ನಗರಸಭೆ ಅಧ್ಯಕ್ಷರಾಗಿ ಶ್ರೀಮತಿ ಲತಾ ಗವಿಸಿದ್ದಪ್ಪ ಚಿನ್ನೂರ, ಉಪಾಧ್ಯಕ್ಷರಾಗಿ ಜರೀನಾಬೇಗಂ ಅರಗಂಜಿ ಅಧಿಕೃತ ಘೋಷಣೆ

ಅಧ್ಯಕ್ಷರಾಗಿ ಆಯ್ಕೆಯಾದಾಗ

ಅಧಿಕೃತವಾಗಿ ಕೊಪ್ಪಳ ನಗರಸಭೆ ಕಾಂಗ್ರೆಸ್ ಪಾಲು

Kannadanet ಕೊಪ್ಪಳ :  ನಗರಸಭೆ ಚುನಾವಣೆಯಾಗಿ 31 ತಿಂಗಳ ನಂತರ ನಗರಸಭೆ ಅಸ್ತಿತ್ವಕ್ಕೆ  ಬಂದಿದೆ. ಇಂದು ಅಧ್ಯಕ್ಷ,  ಉಪಾಧ್ಯಕ್ಷರ ಆಯ್ಕೆ ಅಧಿಕೃತ  ಘೋಷಣೆ ಮಾಡಲಾಗಿದೆ. ನಗರಸಭೆ ಯಲ್ಲಿ ಉಪವಿಭಾಗಾಧಿಕಾಗಳ ನೇತೃತ್ವದಲ್ಲಿ  ನಡೆದ ಸಭೆಯಲ್ಲಿ  10 ತಿಂಗಳ ಹಿಂದೆ ನಡೆದಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಅಧಿಕೃತವಾಗಿ   ಘೋಷಣೆ ಮಾಡಲಾಯಿತು.  ಅಧ್ಯಕ್ಷರಾಗಿ  ಶ್ರೀಮತಿ ಲತಾ ಗವಿಸಿದ್ದಪ್ಪ ಚಿನ್ನೂರ, ಉಪಾಧ್ಯಕ್ಷರಾಗಿ ಜರೀನಾಬೇಗಂ ಅರಗಂಜಿ ಆಯ್ಕೆಯಾಗಿದ್ದಾರೆ ಎಂದು ಉಪವಿಭಾಗಾಧಿಕಾರಿ  ನಾರಾಯಣರೆಡ್ಡಿ ಕನಕರೆಡ್ಡಿ ಸಭೆಯ ನಂತರ ಘೋಷಣೆ ಮಾಡಿದರು.  ನಗರಸಭೆಗೆ  ಚುನಾವಣೆ ನಡೆದು 31 ತಿಂಗಳಾದರೂ ಅಧಿಕಾರ ಸ್ವೀಕಾರ ಮಾಡದೇ ಚಲಾವಣೆ ಮಾಡದೇ ಕೋರ್ಟ ತೀರ್ಪಿಗಾಗಿ ನಗರಸಭೆ ಸದಸ್ಯರು ಕಾಯುವಂತಾಗಿತ್ತು.  ಈ ಹಿಂದೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಸಂಬಂಧಿಸಿದಂತೆ ಕೋರ್ಟನಲ್ಲಿ ಪ್ರಕರಣ ನಡೆದಿದ್ದವು.  ಸರಕಾರ ಮೀಸಲಾತಿಯನ್ನು ಬದಲಾಯಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಮತ್ತೊಮ್ಮೆ ಕೋರ್ಟ ಮೊರೆ ಹೋಗಲಾಗಿತ್ತು. ಸುದೀರ್ಘ ಪ್ರಕ್ರಿಯೆಯಲ್ಲಿ 31 ತಿಂಗಳುಗಳು ಕಳೆದು ಹೋಗಿವೆ. ಈ 31 ತಿಂಗಳಲ್ಲಿ ಆಯ್ಕೆಯಾದರೂ ಸಹ ಅಧಿಕಾರ ಚಲಾಯಿಸಲಾಗದೇ ಸದಸ್ಯರು ಕಂಗಾಲಾಗಿದ್ದರು. ಇಡೀ ನಗರಪ್ರದೇಶಗಳಲ್ಲಿಯ ಕೆಲಸಗಳು ಎಲ್ಲವೂ ನಿಂತು ಹೋಗಿದ್ದವು. ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ ಕಳೆದ ತಿಂಗಳಷ್ಟೇ ಪೌರಾಯುಕ್ತ ಮಂಜುನಾಥ ವಿರುದ್ದ  ಇಡೀ ನಗರಸಭೆಯ ಸದಸ್ಯರು ಪಕ್ಷಾತೀತವಾಗಿ ಪ್ರತಿಭಟಿಸಿ ವರ್ಗಾವಣೆಗೆ ಒತ್ತಾಯಿಸಿದ್ದರು.   ಇದೆಲ್ಲದರ ನಡುವೆ ಕೋರ್ಟ ಆದೇಶದಂತೆ ನಗರಾಭಿವೃದ್ದಿ ಕೋಶದ ಅದೇಶದಂತೆ ಇಂದು ಸಭೆ ನಡೆದು ಕರೋನಾ ಸಂಕಷ್ಟದ ನಡುವೆಯೂ  ಅಧಿಕೃತವಾಗಿ ಘೋಷಣೆ ಮಾಡಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ಶ್ರೀಮತಿ ಲತಾ ಗವಿಸಿದ್ದಪ್ಪ ಚಿನ್ನೂರ ಕರೋನಾ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ.  ಜಾಗೃತಿ ಮೂಡಿಸುವ ಕೆಲಸವನ್ನುಮಾಡುತ್ತೇವೆ. ಮುನ್ನೆಚ್ಚರಿಕೆಯೊಂದಿಗೆ ನಗರದ ಅಭಿವೃದ್ದಿ ಮಾಡುತ್ತೇವೆ. ಶಾಸಕರು, ಸರ್ವ ಸದಸ್ಯರು ಮತ್ತು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿದರು.  ಅಧ್ಯಕ್ಷ ಗಾದಿಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾ ಜಿದ್ದಿ ಹೋರಾಟವೇ ನಡೆದಿತ್ತು. ಕೊನೆಗೂ ಕೊಪ್ಪಳ ನಗರಸಭೆ ಕಾಂಗ್ರೆಸ್ ಪಾಲಾಗಿದೆ.ಅಧ್ಯಕ್ಷರು, ಉಪಾಧ್ಯಕ್ಷರು ಪದಗ್ರಹಣ ಮಾಡಿದರು.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಇಬ್ಬರಿಗೂ ತಲಾ 21 ಮತಗಳು ಬಂದಿವೆ. ಈ ಪೈಕಿ ಕಾಂಗ್ರೆಸ್‌ ಪಕ್ಷದ 15, ಪಕ್ಷೇತರ 3 ಹಾಗೂ ಜೆಡಿಎಸ್‌ 2 ಹಾಗೂ ಶಾಸಕ ರಾಘ​ವೇಂದ್ರ ಹಿಟ್ನಾ​ಳ ಮತ ಒಳಗೊಂಡು 21 ಮತಗಳಾಗಿವೆ.
ಬಿಜೆ​ಪಿ​ಯಿಂದ ಸ್ಪರ್ಧೆ ಮಾಡಿದ್ದ ವಿದ್ಯಾ ಹೆಸರೂರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ನಾಗರತ್ನಾ ಶಿವಕುಮಾರ ಕುಕನೂರು ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧೆ ಮಾಡಿ ತಲಾ 12 ಮತಗಳನ್ನು ಪಡೆದರು. ಇವರಿಗೆ ಬಿಜೆಪಿ 10, ಪಕ್ಷೇತರ ಓರ್ವ ಸದಸ್ಯ ಹಾಗೂ ಸಂಸದ ಸಂಗಣ್ಣ ಕರಡಿ  ಮತ ಚಲಾಯಿಸಿದ್ದರು.

