ಬರದ ನಾಡಿಗೆ ಹರಿದಳು ತುಂಗಭದ್ರೆ : ಕೆರೆ ತುಂಬಿಸುವ ಯೋಜನೆ ಇಲ್ಲಿ ಸಾಕಾರ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕನಕಗಿರಿಯ ಲಕ್ಷ್ಮೀದೇವಿ ಕೆರೆಯೂ ಸೇರಿದಂತೆ ಒಟ್ಟು ೦೭ ಕೆರೆಗಳು ತುಂಗಭದ್ರಾ ನೀರಿನಿಂದ ಇದೀಗ ತುಂಬಿ ತುಳುಕುತ್ತಿದ್ದು, ಈ ಭಾಗದಲ್ಲಿ ಪ್ರಸಕ್ತ ಸರ್ಕಾರ ಕೈಗೊಂಡ ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡಿದೆ. ಡಿ. ೧೪ ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಲಕ್ಷ್ಮೀದೇವಿ ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಪದೇ ಪದೇ ಬರಗಾಲಕ್ಕೆ ತುತ್ತಾಗುವ ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆಯೂ ಒಂದು. ಜಿಲ್ಲೆಯಲ್ಲಿ ತುಂಗಭದ್ರೆ ಹರಿಯುತ್ತಿದ್ದರೂ, ಒಂದೆಡೆ ಸಮೃದ್ಧ ನೀರು, ಇನ್ನೊಂದೆಡೆ, ಹನಿ ನೀರಿಗೂ ತತ್ವಾರ ಎದುರಿಸುವ ಸ್ಥಿತಿ ಜಿಲ್ಲೆಯ ಹಲವೆಡೆ ಇದೆ. ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಭಾಗಶಃ ಪ್ರದೇಶ ನೀರಾವರಿಗೆ ಒಳಪಟ್ಟಿದ್ದು, ಉಳಿದೆಡೆ ರೈತರು ಮಳೆಯನ್ನೇ ಆಶ್ರಯಿಸಬೇಕಿದೆ. ಮಳೆ ಕೈ ಕೊಟ್ಟರೆ ಕುಡಿಯುವ ನೀರಿಗೂ ಬರ. ಕೊಳವೆಬಾವಿಗಳಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ, ಶುದ್ಧ ಕುಡಿಯುವ ನೀರಿಗಾಗಿ ಜನ ಪರಿತಪಿಸುವ ಸ್ಥಿತಿ ಜಿಲ್ಲೆಯ ಹಲವೆಡೆ ಇದೆ. ಇದೀಗ ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರವೆಂಬಂತೆ ಸರ್ಕಾರ ಜಿಲ್ಲೆಯ ಗಂಗಾವತಿ ತಾಲೂಕಿನ ೮ ಕೆರೆಗಳಿಗೆ ತುಂಗಭದ್ರೆಯ ನೀರನ್ನು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೊಂಡು, ಸಾಕಾರಗೊಳಿಸಿದೆ. ೧೩೫ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಈ ಯೋಜನೆಯಲ್ಲಿ ಈಗಾಗಲೆ ೦೭ ಕೆರೆಗಳು ಭರ್ತಿಯಾಗಿದ್ದು, ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ.
ತುಂಗಭದ್ರೆ ಪಕ್ಕದಲ್ಲೇ ಹರಿಯುತ್ತಿದ್ದರೂ, ದಾಹ ತೀರಿಸದೆ ಮುಂದೆ, ಮುಂದೆ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ತುಂಗಭದ್ರೆಯನ್ನು ಕರೆ ತಂದು ಕೆರೆಗಳಿಗೆ ತುಂಬಿಸುವ ಯೋಜನೆ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಜ ಎಸ್ ತಂಗಡಗಿ ಅವರ ಕನಸಿನ ಕೂಸು. ಇದೀಗ ಈ ಕನಸು ನನಸಾಗಿದ್ದು, ಈಗಾಗಲೆ ಯೋಜನೆಯಡಿ ೦೮ ಕೆರೆಗಳ ಪೈಕಿ
