ಬಾಬಣ್ಣ ಕಲ್ಮನಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ-ಡಾ.ಮಹಾಂತೇಶ ಮಲ್ಲನಗೌಡರ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರಿನ ಕಲಾತಿಲಕರೆಂದೇ ಪ್ರಸಿದ್ಧಿಯಾಗಿರುವ ಬಾಬಣ್ಣ ಕಲ್ಮನಿ ಅವರು ರಂಗಭೂಮಿ ಕ್ಷೇತ್ರಕ್ಕೆ ತಮ್ಮನ್ನೇ ತಾವು ಅರ್ಪಿಸಿಕೊಂಡಿದ್ದಾರೆ, ಎಲ್ಲ ಬಗೆಯ ಪಾತ್ರಗಳನ್ನು ನಿಭಾಯಿಸುವ ಶಕ್ತಿ ಅವರಲ್ಲಿದೆ. ನಾಟಕ ಕಂಪನಿಯನ್ನೂ ಸಹಿತ ಪ್ರಾರಂಭಿಸಿ ಅದರ ಪ್ರಗತಿಗಾಗಿ ಶ್ರಮಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿವೀರಣ್ಣ ಪ್ರಶಸ್ತಿ ಲಭಿಸಲಿ ಎಂದು ಕೊಪ್ಪಳದ ಹಿರಿಯ ಸಾಹಿತಿಯಾದ ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು.
ಅವರು ಶನಿವಾರ ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಬಾಬಣ್ಣ ಕಲ್ಮನಿಯವರಿಗೆ ಎಸ್.ಪಿ.ವರದರಾಜು ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕಾಗಿ ಅವರಿಗೆ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು
ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಬಾಬಣ್ಣ ಕಲ್ಮನಿಯವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಎಸ್.ಪಿ.ವರದರಾಜು ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ನನ್ನ ಉಸಿರು ಇರುವವರೆಗೆ ಅಭಿನಯಿಸುತ್ತೇನೆ. ರಂಗಭೂಮಿ ಕಲೆ ನನಗೆ ವೃತ್ತಿ ರಂಗಭೂಮಿಯ ದಿಗ್ಗಜೆಯಾಗಿದ್ದ ನನ್ನ ತಾಯಿ ರೆಹಮಾನವ್ವ ಕಲ್ಮನಿಯವರಿಂದ ನನಗೆ ಬಳುವಳಿಯಾಗಿ ದೊರತಿದೆ. ಅರಿಷಿಣಗೋಡಿ, ಚಿಂದೋಡಿ, ಗುಡಿಗೇರಿ, ಶೇಖಮಾಸ್ತರ, ಪುಟ್ಟರಾಜ ಗವಾಯಿಗಳ ಕಂಪನಿ ಸೇರಿದಂತೆ ಹಲವು ನಾಟಕ ಕಂಪನಿಗಳಲ್ಲಿ ಅಭಿನಯಿಸಿದ್ದೇನೆ. ಮುಂದಿನ ದಿನಮಾನಗಳಲ್ಲಿ ಯುವಕರಿಗೆ ರಂಗಭೂಮಿಯ ಬಗ್ಗೆ ತರಭೇತಿ ನೀಡುವುದು ನನ್ನ ಉದ್ದೇಶವಾಗಿದೆ ಎಂದರು.
ಹಿರಿಯ ಸಾಹಿತಿ ಡಾ.ವಿ.ಬಿ.ರಡ್ಡೇರ ಮಾತನಾಡಿ, ಬಾಬಣ್ಣ ಕಲ್ಮನಿಯವರು ಪ್ರತಿಭಾವಂತ ರಂಗನಟರು. ಇವರು ಏಳು ದಶಕಗಳಿಂದಲೂ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಚಲನಚಿತ್ರ ನಿರ್ದೇಶಕರು ಮತ್ತು ಹಿರಿಯ ಪತ್ರಕರ್ತರಾದ ರಮೇಶ ಸುರ್ವೆ ಮಾತನಾಡಿ, ಬಾಬಣ್ಣ ಕಲ್ಮನಿಯವರು ಅದ್ಭುತ ಹಾಸ್ಯ ಕಲಾವಿದರು. ಅವರ ತಾಯಿಯವರಾಗಿದ್ದ ಹಿರಿಯ ರಂಗನಟಿ ರೆಹಮಾನವ್ವ ಕಲ್ಮನಿ ಅವರ ಅನ್ನದ ಋಣ ನನ್ನ ಮೇಲಿದೆ. ಬಾಬಣ್ಣ ಕಲ್ಮನಿಯವರು ಎಸ್.ಪಿ.