿರ್ ಮಾಳೆಕೊಪ್ಪ, ಏಜಾಜ್ ಶೇಖ್, ಅಬ್ದುಲ್ ವಾಹಿದ್, ಸಮದ್ ಚೌಥಾಯಿ, ಮಹೆಬೂಬ್ ಮಣ್ಣೂರ, ಅಹಮದ್ ಖಾನ್, ಶ್ರೀಮತಿ ಸಲ್ಮಾಜಹಾಂ, ಶ್ರೀಮತಿ ಲುತ್ಫಿಮೈಮುನ್, ಇಸಾಕ್ ಫಜೀಲ್ ಮತ್ತಿತರರು ಉಪಸ್ಥಿತರಿದ್ದರು ಹಾಗೂ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಹಿತೈಶಿಗಳು ಇದ್ದರು.

Please follow and like us:
error