ಪಂಚಮಸಾಲಿ ಜನಾಂಗವನ್ನು ಪ್ರವರ್ಗ 2 ಎಗೆ ಸೇರಿಸಲು ಕ್ರಮ: ಸಿದ್ದರಾಮಯ್ಯ

ಬೆಂಗಳೂರು, ಅ.23: ಕರ್ನಾಟಕ ರಾಜ್ಯದಲ್ಲಿ ಎಂಭತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಜನಾಂಗವನ್ನು ಪ್ರವರ್ಗ 2ಎ ಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಾನಸೌಧದ ಆವರಣದ ಬೃಹತ್ ಮೆಟ್ಟಿಲುಗಳ ಮುಂಭಾಗದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಮಸಾಲಿ ಜನಾಂಗವನ್ನು 2ಎಗೆ ಸೇರಿಸಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಸೇರಿ ಸಮಾಜದ ಇತರ ಮುಖಂಡರು ಇಟ್ಟ ಬೇಡಿಕೆಗೆ ತಮ್ಮ ಭಾಷಣದಲ್ಲಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವುದೇ ಜಾತಿಯನ್ನು ಪ್ರವರ್ಗದ ಪಟ್ಟಿಗೆ ಸೇರಿಸಬೇಕಾದರೆ, ಅದಕ್ಕೆ ಅದರದೇ ಆದ ಪದ್ಧತಿ ಅನುಸರಿಸಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಶಿಫಾರಸು ಮಾಡಬೇಕಾಗುತ್ತದೆ. ಆ ಪ್ರಕಾರ ಪಂಚಮಸಾಲಿ ಜನಾಂಗವನ್ನು 2ಎ ಗೆ ಸೇರಿಸಬೇಕು ಎಂದು ಕೊಟ್ಟಿರುವ ಮನವಿಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ತಕ್ಷಣ ಕಳುಹಿಸಿಕೊಡುತ್ತೇನೆ ಎಂದು ಹೇಳಿದರು.

ಅಲ್ಲದೆ ಇಂಗ್ಲೆಂಡಿನಲ್ಲಿರುವ ಕಿತ್ತೂರುರಾಣಿ ಚೆನ್ನಮನ ಖಡ್ಗವನ್ನು ವಾಪಸ್ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಕೇಂದ್ರ ವಿದೇಶಾಂಗ ಸಚಿವರಿಗೆ ಕೂಡಲೇ ಪತ್ರ ಬರೆಯತ್ತೇನೆ. ಮುಂದಿನ ಕೆಲಸ ಕೇಂದ್ರ ಸರಕಾರ ಮಾಡಬೇಕು. ಕೇಂದ್ರದಲ್ಲಿ ನಿಮ್ಮದೇ ಪಕ್ಷದ ಸರಕಾರ ಇದೆ. ಹಾಗಾಗಿ ಅಲ್ಲಿ ಒತ್ತಡ ತರುವ ಕೆಲಸ ನೀವು ಮಾಡಿ ಎಂದು ವೇದಿಕೆಯಲ್ಲಿದ್ದ ಮಾಜಿ ಸಚಿವ ಮುರಗೇಶ ನಿರಾಣಿ ಅವರಿಗೆ ಸಿದ್ದರಾಮಯ್ಯ ಹೇಳಿದರು.

