ಪ್ರಾಣಿಗಳ ಸಾಗಾಣಿಕೆ ಕುರಿತ ಕಾನೂನುಗಳ ಪಾಲನೆ ಅಗತ್ಯ : ವಿಕಾಸ್ ಕಿಶೋರ್ ಸುರಳ್ಕರ್

ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆ

ಕೊಪ್ಪಳ  : ಪ್ರಾಣಿ ಕಲ್ಯಾಣ, ಪ್ರಾಣಿ ಹಿಂಸೆ, ಪ್ರಾಣಿ ವಧೆ ಹಾಗೂ ಪ್ರಾಣಿಗಳ ಸಾಗಾಣಿಕೆಗಾಗಿ ಜಾರಿಯಲ್ಲಿರುವ ಕಾನೂನುಗಳನ್ನು ಪಾಲನೆ ಮಾಡಲು ಮತ್ತು ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಪ್ರಾಣಿ ದಯಾ ಸಂಘ ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ-2020ರ ಕುರಿತು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇತ್ತೀಚೆಗೆ (ಜ.15) ಹಮ್ಮಿಕೊಂಡಿದ್ದ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ವಿವಿಧ ಖಾಸಗಿ ಗೋಶಾಲೆಗಳಿಂದ ಪಿಂಜರಾಪೋಲ್ ಮತ್ತು ಇತರೇ ಗೋಶಾಲೆಗಳಿಗೆ ಸಹಾಯಾನುಧನ ಕಾರ್ಯಕ್ರಮದಡಿ ಸಹಾಯ ಧನ ಮಂಜೂರಾತಿಗಾಗಿ ಸಲ್ಲಿಕೆಯಾದ ಪ್ರಸ್ತಾವನೆಗಳನ್ನು ಪರಿಶೀಲಿಸಲಾಗಿದ್ದು, ಸಹಾಯಧನ ಮಂಜೂರಾತಿಗಾಗಿ ಬೆಂಗಳೂರಿನ ಪಶುಸಂಗೋಪನಾ ಇಲಾಖೆಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲು ಇಲಾಖೆಯ ಉಪನಿರ್ದೇಶಕರು ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ-2020 ಕಾಯ್ದೆ ಅನುಷ್ಠಾನದಿಂದ ಬೀದಿ ದನ/ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಬಹುದಾಗಿದ್ದು, ಅಂತಹ ಜಾನುವಾರುಗಳ ಪೋಷಣೆಗಾಗಿ ಅವಶ್ಯಕ ಸಂಖ್ಯೆಯ ಗೋಶಾಲೆಗಳ ಸ್ಥಾಪನೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ-1960 ;
ಯಾವುದೇ ಪ್ರಾಣಿಯನ್ನು ಹೊಡೆಯುವುದು, ಒದೆಯುವುದು, ಸವಾರಿ ಮಾಡುವುದು, ಅತೀಭಾರ ಹೆರುವುದು, ಚಿತ್ರಹಿಂಸೆ ನೀಡುವುದು, ನಿಗದಿತ ಸಮಯಕ್ಕಿಂತ ಮೀರಿ ಬಂಧಿಸುವುದು, ಮಾಲೀಕನಾಗಿ ಅವಶ್ಯಕ ನೀರು, ಆಹಾರ, ನೆಲೆ ಸಕಾಲದಲ್ಲಿ ನೀಡದೇ ಇರುವುದು, ಪ್ರಾಣಿಗಳನ್ನು ಗಾಯಗೊಳಿಸುವುದು, ಕೊಲ್ಲುವುದು, ಪ್ರಾಣಿಗಳ ಕಾದಾಟ ಮಾಡಿಸುವುದು ಇನ್ನಿತರೇ ಪ್ರಾಣಿ ಹಿಂಸೆ ಕೃತ್ಯಗಳನ್ನು ಈ ಕಾಯ್ದೆಯನ್ವಯ ನಿಷೇಧಿಸಲಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾದಲ್ಲಿ ದಂಡ ಸಹಿತ 3 ತಿಂಗಳವರೆಗೆ ಕಾರಾಗೃಹ ವಾಸದ ಸಜೆ ಇದೆ. ಕೊಂಬು ಸುಡುವುದು, ಕಸಿಮಾಡುವುದು, ಸಾಮಾಜಿಕ ಕಾರಣಗಳಿಗಾಗಿ ಬೀದಿ ನಾಯಿಗಳನ್ನು ಸೆರೆಹಿಡಿಯುವುದು/ಕೊಲ್ಲುವುದು ಇದಕ್ಕೆ ವಿನಾಯಿತಿ ಇದೆ.
ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ-1959 ;
ಯಾವುದೇ ಸಾರ್ವಜನಿಕ ದೇವಸ್ಥಾನ/ ಪೂಜಾ ಸ್ಥಳದಲ್ಲಿ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಾಣಿ ಬಲಿ ಸಂಪೂರ್ಣ ನಿಷೇಧಿಸಲಾಗಿದ್ದು, ಇಂತಹ ಪ್ರಕರಣಗಳು ಕಂಡುಬAದಲ್ಲಿ 6 ತಿಂಗಳ ಸೆರೆವಾಸ, 500 ರೂ. ದಂಡ. ವಾರೆಂಟ್ ಇಲ್ಲದೆ ಪೊಲೀಸ್ ಇನ್ಸ್ಪೆಕ್ಟರ್ ರವರು ದಸ್ತಗಿರಿ ಮಾಡಲು ಅಧಿಕಾರವಿದೆ.
ಮನೋರಂಜನೆಗಾಗಿ ಪ್ರದರ್ಶನ ಮಾಡುವ ಪ್ರಾಣಿಗಳ ನಿಯಮಗಳು-1973 ;
ಸಾರ್ವಜನಿಕರಿಗೆ ಟಿಕೆಟ್ ಮೂಲಕ ಪ್ರವೇಶ ನೀಡಿ ಮನರಂಜನೆ ನೀಡುವ ಸ್ಥಳದಲ್ಲಿ ಅಥವಾ ಆ ಉದ್ದೇಶಕ್ಕಾಗಿ ಬಳಸುವ ಯಾವುದೇ ಪ್ರಾಣಿ, ಮನೋರಂಜನೆಗಾಗಿ ಪ್ರಾಣಿಗಳನ್ನು ಪ್ರದರ್ಶಿಸಲು ಅಥವಾ ತರಬೇತಿ ನೀಡಲು ಅಧಿನಿಯಮದ ಮೇರೆಗೆ ಸಕ್ಷಮ ಪ್ರಾಧಿಕಾರದಿಂದ ನೋಂದಣಿ ಹೊಂದಿರಬೇಕು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ-2020 ;
ಕರ್ನಾಟಕ ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಿಸುವುದಕ್ಕಾಗಿ ಮತ್ತು ಜಾನುವಾರುಗಳ ಸಂರಕ್ಷಣೆಗಾಗಿ ಈ ಕಾಯ್ದೆ ಜಾರಿಯಲ್ಲಿದೆ. ಇದರನ್ವಯ “ಎಲ್ಲಾ ವಯಸ್ಸಿನ ಆಕಳು, ಆಕಳ ಕರು, ಗೂಳಿ ಮತ್ತು ಎತ್ತು ಹಾಗೂ ಹದಿಮೂರು ವರ್ಷದೊಳಗಿನ ಕೋಣ ಮತ್ತು ಎಮ್ಮೆ” ಇವುಗಳಿಗೆ “ಜಾನುವಾರು” ಎನ್ನುತ್ತಾರೆ. ತಾಲ್ಲೂಕಿನ ತಹಶೀಲ್ದಾರ್ ಅಥವಾ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಪಶುವೈದ್ಯಾಧಿಕಾರಿ ದರ್ಜೆಗೆ ಕಡಿಮೆಯಿಲ್ಲದ ಅಧಿಕಾರಿಗಳು ಸಕ್ಷಮ ಪ್ರಾಧಿಕಾರಿಗಳಾಗಿದ್ದಾರೆ.
ಜಾನುವಾರು ಹತ್ಯೆಯ ನಿಷೇಧ ;
ಯಾವುದೇ ಕಾನೂನು, ಪದ್ಧತಿ ಅಥವಾ ಬಳಕೆಗೆ ವಿರುದ್ದವಾಗಿ ಏನೇ ಒಳಗೊಂಡಿದ್ದರೂ, ಯಾವೊಬ್ಬ ವ್ಯಕ್ತಿಯೂ ಜಾನುವಾರು (ಎಲ್ಲಾ ವಯಸ್ಸಿನ ಆಕಳು, ಆಕಳ ಕರು, ಗೂಳಿ ಮತ್ತು ಎತ್ತು ಹಾಗೂ ಹದಿಮೂರು ವರ್ಷದೊಳಗಿನ ಕೋಣ ಮತ್ತು ಎಮ್ಮೆ) ಹತ್ಯೆ ಮಾಡಬಾರದು ಅಥವಾ ಜಾನುವಾರು ಹತ್ಯೆ ನಡೆಸುವಂತೆ ಮಾಡಬಾರದು ಅಥವಾ ಜಾನುವಾರು ಹತ್ಯೆಗಾಗಿ ಕೊಡುವಂತಿಲ್ಲ ಅಥವಾ ಕೊಡುವಂತೆ ಮಾಡುವಂತಿಲ್ಲ ಅಥವಾ ಅನ್ಯತಾ ಯಾವುದೇ ಜಾನುವಾರನ್ನು ಉದ್ದೇಶಪೂರ್ವಕವಾಗಿ ಕೊಲ್ಲುವಂತಿಲ್ಲ ಅಥವಾ ಕೊಲ್ಲಲು ಕೊಡುವಂತಿಲ್ಲ ಅಥವಾ ಕೊಡುವಂತೆ ಮಾಡುವಂತಿಲ್ಲ.
ಜಾನುವಾರು ಸಾಗಾಣಿಕೆಯ ಮೇಲೆ ನಿರ್ಬಂಧ ;
ಯಾವೊಬ್ಬ ವ್ಯಕ್ತಿಯೂ ಯಾವುದೇ ಜಾನುವಾರನ್ನು ರಾಜ್ಯದೊಳಗಿನ ಯಾವುದೇ ಸ್ಥಳದಿಂದ ರಾಜ್ಯದೊಳಗಿನ ಯಾವುದೇ ಸ್ಥಳಕ್ಕೆ ಜಾನುವಾರು ಹತ್ಯೆಗಾಗಿ ಸಾಗಾಣಿಕೆ ಮಾಡುವಂತಿಲ್ಲ ಅಥವಾ ಸಾಗಾಣಿಕೆಗಾಗಿ ಕೊಡುವಂತಿಲ್ಲ, ಪರಂತು ಈ ಪ್ರಕರಣದ ಅಡಿಯಲ್ಲಿ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವು ನಿಯಮಿಸಿದ ವಿಧಾನದಲ್ಲಿ ನಂಬಿಕಸ್ತ ಕೃಷಿ ಅಥವಾ ಪಶು ಸಂಗೋಪನೆಯ ಉದ್ದೇಶಕ್ಕಾಗಿ ಯಾವುದೇ ಜಾನುವಾರು ಸಾಗಾಣಿಕೆಯನ್ನು ಅಪರಾಧವೆಂದು ಅರ್ಥೈಸುವಂತಿಲ್ಲ.
ರೈತರು ಕೃಷಿ ಉದ್ದೇಶಕ್ಕೆ ಸ್ಥಳೀಯವಾಗಿ 15 ಕಿಲೋಮೀಟರ್ ದೂರದವರೆಗೆ ಪರವಾನಗಿ ಇಲ್ಲದೆ ಎರಡು ಹಸು ಮತ್ತು ಎರಡು ಕರುಗಳನ್ನು ಮಾತ್ರ ಕೊಂಡೊಯ್ಯಬಹುದು. ರಾತ್ರಿ ವೇಳೆ ಗೋವುಗಳ ಸಾಗಣೆ ಸಂಪೂರ್ಣ ನಿಷೇಧಿಸಲಾಗಿದೆ. ರಾತ್ರಿ 8 ರಿಂದ ಬೆಳಿಗ್ಗೆ 6ರವರೆಗೆ ಗೋವುಗಳ ಸಾಗಣೆಗೆ ಅವಕಾಶವಿಲ್ಲ. ಬೇಸಿಗೆಯ ಕಾಲದಲ್ಲಿ ಮಾರ್ಚ್ ನಿಂದ ಮೇ ತಿಂಗಳವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ಅವಧಿಯಲ್ಲೂ ಗೋವುಗಳ ಸಾಗಣೆಗೆ ನಿಷೇಧ. ಕೃಷಿ ಅಥವಾ ಪಶುಸಂಗೋಪನೆಯ ಉದ್ದೇಶಕ್ಕೆ ಹಸು, ಕರು, ಎತ್ತು, ಎಮ್ಮೆ, ಕೋಣಗಳನ್ನು ಸಾಗಿಸುವಾಗಲೂ ಸಾಗಣೆಯ ಪರವಾನಗಿ ಹೊಂದಿರಬೇಕಾದುದ್ದು ಕಡ್ಡಾಯ. ಅದರೊಂದಿಗೆ ಮಾಲೀಕತ್ವದ ದಾಖಲೆ ಮತ್ತು ಪಶುವೈದ್ಯಕೀಯ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನೂ ಹೊಂದಿರಬೇಕು. ವಾಹನದಲ್ಲಿರುವ ಗೋವುಗಳ ಸಂಖ್ಯೆ, ಕಳುಹಿಸಿದವರು ಮತ್ತು ಪಡೆಯುವವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ದೊಡ್ಡ ಅಕ್ಷರಗಳಲ್ಲಿ ವಾಹನದ ಮೇಲೆ ಬರೆಯುವುದು ಕಡ್ಡಾಯ. ಜಾನುವಾರುಗಳ ಮಾಲೀಕರು ಮಾಲೀಕತ್ವದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.
