ಬಾಲ್ಯ ವಿವಾಹದಿಂದ ಬಾಲಕಿ ರಕ್ಷಣೆ : ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು


ಕೊಪ್ಪಳ ಮಾ.   ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಅಪ್ರಾಪ್ತ ಬಾಲಕಿಯ ಬಾಲ್ಯ ವಿವಾಹವೊಂದನ್ನು ತಡೆದು, ಬಾಲಕಿಯನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದೆ.
ಹುಲಗಿ ಗ್ರಾಮದ ಬಾಲಕಿಯೊಂದಿಗೆ ಕೊಪ್ಪಳ ತಾಲೂಕಿನ ಹಣವಾಳ ಗ್ರಾಮದ ಫಕೀರಜ್ಜ ತಂದೆ ಭರಮೇಶಪ್ಪ ಎಂಬ ವ್ಯಕ್ತಿಯ ಜೊತೆ ಮದುವೆ ಮಾಡುವುದಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ರಕ್ಷಣಾಧಿಕಾರಿ (ಸಾಂಸ್ಥಿಕ) ಸುಮಲತಾ, ಔಟರೀಚ್ ವರ್ಕರ್‌ರಾದ ಪ್ರತಿಭಾ ಹಾಗೂ ಡಾಟಾ ಅನಾಲಿಸ್ಟ್ ವಿಜಯಕುಮಾರ, ಅಳವಂಡಿ ಪೋಲಿಸ ಠಾಣೆಯ ಗಂಗಾಧರ, ಅಂಗನವಾಡಿ ಮೇಲ್ವಿಚಾರಕಿ ಜನ್ನತ್ ಬೀ, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಅಶೋಕ ರಾಂಪುರ, ಶಾಲಾ ಮುಖ್ಯೋಪಾಧ್ಯಯ ಪರಮೇಸ್ವರಪ್ಪ ಅವರೊಂದಿಗೆ ಹಣವಾಳ ಗ್ರಾಮದ ಮನೆಗೆ ಭೇಟಿ ನೀಡಿದಾಗ ಮದುವೆ ನಿಶ್ಚಯಿಸಿರುವುದು ಖಚಿತ ಗೊಂಡಿರುವುದಿಂದ ಬಾಲಕಿಯ ಶಾಲಾ ದಾಖಲಾತಿಯನ್ನು ಪರಿಶೀಲಿಸಿದಾಗ ಶಾಲಾ ದಾಖಲಾತಿಯ ಪ್ರಕಾರ ಬಾಲಕಿಗೆ ೧೭ ವರ್ಷ ೯ ತಿಂಗಳು ೨೫ ದಿನ ಇದ್ದು, ಈ ವಿವಾಹವು ಬಾಲ್ಯ ವಿವಾಹವೆಂದು ಕಂಡು ಬಂದಿದೆ.
ಆದ್ದರಿಂದ ಬಾಲಕಿಯ ಪೋಷಕರಿಗೆ ತಿಳುವಳಿಕೆ ನೀಡಿ ಬಾಲಕಿಯನ್ನು ವಶಕ್ಕೆ ಪಡೆದು ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದೆ. ಬಾಲ್ಯ ವಿವಾಹ ಮಾಡುವುದು, ವಿವಾಹದಲ್ಲಿ ಪಾಲ್ಗೊಳ್ಳುವುದು ಕೂಡ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು   ತಿಳಿಸಿದ್ದಾರೆ

Please follow and like us:
error