ನಾನು ಪ್ರಚಾರಪ್ರೀಯನಲ್ಲ ಸತ್ಯಪ್ರಿಯ – ಅಂಡಗಿ


ಕೊಪ್ಪಳ : ಕನಕಗಿರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೆಹಬೂಬ ಹುಸೇನ ಅವರು ಪತ್ರಕರ್ತರು. ಆದರೆ ಅವರು ಸಾಹಿತಿಗಳಲ್ಲ. ದುರ್ದೈವವೆಂದರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾಜಶೇಖರ ಅಂಗಡಿಯವರೂ ಸಾಹಿತಿಯಲ್ಲ. ತಾಲೂಕಾ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಬ್ಬರೂ ಸಾಹಿತಿಗಳಲ್ಲವೆಂದಮೇಲೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಸಾಹಿತಿಗಳೇ ಆಗಬೇಕೆಂಬ ನಿಯಮ ಇವರಿಬ್ಬರಿಗೂ ಗೊತ್ತಿಲ್ಲ. ಹೀಗಾಗಿ ಇವರು ಕನಕಗಿರಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಅಸಾಹಿತಿ ಹುಸೇನದಾಸ ಅವರನ್ನು ಆಯ್ಕೆ ಮಾಡಿರುವುದು ಆಶ್ಚರ್ಯದ ಸಂಗತಿಯೇನಲ್ಲ. ಇವರಿಬ್ಬರಿಗೂ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲ. ಮೆಹಬೂಬ ಹುಸೇನ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಯ ಸಂದರ್ಭದಲ್ಲಿ ಕನ್ನಡದ ಬಾವುಟದ ಬಣ್ಣವನ್ನ ತಲೆಕೆಳಗೆ ಮಾಡಿ ಕನ್ನಡಮ್ಮನಿಗೆ ಅವಮಾನ ಮಾಡಿದ ವರದಿ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಈಗ ಕನಕಗಿರಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಅಸಾಹಿತಿ ಹುಸೇನದಾಸ ಅವರನ್ನು ಆಯ್ಕೆಮಾಡುವುದರ ಮೂಲಕ ಮತ್ತೊಂದು ತಪ್ಪು ಮಾಡಿದ್ದಾರೆ. ಇಷ್ಟೆಲ್ಲಾ ತಪ್ಪುಗಳನ್ನು ಮಾಡಿಯೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದೇ ತಮ್ಮ ತಪ್ಪುಗಳನ್ನು ಮರೆಮಾಚಲು ‘ಹನುಮಂತಪ್ಪ ಅಂಡಗಿ ಪ್ರಚಾರಪ್ರಿಯ’ ಎಂದು ಪತ್ರಿಕಾ ಹೇಳಿಕೆ ನೀಡಿರುವುದು ಖಂಡನೀಯ. ‘ಹನುಮಂತಪ್ಪ ಅಂಡಗಿ ಪ್ರಚಾರಪ್ರಿಯನಲ್ಲ; ಸತ್ಯಪ್ರಿಯ, ವಾಸ್ತವಪ್ರಿಯ’ ಎಂದು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿ ಹನುಮಂತಪ್ಪ ಅಂಡಗಿ ಚಿಲವಾಡಗಿಯವರು ಮೆಹಬೂಬ ಹುಸೇನ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹುಸೇನದಾಸ ಅವರು ಮೂಲತಃ ಕನಕಗಿರಿಯವರಾದರೂ ಈಗ ಅವರು ಬೆಂಗಳೂರು ನಿವಾಸಿಗಳು. ಬೆಂಗಳೂರು ನಿವಾಸಿಗಳಿಗೆ ಮಾತ್ರ ಕೆಂಪೇಗೌಡ ಪ್ರಶಸ್ತಿ ಕೊಡುತ್ತಾರೆ. ಹೀಗಾಗಿ ಹುಸೇನದಾಸ ಅವರು ಬೆಂಗಳೂರು ನಿವಾಸಿಯಾಗಿರುವುದರಿಂದ ಅವರಿಗೆ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ. ನಾನು ಸಾಹಿತಿಯಲ್ಲ ಎಂದು ಹುಸೇನದಾಸ ಅವರೇ ಒಪ್ಪಿಕೊಂಡಿರುವಾಗ ಮೆಹಬೂಬ ಹುಸೇನ ಅವರು ಹುಸೇನದಾಸ ಅವರನ್ನು ಯಾವ ಮಾನದಂಡದ ಆಧಾರದ ಮೇಲೆ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ್ದಾರೆ ಎಂಬುವುದನ್ನು ಕೊಪ್ಪಳ ಜಿಲ್ಲೆಯ ಸಾಹಿತಿಗಳಿಗೆ ಮತ್ತು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಿಗೆ ಸ್ಪಷ್ಟಪಡಿಸಬೇಕು. ಹನುಮಂತಪ್ಪ ಅಂಡಗಿಗೆ ಪ್ರಚಾರದ ಅವಶ್ಯಕತೆ ಇಲ್ಲ. ಹನುಮಂತಪ್ಪ ಅಂಡಗಿ ಕೊಪ್ಪಳ ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ಕಳೆದ ೨೫ ವರ್ಷಗಳಿಂದ ಯಾವ ಸೇವೆಯನ್ನು ಮಾಡಿದ್ದಾನೆ ಎಂಬುವುದು ಜಿಲ್ಲೆಯ ಜನತೆಗೆ ಗೊತ್ತಿದೆ. ಹನುಮಂತಪ್ಪ ಅಂಡಗಿ ಕೊಪ್ಪಳ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ರಾಜ್ಯಮಟ್ಟದ ೧೪ನೆಯ ಮತ್ತು ರಾಜ್ಯಮಟ್ಟದ ೧೭ನೆಯ ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಹಾಗೂ ಕೊಪ್ಪಳ ಜಿಲ್ಲಾಮಟ್ಟದ ೧೦ ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಈಗ ಕೊಪ್ಪಳ ಜಿಲ್ಲಾಮಟ್ಟದ ೧೧ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಿದ್ಧತೆಯಲ್ಲಿದ್ದಾರೆ. ಕೊಪ್ಪಳ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ೩೩ ಅಭಿನಂದನಾ ಗ್ರಂಥಗಳನ್ನು ಹೊರತಂದಿದ್ದಾರೆ. ಕನ್ನಡ ಸಾಹಿತ್ಯಕ್ಕೆ ೮ನೇ ಜ್ಞಾನಪೀಠ ಪ್ರಶಸ್ತಿ ತಂದ ಕೊಟ್ಟ ಡಾ.ಚಂದ್ರಶೇಖರ ಕಂಬಾರ ಅವರನ್ನು ‘ಕಂಬಾರರಿಗೆ ಜ್ಞಾನಪೀಠ ಅಭಿನಂದನೆ’ ಎಂಬ ೬೦೦ ಪುಟದ ಗ್ರಂಥವನ್ನು ಹೊರತಂದು ಉಚಿತವಾಗಿ ಹಂಚಲಾಗಿದೆ. ಹೀಗೆ ಹನುಮಂತಪ್ಪ ಅಂಡಗಿ ತಮ್ಮ ಪಾಡಿಗೆ ತಾವು ಸಾಹಿತ್ಯ ಸೇವೆಯನ್ನು ಮಾಡುತ್ತಲೇ ಬಂದಿದ್ದಾರೆ. ಮೆಹಬೂಬ ಹುಸೇನ ಅವರು ಮಾಡಿದ ತಪ್ಪನ್ನು ಹನುಮಂತಪ್ಪ ಅಂಡಗಿ ಖಂಡಿಸಿದರೆ ಅದನ್ನು ಮೆಹಬೂಬ ಹುಸೇನ ಅವರು ಒಪ್ಪಿಕೊಳ್ಳದೇ ಹನುಮಂತಪ್ಪ ಅಂಡಗಿಯವರು ಪ್ರಚಾರಪ್ರಿಯ ಎಂದು ಹೇಳಿಕೆ ನೀಡಿರುವುದು ಎಷ್ಟು ಸಮಂಜಸ. ಮೆಹಬೂಬ ಹುಸೇನ ಅವರಿಗೆ ಈಗಲೂ ಕಾಲಮಿಂಚಿಲ್ಲ. ಕನಕಗಿರಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಅಸಾಹಿತಿ ಹುಸೇನದಾಸ ಅವರ ಆಯ್ಕೆಯನ್ನು ರದ್ದುಗೊಳಿಸಿ, ಅದೇ ಗ್ರಾಮದ ಗಜಲ್ ಸಾಹಿತಿ ಅಲ್ಲಾಗಿರಿರಾಜ, ಅದೇ ಗ್ರಾಮದ ಸಾಹಿತಿಗಳಾದ ಅಜಮೀರ ನಂದಾಪೂರ, ವೆಂಕಟೇಶ ಜನಾದ್ರಿ, ಮನೋಹರ ಬೊಂದಾಡೆ ಇವರಲ್ಲಿ ಯಾರಾದರೊಬ್ಬ ಸಾಹಿತಿಯನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ, ಗೌರವಗಳನ್ನು ಉಳಿಸಬೇಕು ಎಂದು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿ ಹನುಮಂತಪ್ಪ ಅಂಡಗಿ ಚಿಲವಾಡಗಿಯವರು ಮೆಹಬೂಬ ಹುಸೇನ ಅವರಿಗೆ ತಿರುಗೇಟು ನೀಡಿದ್ದಾರೆ.

Please follow and like us:
error