ವರದರಾಜು ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ನನಗಂತೂ ಬಹಳ ಖುಷಿಯಾಗಿದೆ. ಬಾಬಣ್ಣ ಕಲ್ಮನಿಯವರು ರಂಗ ಪ್ರವೇಶಿಸಿ ೭೫ ವರ್ಷವಾದ ಮೇಲೆ ಅವರಿಗೊಂದು ಅದ್ಧೂರಿ ಸಮಾರಂಭವನ್ನು ಏರ್ಪಡಿಸಿ, ಅವರ ಸಮಕಾಲೀನ ೭೫ ರಂಗಕಲಾವಿದರಿಗೆ ಸನ್ಮಾನಿಸಲಾಗುವುದು ಎಂದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ, ರಂಗಭೂಮಿ ಸಾಧಕರಿಗೆ ನೀಡುವ ಎಸ್.ಪಿ.ವರದರಾಜ ಪ್ರಶಸ್ತಿಗೆ ಆಯ್ಕೆಯಾದ ಬಾಬಣ್ಣ ಕಲ್ಮನಿಯವರು ಎಂಬತ್ತೇಳು ವರ್ಷದ ಚಿರಯೌವ್ವನಿಗರು. ಇವರು ಈಗಲೂ ನಾಟಕಗಳಲ್ಲಿ ಅಭಿನಯಿಸುವ ಇವರ ಉತ್ಸಾಹ ಯುವಕರಿಗೆ ಮಾದರಿಯಾಗಿದೆ. ಸ್ತ್ರೀ, ಪುರುಷ ಪಾತ್ರಗಳ ಅಭಿನಯಗಳೆರಡಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇವರನ್ನು ಕುರಿತು ಒಂದು ಜೀವನ ಚರಿತ್ರೆಯನ್ನು ಬರೆಯಲು ನಿರ್ಧರಿಸಿದ್ದೇನೆ ಎಂದರು.
ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ರಾಜ್ಯಾಧ್ಯಕ್ಷರಾದ ಮಹೇಶಬಾಬು ಸುರ್ವೆ ಮಾತನಾಡಿ, ರಂಗಕರ್ಮಿಯಾದ ಬಾಬಣ್ಣ ಕಲ್ಮನಿಯವರು ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸೇವೆಸಲ್ಲಿಸಿದ್ದಕ್ಕಾಗಿ ಇವರು ಎಸ್.ಪಿ.ವರದರಾಜ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ಸಂಗತಿ ಎಂದರು.
ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಜಿ.ಎಸ್.ಗೋನಾಳ ಮಾತನಾಡಿ, ಕೊಪ್ಪಳ ಜಿಲ್ಲೆಯು ರಂಗಭೂಮಿಯ ಕ್ಷೇತ್ರದಲ್ಲಿ ಶ್ರೀಮಂತವಾಗಿದೆ. ಬಾಬಣ್ಣ ಕಲ್ಮನಿ ಅವರ ಜೀವನ ಚರಿತ್ರೆಯನ್ನು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಕೃತಿ ಮೂಲಕ ಹೊರತರಲಿ ಎಂದರು.
ಕುಕನೂರು ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರುದ್ರಪ್ಪ ಭಂಡಾರಿ ಮಾತನಾಡುತ್ತಾ, ರಂಗಭೂಮಿ ಹಿರಿಯ ಚೇತನ ಬಾಬಣ್ಣ ಕಲ್ಮನಿ ಅವರು ರಂಗಭೂಮಿಗೆ ಸಲ್ಲಿಸಿದ ಸೇವೆ ಸ್ಮರಣಾರ್ಹ. ಇವರು ಶತಾಯುಷಿಗಳಾಗಲಿ ಎಂದರು.
ಪತ್ರಕರ್ತ ಮಂಜುನಾಥ ಅಂಗಡಿ ಮಾತನಾಡಿ, ಬಾಬಣ್ಣ ಕಲ್ಮನಿ ಅವರು ನಮ್ಮ ಕುಕನೂರಿನವರು ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಇವರಿಂದ ನಮ್ಮ ಗ್ರಾಮದ ಕೀರ್ತಿ ಹೆಚ್ಚಿದೆ ಎಂದರು.
ಪತ್ರಕರ್ತರಾದ ಬಸವರಾಜ ಮರದೂರ, ಶಿಕ್ಷಕರಾದ ಸುರೇಶ ಕಂಬಳಿ, ರಂಗನಟರಾದ ರಾಜಾಸಾಬ ಮಲ್ಲಾಪೂರ, ಮುಸ್ತಾಪ ಕೊಪ್ಪಳ, ಹಿರಿಯರಾದ ನಾಗೇಂದ್ರಪ್ಪ ಸುರ್ವೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುನೀರ ಅಹಮ್ಮದ ಸಿದ್ದಿಕಿ ನಿರೂಪಿಸಿದರು. ಶ್ರೀನಿವಾಸ ಚಿತ್ರಗಾರ ವಂದಿಸಿದರು.

Please follow and like us:
error