ಜಾನುವಾರು ಹತ್ಯೆಗಾಗಿ ಜಾನುವಾರು ಮಾರಾಟ, ಖರೀದಿ ಅಥವಾ ವಿಕ್ರಯದ ನಿಷೇಧ ;
ಯಾವೊಬ್ಬ ವ್ಯಕ್ತಿಯು, ಜಾನುವಾರು ಹತ್ಯೆಗಾಗಿ ಅಥವಾ ಜಾನುವಾರನ್ನು ಹತ್ಯೆ ಮಾಡಲಾಗುತ್ತದೆ ಎಂದು ಗೊತ್ತಿದ್ದು ಅಥವಾ ಹಾಗೆ ನಂಬಲು ಕಾರಣವಿದ್ದಲ್ಲಿ, ಅಂತಹ ಜಾನುವಾರನ್ನು ಖರೀದಿಸತಕ್ಕದ್ದಲ್ಲ, ಮಾರಾಟ ಮಾಡುವಂತಿಲ್ಲ ಅಥವಾ ಅನ್ಯಥಾ ವಿಕ್ರಯ ಮಾಡುವಂತಿಲ್ಲ ಅಥವಾ ಖರೀದಿಸಲು, ಮಾರಾಟ ಮಾಡಲು ಅಥವಾ ಅನ್ಯಥಾ ವಿಕ್ರಯಿಸಲು ನೀಡುವಂತಿಲ್ಲ ಅಥವಾ ಖರೀದಿಸುವಂತೆ, ಮಾರಾಟ ಮಾಡುವಂತೆ ಅಥವಾ ಅನ್ಯಥಾ ವಿಕ್ರಯಿಸುವಂತೆ ಮಾಡುವಂತಿಲ್ಲ.
ಶೋಧಿಸುವ ಅಥವಾ ಜಪ್ತಿ ಮಾಡುವ ಅಧಿಕಾರ ;
ಸಬ್-ಇನ್ಸಪೆಕ್ಟರ್ ದರ್ಜೆಗಿಂತ ಕಡಿಮೆಯಿಲ್ಲದ ಒಬ್ಬ ಪೊಲೀಸ್ ಅಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಿಯು ಈ ಆದ್ಯಾದೇಶದ ಅಡಿಯಲ್ಲಿ ಅಪರಾಧ ಎಸಗಲಾಗಿದೆ ಎಂದು ನಂಬಲು ಕಾರಣವಿದ್ದಲ್ಲಿ ತನಿಖೆ ಮಾಡುವ ಮತ್ತು ಅಂತಹ ಜಾನುವಾರನ್ನು ಹಾಗೂ ಅಂಥ ಅಪರಾಧವನ್ನು ಎಸಗಲು ಬಳಸಿದ ಅಥವಾ ಬಳಸಲು ಉದ್ದೇಶಿಸಿದ ಆವರಣಗಳನ್ನು ಮತ್ತು ಸಾಮಗ್ರಿಗಳನ್ನು ಜಪ್ತಿ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ಮೂರು ವರ್ಷಗಳಿಗೆ ಕಡಿಮೆಯಿಲ್ಲದ ಆದರೆ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರವಾಸ ಮತ್ತು ಒಂದು ಜಾನುವಾರಿಗೆ ಐವತ್ತು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದ ಆದರೆ ಐದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡನೆಗಳು. ಆಪಾದಿತನು, ಅಪರಾಧ ನಿರ್ಣೀತನಾದ ಮೇಲೆ, ವಶಪಡಿಸಿಕೊಂಡ ಜಾನುವಾರು, ವಾಹನ, ಆವರಣಗಳು ಮತ್ತು ಸಾಮಗ್ರಿಗಳನ್ನು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಮುಟ್ಟುಗೋಲು ಮಾಡಬೇಕು. ಯಾರೊಬ್ಬರೂ ಈ ಆದ್ಯಾದೇಶದಲ್ಲಿನ ಯಾವುದೇ ದಂಡನೀಯ ಅಪರಾಧಕ್ಕಾಗಿ ಪ್ರೇರೇಪಿಸಿದರೆ ಅಥವಾ ಅಂಥ ಅಪರಾಧವನ್ನು ಎಸಗಲು ಪ್ರಯತ್ನಿಸಿದರೆ ಈ ಆದ್ಯಾದೇಶದಲ್ಲಿ ಅಂಥ ಅಪರಾಧಕ್ಕಾಗಿ ಉಪಬಂಧಿಸಿದ ದಂಡನೆಯೊAದಿಗೆ ದಂಡಿತನಾಗಬೇಕು.