ಅನುದಾನ ಕೊಡಿ ಎಂದು ಈ ಹಿಂದೆ ಯಾವತ್ತೂ ಜಯಮೃತ್ಯುಂಜಯ ಸ್ವಾಮೀಜಿ ಕೇಳಿರಲಿಲ್ಲ. ಆದರೆ ಪಂಚಮಸಾಲಿ ಪೀಠಕ್ಕೆ ಅನುದಾನ ಕೊಡಿ ಎಂದು ಈ ಬಾರಿ ಮನವಿ ಮಾಡಿದ್ದಾರೆ. ಅದರಂತೆ ಪೀಠದ ಅಭಿವೃದ್ಧಿಗೆ ಅನುದಾನ ಕೊಡುತ್ತೇನೆ. ಜೆ.ಎಚ್. ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ ನಾನು ಹಣಕಾಸು ಮಂತ್ರಿಯಾಗಿ ಕೂಡಲಸಂಗಮ ಕ್ಷೇತ್ರದ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ಕೊಟ್ಟಿದ್ದೆ. ಈಗ ನಮ್ಮ ಸರಕಾರ ಬಂದ ಮೇಲೆ ಕೂಡಲಸಂಗಮ ಕ್ಷೇತ್ರದ ಅಭಿವೃದ್ಧಿಗೆ 250 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಮಠಗಳು, ಧಾರ್ಮಿಕ ಕ್ಷೇತ್ರಗಳು ನಡೆಸುವ ಶಿಕ್ಷಣ ಸಂಸ್ಥೆಗಳು ಮತ್ತು ಇನ್ನಿತರ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ನೀಡುವುದನ್ನು ರಾಜಕೀಯ ಕನ್ನಡಕದಿಂದ ನೋಡಬಾರದು ಎಂದು ಇದೇ ವೇಳೆ ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಜಯಬಸವ ಮೃತ್ಯುಂಜಯ ಸ್ವಾಮೀಜಿ, ಸಚಿವ ವಿನಯ್ ಕುಲಕರ್ಣಿ, ಮಾಜಿ ಸಚಿವ ಮುರಗೇಶ ನೀರಾಣಿ, ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಪಂಚಮಸಾಲಿ ಜನಾಂಗವನ್ನು 2ಎ ಗೆ ಸೇರಿಸಬೇಕು. ಇಂಗ್ಲೆಂಡ್‌ನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮನ ಖಡ್ಗವನ್ನು ವಾಪಸ್ ತರಿಸಬೇಕು. ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿಧಾನಸೌಧದ ಮುಂದೆ ಸ್ಥಾಪಿಸಬೇಕು. ಬೈಲಹೊಂಗಲದ ಚೆನ್ನಮ್ಮ ಸಮಾಧಿ ಮತ್ತು ರಾಯಗಢದಲ್ಲಿರುವ ಸಂಗೊಳ್ಳಿ ರಾಯಣ್ಣ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರಿಡಬೇಕು. ಧಾರವಾಡದ ಕರ್ನಾಟಕ ಕಾನೂನು ವಿವಿಗೆ ಸರ್ ಸಿದ್ದಪ್ಪ ಕಾಂಬ್ಳೆ ಹೆಸರಿಡಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಸ್ವಾತಂತ್ರ ಸಂಗ್ರಾಮ ಪ್ರಾರಂಭವಾಗಿದ್ದು 1857 ಎಂದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಚೆನ್ನಮ್ಮ ಥ್ಯಾಕರೆಯನ್ನು ಕೊಂದಿದ್ದು 1824 ರಲ್ಲಿ. ಆಗಿನಿಂದಲೇ ಸ್ವಾತಂತ್ರ ಸಂಗ್ರಾಮ ಪ್ರಾರಂಭವಾಗಿತ್ತು. ಇತಿಹಾಸದಲ್ಲಿ ಈ ವಿಷಯ ಇಲ್ಲ. ಹೀಗಾಗಿ ಇತಿಹಾಸ ಬದಲಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸರಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ 5 ಕೋಟಿ ರೂ. ಮತ್ತು ಸಂಶೋಧನೆ ಮತ್ತು ಅಧ್ಯಯನ ಚಟುವಟಿಕೆಗಳಿಗೆ ಪ್ರತಿ ವರ್ಷ 2 ಕೋಟಿ ರೂ.ನೀಡಲಾಗುವುದು ಎಂದು ರಾಯರಡ್ಡಿ ಭರವಸೆ ನೀಡಿದರು.

ಬೇಡಿಕೆಗಳು:ಪಂಚಮಸಾಲಿ ಜನಾಂಗವನ್ನು 2ಎ ಗೆ ಸೇರಿಸಬೇಕು. ಇಂಗ್ಲೆಂಡ್‌ನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮನ ಖಡ್ಗವನ್ನು ವಾಪಸ್ ತರಿಸಬೇಕು. ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿಧಾನಸೌಧದ ಮುಂದೆ ಸ್ಥಾಪಿಸಬೇಕು. ಬೈಲಹೊಂಗಲದ ಚೆನ್ನಮ್ಮ ಸಮಾಧಿ ಮತ್ತು ರಾಯಗಢದಲ್ಲಿರುವ ಸಂಗೊಳ್ಳಿ ರಾಯಣ್ಣ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರಿಡಬೇಕು. ಧಾರವಾಡದ ಕರ್ನಾಟಕ ಕಾನೂನು ವಿವಿಗೆ ಸರ್ ಸಿದ್ದಪ್ಪ ಕಾಂಬ್ಳೆ ಹೆಸರಿಡಬೇಕು.