ಬಜೆಟ್‌ನಲ್ಲಿ ಕುರುಬರಿಗೆ ಅನ್ಯಾಯ- ಹನುಮಂತಪ್ಪ ಕೌದಿ

ಕೊಪ್ಪಳ: ಹಿಂದುಳಿದ ಕುರುಬ ಜಾತಿಗೆ ಕುರುಬರ ಅಭಿವೃದ್ಧಿ ನಿಗಮದ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರೂ ೨೦೨೧-೨೨ನೇ ಸಾಲಿನ ಕರ್ನಾಟಕ ರಾಜ್ಯದ ಆಯವ್ಯಯ (ಬಡ್ಜೆಟ್)ನ್ನು ಮಂಡಿಸಿರುವ ಮುಖ್ಯಮಂತ್ರಿಗಳು ಸಮುದಾಯವನ್ನು ಪರಿಗಣನೆಗೆ ತೆಗದುಕೊಳ್ಳದೇ ಅನ್ಯಾಯ ಮಾಡಿದ್ದಾರೆ ಎಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಆರೋಪಿಸಿದ್ದಾರೆ.
ಮುಂದುವರೆದ ಜಾತಿಗಳಿಗೆ ನೀಡಿರುವ ಅನುದಾನಗಳು, ಅಭಿವೃದ್ಧಿ ನಿಗಮಗಳಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಅತಿ ಹಿಂದುಳಿದ ಜಾತಿಯಾಗಿರುವ ಕುರುಬ ಜಾತಿಗೆ ಮಾತ್ರ ನೀಡಿಲ್ಲ. ಕುರುಬ ಸಮಾಜ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಅಭಿವೃದ್ಧಿ ನಿಗಮದ ಪ್ರಥಮ ಆದ್ಯತೆ ಕುರುಬ ಸಮಾಜಕ್ಕೆ ನೀಡಬೇಕಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎಸ್. ಟಿ. ಮೀಸಲಾತಿ ಪಟ್ಟಿಯಲ್ಲಿರುವ ಕುರುಬ ಜಾತಿಯನ್ನು ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಬೇಕೆಂದು ಸರ್ಕಾರಗಳ  ಮುಂದೆ ಮನವಿ ಮಾಡಿಕೊಂಡಿದ್ದರಿಂದ ಸರ್ಕಾರವು ಕುರುಬರ ಎಸ್. ಟಿ. ಮೀಸಲಾತಿಗಾಗಿ “ಕುಲಶಾಸ್ತ್ರೀಯ ಅಧ್ಯಯನ” ನಡೆಸಲು ಆದೇಶ ನೀಡಿತ್ತು. ಮುಂದಿನ ೬ ತಿಂಗಳಿನೊಳಗೆ ಅಧ್ಯಯನ ಪೂರ್ಣಗೊಳಿಸುವುದಾಗಿ ಸಮಾಜ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು ಅವರು ವಿಧಾನಪರಿಷತ್ತಿನಲ್ಲಿ ಹೇಳಿಕೆ ನೀಡಿರುತ್ತಾರೆ. ಇಂತಹ ಸಮಯದಲ್ಲಿ ಇತರೆ ಸಮಾಜಗಳ ಮೀಸಲಾತಿ ಬೇಡಿಕೆಗಳನ್ನು ಉಲ್ಲೇಖಿಸಿ, ತ್ರಿಸದಸ್ಯ ಸಮಿತಿಯೊಳಗೆ ಕುರುಬ ಸಮಾಜವನ್ನು ಸೇರಿಸುತ್ತಿರುವುದರಿಂದ ಈಗಾಗಲೇ ಪ್ರಕ್ರಿಯೆ
ನಡೆದಿರುವ ನಮ್ಮ ಸಮಾಜಕ್ಕೆ ವಿಳಂಬವಾಗುವುದರಿಂದ ಕುರುಬ ಸಮಾಜವನ್ನು ಸಮಿತಿಯೊಳಗೆ ಸೇರಿಸುವುದನ್ನು ಹಾಲುಮತ ಮಹಾಸಭಾ ವಿರೋಧಿಸುತ್ತದೆ ಎಂದಿದ್ದಾರೆ. ಕುರುಬರು ಹೊಸದಾಗಿ ಮೀಸಲಾತಿ ಬೇಡಿಕೆಯನ್ನು ಇಟ್ಟಿಲ್ಲ. ೧೯೯೧ರಲ್ಲಿ ವಾಲ್ಮೀಕಿ ಸಮಾಜವನ್ನು ಸಮನಾರ್ಥ ಪದದನ್ವಯ ಎಸ್.ಟಿ. ಮೀಸಲಾತಿ ಪಟ್ಟಿಯೊಳಗೆ ಸೇರಿಸಿರುವಂತೆ, ಈಗಾಗಲೇ ಮೀಸಲಾತಿ ಪಟ್ಟಿಯಲ್ಲಿರುವುದನ್ನು ರಾಜ್ಯವ್ಯಾಪಿ ವಿಸ್ತಾರ ಮಾಡಬೇಕು. ಸರ್ಕಾರವು ಮೀಸಲಾತಿಗಾಗಿ ರಚಿಸುತ್ತಿರುವ ಮೀಸಲಾತಿ ಅದ್ಯಯನದ ಉನ್ನತ ಸಮಿತಿ ಕುರುಬರನ್ನು ಸೇರಿಸದಿರಲು ಮನವಿ ಹಾಗೂ ತಾರತಮ್ಯ ಸರಿಪಡಿಸಿ, ಕುರುಬರ ಅಭಿವೃದ್ಧಿ ನಿಗಮಕ್ಕೆ
೫೦೦ ಕೋಟಿ ಅನುದಾನ ನೀಡಬೇಕೆಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ, ಜಿಲ್ಲಾ ಉಪಾಧ್ಯಕ್ಷ ಕುಬೇರ ಮಜ್ಜಿಗಿ, ಜಿಲ್ಲಾ ಮಹಿಳಾ ಪ್ರತಿನಿಧಿ ಜಯಶ್ರೀ ರಮೇಶ ಕೆರೆಹಳ್ಳಿ, ತಾಲೂಕಾ ಅಧ್ಯಕ್ಷ ಹನುಮಂತಪ್ಪ ಸಂಗಾಪೂರ, ಗೌರವಾಧ್ಯಕ್ಷ ದ್ಯಾಮಣ್ಣ ಕರಿಗಾರ, ಶಿವನಗೌಡ ಪೊಲೀಸ್‌ಪಾಟೀಲ್, ಶಿವಾನಂದ ಯಲ್ಲಮ್ಮನವರ, ಪರಶುರಾಮ ಅಣ್ಣಿಗೇರಿ, ಅವರು ಒತ್ತಾಯಿಸಿದ್ದಾರೆ.

Please follow and like us:
error