ಪರಿಹಾರ ಕಾರ್ಯಗಳಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ : ಸಿ.ಸಿ. ಪಾಟೀಲ


ಕೊಪ್ಪಳ ಆ  ಜಿಲ್ಲೆಯಲ್ಲಿ ಸಂಭವಿಸಿದ ನೆರೆ ಹಾವಳಿ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಪರಿಹಾರ ಕಾರ್ಯಗಳಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಎಂದು ಸಚಿವರಾದ ಸಿ.ಸಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಉಂಟಾದ ಅತೀವೃಷ್ಟಿ ಹಾಗೂ ಪರಿಹಾರ ಕ್ರಮಗಳ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಉಂಟಾದ ಹಾನಿಯನ್ನು ಪರಿಶೀಲಿಸಿದ್ದು, ಹಾನಿಯ ಪ್ರಮಾಣದನುಸಾರ ಪರಿಹಾರ ನೀಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನೆರೆ ಹಾವಳಿಯಿಂದ ಮನೆಗಳಿಗೆ ಉಂಟಾದ ಹಾನಿಯನುಸಾರ, ಶೇ. 25 ಕ್ಕಿಂತ ಕಡಿಮೆ ಪ್ರಮಾಣದ ಹಾನಿಗೆ ರೂ.25000/-, ಶೇ.25 ರಿಂದ ಶೇ.75 ರವರೆಗಿನ ಹಾನಿಗೆ ರೂ. 01 ಲಕ್ಷ, ಶೇ.75 ಕ್ಕಿಂತ ಹೆಚ್ಚಿನ ಪ್ರಮಾಣದ ಹಾನಿಗೆ ರೂ. 5 ಲಕ್ಷ ಗಳನ್ನು ಪರಿಹಾರ ಮೊತ್ತವಾಗಿ ನೀಡಲಾಗುತ್ತಿದೆ. ಉಳಿದಂತೆ ನೆರೆ ಹಾವಳಿಯಿಂದ ಹಾನಿಗೊಳಗಾದ ರಸ್ತೆಗಳು, ಸೇತುವೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡಿ.  ನೆರೆ ಹಾವಳಿ ಪರಿಹಾರಕ್ಕಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸಂತ್ರಸ್ತರಿಗೆ ವಿತರಿಸಿ ಸಮರ್ಪಕವಾಗಿ ಬಳಕೆ ಮಾಡಿ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆಯ ಸ್ಲೂಸ್ ಗೇಟ್‌ನ ಅಸಮರ್ಪಕ ನಿರ್ವಹಣೆಯಿಂದ ದುರಸ್ಥಿ ಹಂತ ತಲುಪಿದ್ದರೂ ಸಂಬಂಧಿಸಿದ ಅಧಿಕಾರಿಗಳು ಆ ಕುರಿತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿಲ್ಲ ಎಂದು ಅಸಮಾಧಾನಗೊಂಡ ಸಚಿವರು ಇನ್ನು ಮುಂದಾದರೂ ಜಲಾಶಯದ ಒಟ್ಟಾರೆ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಿ, ಮುಂದೆ ಉಂಟಾಗಬಹುದಾದ ಅನಾಹುತವನ್ನು ತಪ್ಪಿಸಲು ಅಗತ್ಯ ಯೋಜನಾ ಉಪಾಯಗಳನ್ನು ರೂಪಿಸಿ ಜಲಾಶಯದ ಕುರಿತು ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸಿ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳಿಗೆ ಅವಕಾಶ ನೀಡದಂತೆ ಅಗತ್ಯ ಕ್ರಮ ವಹಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದರೊಂದಿಗೆ ಸ್ಲೂಸ್ ಗೇಟ್ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಸಂಬಂಧಿಸಿದ ದುರಸ್ಥಿಗೆ ಅಗತ್ಯ ಅನುದಾನ, ಅಧಿಕಾರಿಗಳ  ಕಾರ್ಯ ನಿರ್ವಹಣೆ ಮತ್ತು ಅಧಿಕಾರಿ/ ಸಿಬ್ಬಂದಿಗಳ ಬದಲಾವಣೆ ಕುರಿತು ವಿವರವನ್ನೊಳಗೊಂಡ ಮಾಹಿತಿಯನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ನೆರೆ ಹಾವಳಿಯಿಂದ ಜೆಸ್ಕಾಂಗೆ ಸಂಬಂಧಿಸಿದ ಹಾನಿಗೆ ಪರಿಹಾರ ನೀಡಲು ಎನ್.ಡಿ.ಆರ್.