ಕೊಪ್ಪಳ ಧೂಳು ಮಕ್ತ ಹೋರಾಟ ಸಮಿತಿಯಿಂದ ನ್ಯಾಯವಾದಿ ರಾಘವೇಂದ್ರ ಪಾನಘಂಟಿಯವರಿಗೆ ಸನ್ಮಾನ

ಕೊಪ್ಪಳ, ೦೨- ಕೊಪ್ಪಳದ ಮುಖ್ಯ ರಸ್ತೆಗಳಲ್ಲಿನ ಧೂಳಿನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ ಜನರಿಗಾಗಿ, ಜನಪರ ಕಾಳಜಿಯಿಂದ ‘ಕೊಪ್ಪಳ ಧೂಳು ಮುಕ್ತ ಹೋರಾಟ ಸಮಿತಿ’ ಯಿಂದ ಹೋರಾಟ ಮಾಡಿತ್ತು. ಹೋರಾಟಗಾರರ ಮೇಲೆ ದಾಖಲಾಗಿದ್ದ ಪ್ರಕರಣದಿಂದ ಇಂದು ನ್ಯಾಯಾಲಯ ಹೋರಾಟಗಾರರನ್ನು ದೋಷ ಮುಕ್ತಗೊಳಿಸಿದ್ದು ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹಿರಿಯ ನ್ಯಾಯವಾದಿ ರಾಘವೇಂದ್ರ ಪಾನಘಂಟಿ ಹೇಳಿದರು.
ಅವರು ತಮ್ಮ ಕಚೇರಿಯಲ್ಲಿ ‘ಕೊಪ್ಪಳ ಧೂಳು ಮಕ್ತ ಹೋರಾಟ ಸಮಿತಿ’ ಯಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಹೋರಾಟಗಾರರ ದಮನ ಮಾಡುವ ಆಡಳಿತಗಾರರ ಧೋರಣೆ ನಡೆಯುವುದಿಲ್ಲ ಎಂದರು.
ಧೂಳಿನಿಂದ ಮಕ್ಕಳು, ವೃದ್ಧರು ಹಾಗೂ ಪಾದಚಾರಿಗಳು ನಿತ್ಯ ನರಕ ಅನುಭವಿಸುತ್ತಿದ್ದಾರೆಂದು ಜನ ಸಾಮಾನ್ಯರ ನೋವನ್ನು ಅರಿತು ಧೂಳು ಮುಕ್ತ ಹೋರಾಟ ಸಮಿತಿ ಜನಪರ ಹೋರಾಟ ಮಾಡಿತ್ತು.
ಹೋರಾಟದ ಫಲವಾಗಿ ಇಂದು ಜಿಲ್ಲಾ ಕೇಂದ್ರದ ಮುಖ್ಯ ರಸ್ತೆ ಸಿಸಿ ರಸ್ತೆಯಾಗಿ ನಿರ್ಮಾಣಗೊಂಡು ಧೂಳಿನಿಂದ ಮುಕ್ತವಾಗಿದೆ ಜನಪರ ಹೋರಾಟವನ್ನು ಯುವಕರು ಮುಂದುವರೆಸಲಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಧೂಳು ಮುಕ್ತ ಹೋರಾಟ ಸಮಿತಿಯ ಸಂತೋಷ ದೇಶಪಾಂಡೆ ಪೊಲೀಸ್ ಇಲಾಖೆ ಅಂದಿನ ಸಚಿವರ ಮಾತು ಕೇಳಿ ಸುಳ್ಳು ಕೇಸ್ ದಾಖಲಿಸಿತ್ತು. ಅಮಾಯಕರಾದ ಹೋರಾಟಗಾರರ ಪರವಾಗಿ ಕೊಪ್ಪಳದ ಜನತೆ ನಿಂತು ಬೆಂಬಲಿಸಿತು ಎಂದರು.
ಹೋರಾಟಗಾರರ ಆತ್ಮಬಲ ಕುಗ್ಗದಂತೆ ನಮ್ಮ ಪರವಾಗಿ ವಾದ ಮಂಡಿಸಿದ ರಾಘವೇಂದ್ರ ಪಾನಘಂಟಿ ಅವರಿಗೆ ಸಮಿತಿಯ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ರಾಜಶೇಖರ ಅಂಗಡಿ, ರಮೇಶ ತುಪ್ಪದ, ಶಿವಕುಮಾರ ಕುಕನೂರ, ಕೆ.ಎಸ್.ಕೊಡತಗೇರಿ, ಮಂಜುನಾಥ ಅಂಗಡಿ, ಹುಲಗಪ್ಪ ಕಟ್ಟಿಮನಿ, ಮಂಜುನಾಥ ಗಡ್ಡದ, ರಾಜೇಶ ಯಾವಗಲ್, ಹಬೀಬ್, ಮಲ್ಲು, ಜಗದೀಶ ಗುತ್ತಿ, ರಾಜೇಂದ್ರ ಜೈನ್, ರವಿಚಂದ್ರ ಮಾಲಿಪಾಟೀಲ್ ಇತರರು ಇದ್ದರು.

Please follow and like us:
error