ಬಸವರಾಜ ಆಕಳವಾಡಿಯವರು ಜಾನಪದ ವಿದ್ವಾಂಸರಾಗಿದ್ದರು: ಹನುಮಂತಪ್ಪ ಅಂಡಗಿ

ಕೊಪ್ಪಳ,:ಬಸವರಾಜ ಆಕಳವಾಡಿಯವರು ತಮ್ಮ ೩೪ ವರ್ಷಗಳ ಸೇವಾವಧಿಯಲ್ಲಿ ಕಂದಾಯ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ ನಂತರ ೧೮ ವರ್ಷಗಳ ಕಾಲ ವಾರ್ತಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ‘ಜಾನಪದ ಜಗತ್ತು’ ಪತ್ರಿಕೆಯಲ್ಲಿ ಸಹಸಂಪಾದಕರಾಗಿ ಸೇವೆ ಸಲ್ಲಿಸಿದ ಅವರು ‘ಅಲೆಗಳು’ ಕವನ ಸಂಕಲನವನ್ನು ಹೊರತರುವುದವರ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದರು. ಮಳೆರಾಯನ ಮುನಿಸು, ಹುಲಿರಾಯನ ಫಜೀತಿ, ಉತ್ತರ ಕರ್ನಾಟಕದ ಜಾನಪದ ಹಬ್ಬಗಳು, ಮುತ್ತು ಬಂದಾವ ಕೇರಿಗೆ, ಹೊನ್ನಬಿತ್ತ್ಯಾರ ಹೊಳಿಸಾಲ, ಆನೆಗೊಂದಿ ಅವಲೋಕನ, ರೈತರ ಆತ್ಮಹತ್ಯೆ ನಾಗರಿಕತೆಯೊಂದು ಕಳಂಕ, ಮುಂಗೋಳಿ ಕೂಗ್ಯಾವ, ವಾರ್ತಾ ಸಂಪದ, ಕೇಳಿ ನನ್ನ ಕೊರೋನ ಕತೆ ಮುಂತಾದ ಗ್ರಂಥಗಳನ್ನು ಹೊರತಂದಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ, ಜಿಲ್ಲೆಯ ಹಲವಾರು ಜಾನಪದ ಕಲಾವಿದರಿಗೆ ಜಾನಪದ ಲೋಕದಿಂದ ಪ್ರಶಸ್ತಿ ಕೊಡಿಸಿದ್ದಾರೆ. ವಿಜ್ಞಾನ ವಿಷಯವನ್ನು ಅಭ್ಯಾಸ ಮಾಡಿದ್ದರೂ ಇವರೊಬ್ಬ ಜಾನಪದ ವಿದ್ವಾಂಸರಾಗಿದ್ದರು ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ಕೊಪ್ಪಳ ಜಿಲ್ಲಾ ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಅವರ ಸಂತಾಪ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಹಿರಿಯ ಪತ್ರಕರ್ತರಾದ ಶರಣಪ್ಪ ಬಾಚಲಾಪೂರ ಮಾತನಾಡಿ, ಆಕಳವಾಡಿಯವರ ನಿಧನ ನನ್ನಲ್ಲಿ ಅತ್ಯಂತ ತಳಮಳವನ್ನುಂಟು ಮಾಡಿದೆ. ನಾನು ಅವರ ಅತ್ಯಂತ ಹತ್ತಿರದ ಒಡನಾಡಿಯಾಗಿದ್ದೆನು. ಅವರು ಟೀಕೆಗಳು ಬಂದಾಗ ಬಹಳ ಸಹಜವಾಗಿ ಸ್ವೀಕರಿಸುತ್ತಿದ್ದರು. ಕೊಪ್ಪಳದ ಪರಿಸರ ಅವರಿಗೆ ಇಷ್ಟವಾಗಿತ್ತು. ಹೀಗಾಗಿ ಅವರು ಕೊಪ್ಪಳದಲ್ಲಿ ಮನೆಮಾಡಿ, ಕೊಪ್ಪಳದವರೇ ಆದರು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡಿ, ಆಕಳವಾಡಿಯವರು ನನ್ನನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ನನ್ನ ಸಾಹಿತ್ಯದ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದ ಅಗ್ರಗಣ್ಯರು. ನಾವೆಲ್ಲ ಒಂದೇ ಕುಟುಂಬದವರಂತಿದ್ದೆವು. ನನ್ನ ಜೊತೆಗೆ ಸಾಹಿತ್ಯಿಕವಾಗಿ ಚರ್ಚೆ ಮಾಡುತ್ತಿದ್ದರು. ಇವರ ನಿಧನದಿಂದ ಸಾಹಿತ್ಯ ಲೋಕ ಬಡವಾಗಿದೆ ಎಂದರು.
ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ ಅವರು ಮಾತನಾಡಿ, ಆಕಳವಾಡಿಯವರು ನನ್ನ ಆತ್ಮೀಯ ಒಡನಾಡಿಗಳಾಗಿದ್ದರು. ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸ್ಥಾಪನೆಯಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದರು. ಜಿಲ್ಲಾ ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾಗಿ, ಕಾಳಿದಾಸ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಸಹೃದಯಿಗಳು ಮತ್ತು ಹಾಸ್ಯಪ್ರಜ್ಞೆಯುಳ್ಳವರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಭಾಗ್ಯನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ರಾಜಶೇಖರ ಪಾಟೀಲ, ನಿವೃತ್ತ ಪ್ರಾಚಾರ್ಯರಾದ ಸಿ.ವಿ. ಜಡಿಯವರ, ನಿವೃತ್ತ ಶಿಕ್ಷಕ ಎಸ್.ಎಂ.ಕಂಬಾಳಿಮಠ, ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಚನ್ನಪ್ಪ ಕಡ್ಡಿಪುಡಿ, ಅಳವಂಡಿ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಚಂದ್ರ ಗೊಂಡಬಾಳ, ಉಪನ್ಯಾಸಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಶಂಭುಲಿಂಗಪ್ಪ ಹರಗೇರಿ, ಶಿಕ್ಷಕರಾದ ಬಸವರಾಜ ಕೋಮಲಾಪೂರ, ಚನ್ನಬಸಪ್ಪ ಬೆಲ್ಲದ, ಹಾಗೂ ಈಶ್ವರಪ್ಪ ದಿನ್ನಿ, ಮುನೀರ ಅಹ್ಮದ್ ಸಿದ್ಧಕಿ, ಪತ್ರಕರ್ತರಾದ ಕುಬೇರ ಮಜ್ಜಿಗಿ, ಉಮೇಶ ಪೂಜಾರ, ಜಗದೀಶ ಹುಯಿಲಗೋಳ ಮುಂತಾದವರು ಇದ್ದರು.

—————————————————–

 

Please follow and like us:
error