ಎಫ್ ನಲ್ಲಿ ಅವಕಾಶವಿದ್ದು, ಹಾನಿ ಕುರಿತಂತೆ ವರದಿ ಸಲ್ಲಿಸಿ ಎಂದ ಅವರು ಇತ್ತಿÃಚೆಗೆ ಕೊಪ್ಪಳ ನಗರದ ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದ ವಿದ್ಯಾರ್ಥಿ ವಸತಿ ನಿಲಯದಲ್ಲಿ ವಿದ್ಯುತ್ ಆಘಾತದಿಂದ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಹಾಸ್ಟೆಲ್ ಹಾಗೂ ಶಾಲಾ-ಕಾಲೇಜು ಕಟ್ಟಡಗಳ ಸಮೀಪ ಹಾಯ್ದು ಹೋಗಿರುವ ವಿದ್ಯುತ್ ತಂತಿಗಳಿಗೆ ರಕ್ಷಣಾ ಸಾಧನಗಳನ್ನು ಅಳವಡಿಸಲು ಹಾಗೂ ಸಾಧ್ಯವಿರುವೆಡೆ ವಿದ್ಯುತ್ ತಂತಿಗಳ ಮಾರ್ಗ ಬದಲಾಯಿಸಲು ಕ್ರಮ ಕೈಗೊಳ್ಳುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಂಗಾವತಿ ತಾಲ್ಲೂಕಿನ ಕಂಪ್ಲಿ ಸೇತುವೆ ಹಾಗೂ ವಿರುಪಾಪುರ ಗಡ್ಡೆ ಪ್ರದೇಶಗಳು ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿಯಾಗಿ ನದಿಗೆ ನೀರು ಹರಿಸಿದ ಪರಿಣಾಮ ಹಾನಿಗೊಳಗಾಗಿವೆ. ಆ ಕುರಿತು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಿ. ವಿರುಪಾಪುರ ಗಡ್ಡೆ ಪ್ರದೇಶದಲ್ಲಿರುವ ಅನಧಿಕೃತ ರೆಸಾರ್ಟ್ಗಳ ಕುರಿತು ಪ್ರಕರಣ ನ್ಯಾಯಾಲದಲ್ಲಿದ್ದು, ತೀರ್ಪಿನ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಬೆಳೆ ವಿಮೆ ಕುರಿತಂತೆ ಬ್ಯಾಂಕ್ ಅಧಿಕಾರಿಗಳು ರೈತರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿದ್ದು ಈ ಕುರಿತಂತೆ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲು ಒಂದು ದಿನವನ್ನು ನಿಗದಿ ಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಬೆಳೆ ವಿಮಾ ಕಂಪನಿಗಳು ಪ್ರತಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿವೆ. ಈ ಎಲ್ಲಾ ನೋಡಲ್ ಅಧಿಕಾರಿಗಳ ಹೆಸರು, ದೂರವಾಣಿ ಸಂಖ್ಯೆಯನ್ನೊಳಗೊಂಡ ಮಾಹಿತಿಯನ್ನು ಸಂಬಂಧಿಸಿದ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ನೀಡಬೇಕು ಎಂದು ಸಚಿವರು ಸೂಚನೆ ನೀಡಿದರು.
ನೂತನ ಸರ್ಕಾರದ ಅಭಿವೃದ್ಧಿ ಕುರಿತ ಧ್ಯೆÃಯ ಧೋರಣೆಗಳ ಅನುಸಾರ ಎಲ್ಲಾ ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಎಂದು ಹೇಳಿದರು.
ಇದೇ ಸಂದರ್ಭ ಸಂಸದ ಸಂಗಣ್ಣ ಕರಡಿ, ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಹಾಲಪ್ಪ  ಬಸಪ್ಪ ಆಚಾರ, ಅಮರೇಗೌಡ ಬಯ್ಯಾಪುರ, ಬಸವರಾಜ ದಢೇಸೂಗೂರು, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನೆರೆ ಹಾವಳಿ ಪ್ರದೇಶಕ್ಕೆ ಭೇಟಿ:
ಇದಕ್ಕೂ ಮೊದಲು ಬೆಳಗ್ಗೆ ಸಚಿವರು ಕೊಪ್ಪಳ ತಾಲ್ಲೂಕಿನ ಮುನಿರಾಬಾದ ಗ್ರಾಮದ ಅಂಬೇಡ್ಕರ್ ನಗರ, ಪಂಪಾವನ, ಹೊಳೆ ಮುದ್ಲಾಪುರ ಸೇರಿದಂತೆ ನೆರೆ ಹಾವಳಿಗೆ ಒಳಗಾದ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಮಾತನಾಡಿ, ಪರಿಹಾರ ವಿತರಣೆ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Please follow and like us:
error