ಯೋಜನೆ ಸಾಕಾರಗೊಂಡಿದ್ದು ಹೇಗೆ : ಕೊಪ್ಪಳ ಜಿಲ್ಲೆಯ ೮ ಕೆರೆಗಳಿಗೆ ತುಂಗಭದ್ರಾ ನೀರನ್ನು ತುಂಬಿಸುವ ಈ ಯೋಜನೆ ಮೊದಲಿಗೆ ೧೩೧ ಕೋಟಿ ರೂ. ವೆಚ್ಚಕ್ಕೆ ಅಂದಾಜಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ, ಯೋಜನೆ ೧೪೧ ಕೋಟಿ ರೂ. ಗೆ ಏರಿಕೆಯಾಯಿತು. ಜಿಲ್ಲೆಯ ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು, ದೇವಲಾಪುರ ಸೇರಿದಂತೆ ಒಟ್ಟು ೦೮ ಕೆರೆಗಳನ್ನು ತುಂಗಭದ್ರಾ ನದಿಯಿಂದ ೦. ೨೮೧ ಟಿ.ಎಂ.ಸಿ. ನೀರು ಬಳಸಿ ಭರ್ತಿ ಮಾಡುವ ಯೋಜನೆ ಇದಾಗಿದೆ. ದೇವಲಾಪುರ ಕೆರೆ, ಇಂಗಳದಾಳ ಕೆರೆ, ರಾಂಪುರ ಕೆರೆ, ಲಕ್ಷ್ಮೀದೇವಿ ಕೆರೆ, ಲಾಯದುಣಸಿ ಕೆರೆ, ಕಾಟಾಪುರ ಕೆರೆ, ವಿಠಲಾಪುರ ಕೆರೆ ಹಾಗೂ ಬಸರಿಹಾಳ ಕೆರೆಗಳನ್ನು ಭರ್ತಿ ಮಾಡಲು ಯೋಜನೆ ರೂಪಿಸಲಾಯಿತು. ಈ ಪೈಕಿ ಏಳೂ ಕೆರೆಗಳು ಭರ್ತಿಯಾಗಿದ್ದು, ವಿಠಲಾಪುರ ಕೆರೆ ತುಂಬಿಸುವ ಕಾರ್ಯ ಮಾತ್ರ ಬಾಕಿ ಉಳಿದಿದೆ. ಯೋಜನೆಯಿಂದ ಗಂಗಾವತಿ ತಾಲೂಕಿನ ೧೯, ಯಲಬುರ್ಗಾ-೨೯, ಮತ್ತು ಕುಷ್ಟಗಿ ತಾಲೂಕಿನ ೨೬ ಗ್ರಾಮಗಳು ಸೇರಿದಂತೆ ಒಟ್ಟು ೭೪ ಗ್ರಾಮಗಳ ೧. ೭೮ ಲಕ್ಷ ಜನ ಶುದ್ಧ ಕುಡಿಯುವ ನೀರು ಪಡೆಯಲಿದ್ದಾರೆ.

ಲಕ್ಷಾಂತರ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಏಕೈಕ ಉದ್ದೇಶದಿಂದ ಈ ಯೋಜನೆ ಜಾರಿಯಾಗುತ್ತಿದ್ದರೂ, ಕೆರೆಗಳನ್ನು ಭರ್ತಿ ಮಾಡುವುದರಿಂದ, ಪಾತಾಳಕ್ಕೆ ಕುಸಿದಿರುವ ಅಂತರ್ಜಲ ಮಟ್ಟ ಏರಿಕೆಯಾಗಲಿದೆ. ಈ ಭಾಗದಲ್ಲಿ ಒಂದೆರಡು ವರ್ಷ ಮಳೆಯಾಗದಿದ್ದರೆ, ಅಂತರ್ಜಲ ಕುಸಿದು ಪಂಪ್‌ಸೆಟ್ ಆಧಾರಿತ ನೀರಾವರಿ ಮಾಡುವ ರೈತರು ಆತಂಕದಲ್ಲಿ ಕಾಲ ಕಳೆಯಬೇಕಾಗುತ್ತದೆ. ಆದರೆ ತುಂಗಭದ್ರಾ ನೀರು ಕೆರೆ ತುಂಬುವುದರಿಂದ, ರೈತರ ಈ ಆತಂಕ ದೂರವಾಗುತ್ತದೆ. ವರ್ಷವಿಡೀ ಕೆರೆ ತುಂಬಿಕೊಂಡಿದ್ದರೆ, ಸುತ್ತಮುತ್ತಲಿನ ಬೋರ‍್ವೆಲ್‌ಗಳು ತಂತಾನೆಯೇ ಮರುಜೀವ ಪಡೆದುಕೊಳ್ಳುತ್ತವೆ.
ಕೆರೆ ತುಂಬಿಸುವ ಯೋಜನೆ ಕಾಮಗಾರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕಳೆದ ೨೦೧೪ ರ ಅಕ್ಟೋಬರ್ ೧೪ ರಂದು ಕನಕಗಿರಿಗೆ ಆಗಮಿಸಿ, ಚಾಲನೆ ನೀಡಿದ್ದರು. ಇದೀಗ ಸಾಕಾರಗೊಂಡಿರುವ ಈ ಯೋಜನೆಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ಡಿ. ೧೪ ರಂದು ಕನಕಗಿರಿಗೆ ಭೇಟಿ ನೀಡಿ ತುಂಗಭದ್ರೆಯಿಂದ ತುಂಬಿ ತುಳುಕುತ್ತಿರುವ ಲಕ್ಷ್ಮೀದೇವಿ ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಜನ-ಜಾನುವಾರುಗಳ, ಕೃಷಿಕರ ನೀರಿನ ದಾಹವನ್ನು ತಣಿಸುವಂತಹ ಇಂತಹ ಮಹತ್ವದ ಯೋಜನೆಗಳು ಬರದ ನಾಡಿಗೆ ವರದಾನವಾಗಲಿವೆ.

Please follow and like us: