ಪ್ರಗತಿಪರತೆ ಹಾಗೂ ಜೀವಪರ ಚಿಂತನೆಯೇ ಕನ್ನಡ ಸಾಹಿತ್ಯದ ಜೀವಾಳ- ಸಿರಾಜ್ ಬಿಸರಳ್ಳಿ

ಕೊಪ್ಪಳ : ಹಿಂದೆಂದಿಗಿಂತಲೂ ವರ್ತಮಾನದ ಕಾಲದಲ್ಲಿ ಬರಹಗಾರರ ಜವಾಬ್ದಾರಿ ಹೆಚ್ಚಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ಶಕ್ತಿಗಳ ಧಮಕನಾರಿ ನೀತಿಯ ವಿರುದ್ದ ಪ್ರತಿರೋಧ ತೋರಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪ್ರಗತಿಪರ ಬರಹಗಾರರು,ಚಿಂತಕರು ಒಂದಾಗಿ ನಿಲ್ಲಬೇಕಿದೆ ಎಂದು ಕವಿಸಮಯ ಸಂಚಾಲಕ  ಸಿರಾಜ್ ಬಿಸರಳ್ಳಿ ಹೇಳಿದರು.


ನಗರದ ಐಬಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜೀವಯಾನ ಬಳಗ ಹಾಗೂ ಕವಿಸಮೂಹz ೧೮೯ನೇ ಕವಿಸಮಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಿರಂತರವಾಗಿ ಹಲವಾರು ವರ್ಷಗಳ ಕಾಲ ನಡೆದ ಕವಿಸಮಯ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ನಿಲ್ಲಿಸಲಾಗಿತ್ತು. ಕಳೆದ ಎರಡೂವರೆ ವರ್ಷಗಳಲ್ಲಿ ಅದನ್ನು ಯಾರಾದರೂ ಮುಂದುವರೆಸಿಕೊಂಡು ಹೋಗಬೇಕಿತ್ತು ಆ ಮೂಲಕ ನಿರಂತವಾದ ಸಾಹಿತ್ಯಿಕ ಚಟುವಟಿಕೆಗಳು ನಡೆಯಬೇಕಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕವಿಸಮಯ ಕಾರ‍್ಯಕ್ರಮವನ್ನು ಆರಂಭಿಸಲಾಗಿದ್ದು ಹೊಸ ಬರಹಗಾರರು ಮತ್ತು ಹಿರಿಯರು ಎಲ್ಲರೂ ಸೇರಿಕೊಂಡು ಮುಂದುವರೆಸಬೇಕಿದೆ. ಹೊಸದಾಗಿ ಬರೆಯುವವರಿಗೆ ವೇದಿಕೆಯಾಗಿ ಮತ್ತು ಪ್ರಗತಿಪರ ಮನಸ್ಸುಗಳೆಲ್ಲಾ ಒಂದೆಡೆ ಸೇರಿ ಅನ್ಯಾಯ ಮತ್ತು ಅಸಮಾನತೆಗಳ ವಿರುದ್ದ ಧ್ವನಿ ಎತ್ತಬೇಕಾಗಿದೆ ಪ್ರಗತಿಪರತೆ, ಜೀವಪರ ಚಿಂತನೆ ಕನ್ನಡ ಸಾಹಿತ್ಯದ ಜೀವಾಳವಾಗಿದ್ದು ಅಂತಹ ಪರಂಪರೆಗೆ ಸೇರಿರುವ ನಾವು ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಕವಿಸಮಯ ಮುನ್ನಡೆಸೋಣ ಎಂದು ಹೇಳಿದರು. ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಅನಸೂಯಾ ಜಾಗೀರದಾರ -ಎಡಬಲಗಳ ಗೊಡವೆಯೇಕೆ, ಅಮರದೀಪ-ಆತಂಕ, ಎ.ಪಿ.ಅಂಗಡಿ-ಗೌರಿ ಮತ್ತು ಗೋರಿ,ರಾಜು ಬಿ.ಆರ್-ನಾನು ಗೌರಿ , ನಾವೆಲ್ಲಾ ಗೋರಿ ಹಾಗೂ ಸಿರಾಜ್ ಬಿಸರಳ್ಳಿ -ಕಪ್ಪುಮುಗಿಲು ಕವನ ವಾಚನ ಮಾಡಿದರು. ಕವಿಗೋಷ್ಠಿಯಲ್ಲಿ ವಾಚನ ಮಾಡಿದ ಕವಿತೆಗಳ ಕುರಿತು ಚರ್ಚೆ ನಡೆಯಿತು. ನಂತರ ಮುಂದಿನ ದಿನಗಳಲ್ಲಿ ಕವಿಸಮಯ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಹೋಗಬೇಕು, ವಾರಕೊಮ್ಮೆ ಸಾಧ್ಯವಾಗದಿದ್ದರೂ ೧೫ ದಿನಕ್ಕೊಮ್ಮೆಯಾದರೂ ನಡೆಯುವಂತಾಗಬೇಕು ಎಂದು ಅಭಿಪ್ರಾಯಪಡಲಾಯಿತು. ಕಾರ್ಯಕ್ರಮದಲ್ಲಿ ಶಿವಾನಂದ ಹೊದ್ಲೂರ ಉಪಸ್ಥಿತರಿದ್ದರು. ಸ್ವಾಗತವನ್ನು ಅಮರದೀಪ್ ಹಾಗು ವಂದನಾರ್ಪಣೆಯನ್ನು ಅನುಸೂಯಾ ಜಾಗೀರದಾರ ಮಾಡಿದರು.

Please follow and like us:
error