ಇಂದು ನಡೆದ ಸಭೆಯಲ್ಲಿ  ಸಾಕಷ್ಟು ಬಂದೊಬಸ್ತ್ ಮಾಡಿದ್ದರೂ ಸಹ ಸಾಮಾಜಿಕ ಅಂತರ ಮರೆತು ಜನ ಸೇರಿದ್ದು ಕಂಡುಬಂತು.  ಈ ಸಂದರ್ಭದಲ್ಲಿ ಸರ್ವ ನಗರಸಭಾ ಸದಸ್ಯರು,  ಕಾಂಗ್ರೆಸ್ ಮುಖಂಡರಾದ  ಕಾಟನ್ ಪಾಷಾ, ಗಿವಿಸಿದ್ದಪ್ಪ ಚಿನ್ನೂರ, ರವಿ ಕುರಗೋಡ, ಶಿವಕುಮಾರ್ ಶೆಟ್ಟರ್,  ಮಾನ್ವಿ ಪಾಷಾ, ಚಿಕನ್ ಪೀರಾಹುಸೇನ್, ಶರಣಪ್ಪ ಸಜ್ಜನ, ಜೆಡಿಎಸ್ ಮುಖಂಡರಾದ ಸೈಯದ್ , ಮೌಲಾಹುಸೇನ ಜಮೇದಾರ್, ಮಹಮ್ಮದ್ ಹುಸೇನಿ,  ಮೆಹಮೂದ್ ಹುಸೇನಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Please follow and like us:
error