ಬೂತ್ ಮಟ್ಟದ ಅಧ್ಯಕ್ಷರಾಗಿ ಅಮರೇಶ್ ನೇಮಕ

ಚುನಾವಣೆಗೆ ಬಿಜೆಪಿ ಸಿದ್ಧತೆ | ಬೇರುಮಟ್ಟದಲ್ಲಿ ಪಕ್ಷ ಸಂಘಟಿಸುವ ಹೊಣೆಗಾರಿಕೆ

ಕೊಪ್ಪಳ: ಕೊಪ್ಪಳ ವಿಧಾನಸಭಾ ಬೂತ್ ಮಟ್ಟದ ಅಧ್ಯಕ್ಷರಾಗಿ ಬಿಜೆಪಿ ಯುವ ನಾಯಕ ಅಮರೇಶ ಕರಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಶನಿವಾರ ನಗರದಲ್ಲಿ ನಡೆದ ಬೂತ್ ಮಟ್ಟದ ಸಶಕ್ತೀಕರಣ ಕಾರ್ಯಾಗಾರದಲ್ಲಿ ಆಯ್ಕೆ ಪ್ರಕಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ಅವರು ಅಮರೇಶ್ ಕರಡಿ ಅವರನ್ನು ಅಭಿನಂದಿಸಿದರು. ಪಕ್ಷದಲ್ಲಿ ಅಮರೇಶ್ ಕರಡಿ ಅವರಿಗೆ ಸಿಕ್ಕಿರುವ ಮೊದಲ ಮಹತ್ವದ ಹುದ್ದೆ ಇದು.
ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೨೫೩ ಬೂತ್‌ಗಳಿವೆ. ಚುನಾವಣೆ ಗೆಲ್ಲುವಲ್ಲಿ ಬೂತ್ ಮಟ್ಟದ ಕಾರ್ಯಸಿದ್ಧತೆ ಮಹತ್ವದ ಪಾತ್ರ ವಹಿಸಿದೆ. ಈ ಹಿನ್ನೆಲೆಯಲ್ಲಿ, ಬೂತ್‌ಗಳಲ್ಲಿ ಸಮರ್ಥ ಕಾರ್ಯಕರ್ತರನ್ನು ನೇಮಿಸಿ, ಬೇರು ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಮಾಡಬೇಕೆಂದು ಅವರು ಸಲಹೆ ನೀಡಿದರು.
ವಿಸ್ತಾರಕ ಸಭೆಯನ್ನು ಬೂತ್ ಮಟ್ಟದಲ್ಲಿ ನಡೆಸುವ ಮೂಲಕ ಗಮನ ಸೆಳೆದಿದ್ದ ಬಿಜೆಪಿಯ ಮಾದರಿಯನ್ನು ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ಅನುಸರಿಸುತ್ತಿವೆ. ಆದರೆ, ಅವೆರಡೂ ಪಕ್ಷಗಳಲ್ಲಿ ಈ ಮಹತ್ವದ ಕಾರ್ಯಕ್ರಮ ಕಾಟಾಚಾರಕ್ಕೆ ನಡೆದಿದೆ. ಈಗ ಬೂತ್ ಮಟ್ಟದ ರಾಜಕೀಯ ಚಟುವಟಿಕೆಯನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಮುಂದಾಗಿರುವ ಬಿಜೆಪಿ, ಯುವ ಹಾಗೂ ಸಮರ್ಥ ನಾಯಕರಿಗೆ ಆ ಜವಾಬ್ದಾರಿ ನೀಡುವ ಮೂಲಕ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬಲಗೊಳಿಸಲು ಹೊರಟಿದೆ.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ್, ಹೇಮಲತಾ ನಾಯಕ್ ಸಹಿತ ಹಲವಾರು ಮುಖಂಡರು ಇದ್ದರು.

Please follow and like us:
error