ನಗರದಲ್ಲಿ ಸ್ನಾತಕೋತ್ತರ ಕೇಂದ್ರದ ಕಟ್ಟಡ ನಿರ್ಮಿಸಲು ಒತ್ತಾಯ


ಕೊಪ್ಪಳ ಅ- : ಕೊಪ್ಪಳ ಸ್ನಾತಕೋತ್ತರ ಕೇಂದ್ರದಲ್ಲಿ ೬೦೦ ಜನ ವಿದ್ಯಾರ್ಥಿಗಳು ಓದುತ್ತಿದ್ದು, ಅವರಿಗೆ ಸ್ವಂತ ಕಟ್ಟಡವಿಲ್ಲ. ಕೊಪ್ಪಳದ ಹಳೆಯ ಜಿಲ್ಲಾಸ್ಪತ್ರೆಯಲ್ಲಿ ಸ್ನಾತಕೋತ್ತರ ಕೇಂದ್ರ ನಡೆಯುತ್ತಿದೆ. ಕಟ್ಟಡ ಶಿಥಿಲವಾಗಿದೆ.
ಕೊಪ್ಪಳದ ಮಳೆಮಲ್ಲಪ್ಪ ಗುಡಿಯ ಹತ್ತಿರ ೧೩ ಎಕರೆ ಭೂಮಿಯನ್ನು ಸರಕಾರ ಮಂಜೂರು ಮಾಡಿದ್ದು ಈಗ ಕಟ್ಟಡ ಕಟ್ಟಲು ಸರಕಾರದ ಅನುದಾನದ ಅಗತ್ಯವಿದೆ. ಹಿಂದಿನ ಉನ್ನತ ಶಿಕ್ಷಣ ಸಚಿವರು ೨೦ ಕೋಟಿ ಅನುದಾನ ನೀಡುವುದಾಗಿ ನಮಗೆ ವಾಗ್ದಾನ ಮಾಡಿದ್ದರು. ಇಂದಿನ ಉನ್ನತ ಶಿಕ್ಷಣ ಸಚಿವರು ಕಟ್ಟಡ ಕಟ್ಟಲು ಅನುದಾನವನ್ನು ನೀಡಬೇಕು.
ಸ್ನಾತಕೋತ್ತರ ಕೇಂದ್ರದಲ್ಲಿ ೧೦ ವಿಭಾಗಗಳಿದ್ದು, ಪ್ರತಿವಿಭಾಗಕ್ಕೆ ೨ ಉಪನ್ಯಾಸ ಕೊಠಡಿಗಳ ಅಗತ್ಯವಿದೆ. ನಂತರ ಆಫೀಸ್, ಅಧ್ಯಾಪಕರ ಕೊಠಡಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕೊಠಡಿ, ಗ್ರಂಥಾಲಯ, ಸ್ಪೋರ್ಟ್ಸ್ ರೂಮ್, ಶೌಚಾಲಯಗಳು, ಶುದ್ಧ ಕುಡಿಯುವ ನೀರಿನ ಘಟಕ ಮುಂತಾದ ಕಾರ್ಯಕ್ಕೆ ಇನ್ನು ೧೦ ಕೊಠಡಿಗಳ ಅಗತ್ಯವಿದೆ. ಕೊಪ್ಪಳ ಜಿಲ್ಲಾ ಕೇಂದ್ರವಿದ್ದು ಸ್ನಾತಕೋತ್ತರ ಕೇಂದ್ರಕ್ಕೆ ಸ್ವಂತ ಕಟ್ಟಡ ಕಟ್ಟಿಸದಿರುವುದು ವಿಷಾದನೀಯ ಸಂಗತಿ.
ಕಲ್ಯಾಣ ಕರ್ನಾಟ ಅಭಿವೃದ್ಧಿ ಮಂಡಳಿ ಇತ್ತ ಲಕ್ಷವಹಿಸಿ ವಿಶೇಷ ಅನುದಾನ ನೀಡಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಗತ್ಯವಾದ ಹಾಸ್ಟೆಲ್‌ಗಳ ನಿರ್ಮಾಣ ಮಾಡುವ ಅಗತ್ಯವಿದೆ. ಜಿಲ್ಲಾಧಿಕಾರಿಗಳು ಹೆಚ್ಚಿನ ಆಸಕ್ತಿ ತೆಗೆದುಕೊಂಡು ಸ್ನಾತಕೋತ್ತರ ಕೇಂದ್ರ ಕಟ್ಟಡಕ್ಕೆ, ಹಾಸ್ಟೆಲ್‌ಗಳಿಗೆ ಅನುದಾನ ತಂದು ಈ ಕಾರ್ಯವನ್ನು ಮಾಡಲು ಜನರ ಪರವಾಗಿ ವಿನಂತಿಸುತ್ತೇವೆ.
ಇಲ್ಲಿನ ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳು ಸರಕಾರಕ್ಕೆ ಒತ್ತಾಯಿಸಿ ಬೇಗನೇ ಅನುದಾನ ತಂದು ಕಟ್ಟಡ ಕಟ್ಟುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೈದರಾಬಾದ ಕರ್ನಾಟಕ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ ಜಿಲ್ಲಾ ಹೈ-ಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಪಾಟೀಲ, ನಿವೃತ್ತ ಖಜಾನೆ ಅಧಿಕಾರಿ ಎ.ಎಂ.ಮದರಿ ಹಾಗೂ ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಅವರುಗಳು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ

Please follow and like us:
error