ಪ್ರಕಾಶ ಕಂದಕೂರ ಛಾಯಾಚಿತ್ರಕ್ಕೆ `ಜಡ್ಜಸ್ ಚಾಯ್ಸ್’ ಗರಿ

ರಾಷ್ಟ್ರಮಟ್ಟದ `ಸ್ಟೇ ಹೋಂ, ಸ್ಟೇ ಸೇಫ್’ ಛಾಯಾಚಿತ್ರ ಸ್ಪರ್ಧೆ

ಕೊಪ್ಪಳ: ಕಲ್ಕತ್ತಾದ ವೈಡ್ ಆ್ಯಂಗಲ್-ಕಾಂಟೆಂಪರರಿ ಫೋಟೋ ಆರ್ಟಿಸ್ಟ್ ಫೋರಮ್ ಹಾಗೂ ಸುಬ್ರತಾ ಮಿತ್ರ ಆರ್ಚಿವ್ಸ್ ಸಂಯುಕ್ತಾಶ್ರಯದಲ್ಲಿ ನಡೆದ `ಸ್ಟೇ ಹೋಂ, ಸ್ಟೇ ಸೇಫ್’ ವಿಷಯಾಧಾರಿತ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರರ ಛಾಯಾಚಿತ್ರ `ಜಡ್ಜಸ್ ಚಾಯ್ಸ್’ (ತೀರ್ಪುಗಾರರ ಆಯ್ಕೆ) ಪ್ರಶಸ್ತಿಗೆ ಭಾಜನವಾಗಿದೆ. ದೇಶಕ್ಕೆ ಸವಾಲಾಗಿ ಪರಿಣಮಿಸಿರುವ ಕೋವಿಡ್-19 ವೈರಾಣು ಹರಡುವುದನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ಮಾರ್ಚ್ ಎರಡನೇ ವಾರದಿಂದ ಲಾಕ್‍ಡೌನ್ ಅಳವಡಿಸಿಕೊಳ್ಳಲಾಗಿದೆ. ಸರ್ಕಾರದ ಎಲ್ಲ ನಿರ್ದೇಶನಗಳನ್ನು ಅನುಸರಿಸಿ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ನಾವು ಮನೆಯಿಂದಲೇ ಏನಾದರೂ ಮಾಡಬಹುದು ಎಂಬುದನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಬಂದ್ ಆಗಿದ್ದ ಲಾಡ್ಜೊಂದರ ಕಿಟಕಿಗಳಿಂದ ಹೊರಗೇನು ನಡೆಯುತ್ತಿದೆ… ಎಂದು ಇಣುಕಿ ನೋಡುತ್ತಿರುವ ವ್ಯಕ್ತಿಯೊಬ್ಬನ ಪ್ರಶಸ್ತಿ ಪುರಸ್ಕøತ ಕಂದಕೂರರ ಈ ಚಿತ್ರ ಲಾಕ್‍ಡೌನ್ ಸಮಯದಲ್ಲಿ ಜನರ ತುಮುಲಗಳನ್ನು ಪ್ರತಿಫಲನದಂತಿದೆ. ಸಂಪೂರ್ಣವಾಗಿ ಕಪ್ಪು ಬಿಳುಪಿನ ಛಾಯಾಚಿತ್ರಗಳಿಗಾಗಿಯೇ ಆಯೋಜಿಸಲಾಗಿದ್ದ ಈ ಸ್ಪರ್ಧೆಗೆ ದೇಶದ ವಿವಿಧ ಭಾಗಗಳ ಸುಮಾರು 600 ಛಾಯಾಗ್ರಾಹಕರ ಸುಮಾರು 1450 ಛಾಯಾಚಿತ್ರಗಳು ಆಗಮಿಸಿದ್ದವು. ಅಂತರಾಷ್ಟ್ರೀಯ ತೀರ್ಪುಗಾರರಾದ ಮಧು ಸರ್ಕಾರ್, ಅಸಿಸ್ ಸುರ್, ಪಬಿತ್ರ ಸೇನ್ ಶರ್ಮಾ ಸ್ಪರ್ಧೆಯ ಆಯ್ಕೆಗಾರರಾಗಿದ್ದರು. ಭಾಗವಹಿಸಿದ್ದ ಛಾಯಾಗ್ರಾಹಕರಿಗೆ ಫೋರಂನ ಕಾರ್ಯದರ್ಶಿ ಶ್ಯಾಮಲ್‍ದಾಸ್ ಅಭಿನಂದನೆ ಸಲ್ಲಿಸಿದ್ದಾರೆ

Please follow and like us:
error