ವಿನಾಯಿತಿಗಳು ;
ರಾಜ್ಯ ಸರ್ಕಾರದಿಂದ ಸ್ಥಾಪಿತ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಲಸಿಕೆ ಸ್ರಾವ, ರಕ್ತ ಸಾರ, ಅಥವಾ ಯಾವುದೇ ಪ್ರಾಯೋಗಿಕ ಅಥವಾ ಸಂಶೋಧನಾ ಉದ್ದೇಶದ ಮೇಲೆ ಯಾವುದೇ ಜಾನುವಾರನ್ನು ಕೊಯ್ದದ್ದು ಮಾಡಿದರೆ ಅಥವಾ ಸಾರ್ವಜನಿಕ ಹಿತಾಸಕ್ತಿಯಿಂದ ಜಾನುವಾರು ಹತ್ಯೆ ಅವಶ್ಯವಾಗಿರುವುದೆಂದು ರಾಜ್ಯ ಸರ್ಕಾರದ ಅಧಿಕೃತಗೊಳಿಸಿದ ಪಶುವೈದ್ಯಾಧಿಕಾರಿ ಪ್ರಮಾಣಿಸಿದರೆ ಅಥವಾ ಜಾನುವಾರು ಯಾವುದೇ ರೋಗದಿಂದ ಬಳಲುತ್ತಿದ್ದು ಇತರ ಜಾನುವಾರುಗಳಿಗೆ ಸಾಂಕ್ರಾಮಿಕ ಮತ್ತು ಮಾರಣಾಂತಿಕವೆAದು ರಾಜ್ಯ ಸರ್ಕಾರದ ಅಧಿಕೃತಗೊಳಿಸಿದ ಪಶುವೈದ್ಯಾಧಿಕಾರಿ ಪ್ರಮಾಣೀಕರಿಸಿದರೆ ಅಥವಾ ಸಕ್ಷಮ ಪ್ರಾಧಿಕಾರಿಯ ಪ್ರಮಾಣೀಕರಣದೊಂದಿಗೆ ಹದಿಮೂರು ವರ್ಷಗಳ ಮೇಲಿರುವ ಎಮ್ಮೆ ಅಥವಾ ಕೋಣಗಳಿಗೆ ವಿನಾಯಿತಿ ಇದೆ.
ಜಾನುವಾರುಗಳ ಪೋಷಣೆಗಾಗಿ ಸಂಸ್ಥೆಗಳ ಸ್ಥಾಪನೆ ;
ರಾಜ್ಯ ಸರ್ಕಾರವು ಜಾನುವಾರುಗಳ ಪೋಷಣೆಯನ್ನು ಕೈಗೊಳ್ಳುವುದಕ್ಕಾಗಿ ಅಗತ್ಯವೆಂದು ಭಾವಿಸಬಹುದಾದ ಅಂಥ ಸ್ಥಳದಲ್ಲಿ ಗೋಶಾಲೆಯನ್ನು ಒಳಗೊಂಡ ಸಂಸ್ಥೆಯನ್ನು ಸ್ಥಾಪಿಸಬಹುದು ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರಕ್ಕೆ ನಿರ್ದೇಶಿಸಬಹುದು ಅಥವಾ ಕರ್ನಾಟಕ ಸೊಸೈಟಿಗಳ ನೋಂದಣಿ ಅಧಿನಿಯಮದ ಅಡಿಯಲ್ಲಿ ನೋಂದಾಯಿಸಿದ ಸಂಸ್ಥೆ ಅಥವಾ ಸಂಘಕ್ಕೆ ಅನುಮತಿ ನೀಡಬಹುದಾಗಿದೆ ಎಂಬ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸಂಘದ ಸದಸ್ಯ ಕಾರ್ಯದರ್ಶಿ ಹಾಗೂ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಹೆಚ್. ನಾಗರಾಜ್, ಕೊಪ್ಪಳ ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯರು/ ಪ್ರತಿನಿಧಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಖಾಸಗಿ ಗೋಶಾಲೆಗಳ ಸದಸ್ಯರುಗಳು ಉಪಸ್ಥಿತರಿದ್ದರು.

Please follow and like us:
error