ಗಂಗಾವತಿ: “ದಲಿತರ, ದಮನಿತರ ದನಿಯಾಗಿ ಬರೆದಂತೆ ಬದುಕಿದವರು ಡಾ. ಚೆನ್ನಣ್ಣ ವಾಲೀಕಾರರ ನಿಧನ ನಾಡಿನ ಸಾಹಿತ್ಯ ಲೋಕಕ್ಕೆ ಅತ್ಯಂತ ದುಃಖದ ಸಂಗತಿಯಾಗಿದೆ. ಅವರು ದೈಹಿಕವಾಗಿ ನಮ್ಮೊಂದಿಗೆ ಇಂದು ಇಲ್ಲದಿದ್ದರೂ ಅವರ ಬರಹಗಳು ಸದಾ ನಮ್ಮನ್ನು ಮುನ್ನಡೆಸುತ್ತವೆ” ಎಂದು ಸಾಹಿತಿ ಡಾ. ವಿಜಯಕುಮಾರ ವಗ್ಗಾ ತಿಳಿಸಿದರು.
ಅವರು ಡಾ. ಚೆನ್ನಣ್ಣ ವಾಲೀಕಾರ ನಿಧನದ ಪ್ರಯುಕ್ತ ತಾಲೂಕು ಕಸಾಪ ಘಟಕ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ‘ನುಡಿನಮನ’ ಸಲ್ಲಿಸಿ ಮಾತನಾಡುತ್ತಿದ್ದರು.
ಕಸಾಪ ಅಧ್ಯಕ್ಷ ಎಸ್.ಬಿ ಗೊಂಡಬಾಳ ಮಾತನಾಡಿ “ನೇರ ಮಾತುಕತೆಯ ಸರಳ ವ್ಯಕ್ತಿಯಾಗಿದ್ದರು. ಪ್ರತಿಭಟನೆ ಅವರ ಅಸ್ತ್ರವಾಗಿತ್ತು. ಸಾಮಾಜಿಕ ನ್ಯಾಯದ ಪರವಾಗಿ ದನಿ ಎತ್ತಿದ ಧೀಮಂತ ವ್ಯಕ್ತಿಯಾಗಿದ್ದರು. ನಿರಂತರವಾಗಿ ಬರಹದ ಮೂಲಕ ಬದುಕನ್ನು ಕಟ್ಟಿಕೊಂಡವರು” ಎಂದರು.
ಸಾಹಿತಿ ಪವನಕುಮಾರ, ನಾಗರಾಜ ವಲ್ಕಂದಿನ್ನಿ, ಡಾ. ಚನ್ನಣ್ಣ ವಾಲೀಖಾರ ಅವರ ಜೊತೆಗೆ ಘಟನೆಗಳನ್ನು ಮೆಲುಕು ಹಾಕಿದರು. ‘ನುಡಿನಮನ’ದಲ್ಲಿ ಡಾ|| ಶಿವಕುಮಾರ ಮಾಲಿಪಾಟೀಲ್, ರಾಘವೇಂದ್ರ ಮಂಗಳೂರು, ಮುರುಳೀಧರ ಜೋಷಿ, ಗೌರವ ಕಾರ್ಯದರ್ಶಿ ಶ್ರೀನಿವಾಸ ಅಂಗಡಿ, ಕಸಾಪ ಪದಾಧಿಕಾರಿಗಳಾದ ವಿರುಪಾಕ್ಷಪ್ಪ ಶಿರವಾರ, ಮಾರುತಿ ಐಲಿ, ಶಿವಕಾಂತ ತಳವಾರ ಉಪಸ್ಥಿತರಿದ್ದರು.
ಬರೆದಂತೆ ಬದುಕಿ ದಮನಿತರ ದನಿಯಾದವರು ಚೆನ್ನಣ್ಣ ವಾಲೀಕಾರ್- ಡಾ. ವಿಜಯಕುಮಾರ ವಗ್ಗಿ
Please follow and like us: