ನಿಂತಿದ್ದ ಮಿನಿ ಟ್ರಕ್‌ಗೆ ಲಾರಿ ಢಿಕ್ಕಿ: ಕೊರೋನ ಭೀತಿಯಿಂದ ಊರಿಗೆ ಹಿಂದಿರುಗುತ್ತಿದ್ದ ಏಳು ಮಂದಿ ಮೃತ್ಯು

ರಾಯಚೂರು,  : ಕೆಟ್ಟು ನಿಂತಿದ್ದ ಮಿನಿ ಟ್ರಕ್‌ಗೆ ಲಾರಿಯೊಂದು ಢಿಕ್ಕಿ ಹೊಡೆ ಪರಿಣಾಮ ಏಳು ಮಂದಿ ಮೃತಪಟ್ಟ ಘಟನೆ ಹೈದರಾಬಾದ್ ಹತ್ತಿರದ ಶಂಶಾಬಾದ್ ರಿಂಗ್ ರೋಡ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಹೈದರಾಬಾದ್‌ಗೆ ದುಡಿಯಲು ತೆರಳಿದ್ದ ರಾಯಚೂರಿನ ಏಳು ಮಂದಿ ಕೊರೋನ ಭೀತಿಯಿಂದ ಊರಿಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಮೃತರನ್ನು ಸುರಪೂರ ತಾಲೂಕಿನ ಬಸಮ್ಮ ಕಕ್ಕೇರಿ, ಹನುಮಂತ ಕಕ್ಕೇರಿ, ಲಿಂಗಸಗೂರಿನ ಶ್ರೀದೇವಿ ರಾಯದುರ್ಗ, ರಂಗಪ್ಪರಾಯದುರ್ಗ, ಶರಣಪ್ಪ ರಾಯದುರ್ಗ, ಅಮರಪ್ಪರಾಯದುರ್ಗ, ದೇವದುರ್ಗ ತಾಲೂಕಿನ ಕೊಳ್ಳಪ್ಪ ಎಂದು ಗುರುತಿಸಲಾಗಿದೆ. ಇನ್ನುಳಿದಂತೆ ಗಂಭೀರ ಗಾಯಗೊಂಡಿರುವ ನಾಲ್ವರನ್ನು ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಿನಿ ಟ್ರಕ್ ಹೈದರಾಬಾದ್ ಹತ್ತಿರದ ಶಂಶಾಬಾದ್ ರಿಂಗ್ ರೋಡ್ ನಲ್ಲಿ ಕೆಟ್ಟು ನಿಂತಿತ್ತು. ಅದನ್ನು ರಿಪೇರಿ ಮಾಡುತ್ತಿದ್ದ ವೇಳೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ. ಈ ಬಗ್ಗೆ ಶಂಶಾಬಾದ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
error