ನೀರನ್ನು ಮಿತವಾಗಿ ಬಳಸಲು ಪಟ್ಟಣ ಪಂಚಾಯತ್ ಮನವಿ

ಭಾಗ್ಯನಗರ :
ಕೊಪ್ಪಳ ಮೇ.  ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನೀರನ್ನು ಮಿತವಾಗಿ ಬಳಸುವಂತೆ ಮುಖ್ಯಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸತತವಾಗಿ ಮಳೆ ಅಭಾವದಿಂದ ಕೊಳವೆ ಭಾವಿಗಳಲ್ಲಿ ನೀರಿನ ಅಂತರ್ಜಲ ಕಡಿಮೆಯಾಗಿ ಭಾಗ್ಯನಗರ ಪಟ್ಟಣವು ಕುಡಿಯುವ ನೀರಿನ ಅಭಾವವನ್ನು ಎದುರಿಸುತ್ತಿದೆ.  ಪಟ್ಟಣ ಪಂಚಾಯತ್‌ನಿಂದ ನೀರಿನ ಮೂಲಗಳನ್ನು ಶೋಧಿಸಿ ಪರ್ಯಾಯಕ್ರಮ ಜರುಗಿಸಲು ಖಾಸಗಿ ಕೊಳವೆ ಭಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.  ಅಲ್ಲದೆ ಕೊಳವೆಬಾವಿಗಳನ್ನು ಕೊರೆಯಿಸಲು ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿದ್ದು, ಅದರಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಲಾಗುತ್ತಿದೆ. ಅಂತರ್ಜಲ ಮಟ್ಟ ಕಡಿಮೆ ಇರುವುದರಿಂದ ಕೆಲವು ಸ್ಥಳಗಳಲ್ಲಿ ಕೊಳವೆಬಾವಿಗಳು ವಿಫಲವಾಗುತ್ತಿವೆ.
ಭಾಗ್ಯನಗರ ಪಟ್ಟಣ ಪಂಚಾಯತಿ ಎಲ್ಲಾ ದಿಶೆಯಿಂದ ನೀರು ಪೂರೈಕೆ ಮಾಡಲು ಪ್ರಯತ್ನ ಮಾಡುತ್ತಿದ್ದರು ಸಹಿತವಾಗಿ ಕೆಲವು ವಾರ್ಡುಗಳಲ್ಲಿ ಪ್ರಮಾಣಕ್ಕನುಗುಣವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.  ಈ ಬೇಸಿಗೆಯಲ್ಲಿ ನೀರಿನ ಅಭಾವ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಾಗುವುದು.  ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡವುದು ಆದ್ಯ ಕರ್ತವ್ಯವಾಗಿದ್ದರು ಸಹಿತವಾಗಿ ಮಳೆಯ ಅಭಾವದಿಂದಾಗಿ ಬರಗಾಲ ಸ್ಥಿತಿ ಉಂಟಾಗಿದೆ.
ಸಾರ್ವಜನಿಕರು ಲಭ್ಯವಿರುವ ಕುಡಿಯುವ ನೀರನ್ನು ಮುಂದಿನ ಮಳೆಗಾಲದವರೆಗೂ ಮಿತವ್ಯಯವಾಗಿ ಬಳಸುವುದು ಕಡ್ಡಾಯವಾಗಿದೆ.  ಆದಷ್ಟು ನಳಗಳಿಗೆ ತೋಟಿಗಳನ್ನು ಅಳವಡಿಸುವುದು, ಕೊಳವೆಗಳು ಸೋರಿಕೆ ಕಂಡ ತಕ್ಷಣವೆ ಪಟ್ಟಣ ಪಂಚಾಯತಿ ಗಮನಕ್ಕೆ ತರುವುದು. ಜಲ ಸಂಕಷ್ಟದ ಈ ಸಂದರ್ಭದಲ್ಲಿ ಸಾರ್ವಜನಿಕರು ವಾಸ್ತವ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಟ್ಟಣ ಪಂಚಾಯತಿಯೊಂದಿಗೆ ಸಹಕರಿಸಲು ವಿನಮ್ರವಾಗಿ ಕೋರಲಾಗಿದೆ.

Please follow and like us:
error