ಧರ್ಮ ಬೆಸೆಯುವ ಕೆಲಸವಾಗಬೇಕೇ ವಿನಾ: ಒಡೆಯಬಾರದು : ಶ್ರೀಶೈಲ ಶ್ರೀಗಳು

ಬೆಟಗೇರಿ ಗ್ರಾಮದ ಬಳಿ ಶಬಲೆ ಆರ್‍ಗಾನಿಕ್ ಪ್ರೈವೆಟ್ ಲಿ.ನಿಂದ ನಡೆದ ಶಬಲೆ ಗೋಶಾಲೆ ಹಾಗೂ ಡೈರಿ ಉದ್ಘಾಟನಾ ಸಮಾರಂಭ

ಕೊಪ್ಪಳ: ಧರ್ಮ ಒಡೆಯುವ ಮನಸ್ಥಿತಿಗಳಿಗೆ ಕಳೆದ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ. ಹಾಗಾಗಿ ಧರ್ಮ ಬೆಸೆಯುವ ಕೆಲಸವಾಗಬೇಕೇ ಹೊರತು ಧರ್ಮ ಒಡೆಯುವ ಕೆಲಸ ಆಗಬಾರದು ಎಂದು ಕೊಪ್ಪಳ ತಾಲೂಕಿನ ಹನಕುಂಟಿಯಲ್ಲಿ ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಹೇಳಿದರು.

ಹನಕುಂಟಿಯಲ್ಲಿ ತಾಲೂಕಿನ ಬೆಟಗೇರಿ ಗ್ರಾಮದ ಬಳಿ ಶಬಲೆ ಆರ್‍ಗಾನಿಕ್ ಪ್ರೈವೆಟ್ ಲಿ.ನಿಂದ ನಡೆದ ಶಬಲೆ ಗೋಶಾಲೆ ಹಾಗೂ ಡೈರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಧರ್ಮ ಒಡೆಯಲು ಹೋದವರು ಏನಾದರು ಎಂಬುದು ರಾಜ್ಯದ ಜನರಿಗೆ ಗೊತ್ತಿರುವ ಸಂಗತಿ ಎಂದು ಪರೋಕ್ಷವಾಗಿ ಶ್ರೀಗಳು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಚಾಟಿ ಬೀಸಿದರು. ಧರ್ಮ ವಿಭಜನೆಗೆ ಮುಂದಾಗಿ ಜನರಿಂದ ತಿರಸ್ಕಾರಗೊಂಡ ನಾಯಕರು ಈಗ ಪಶ್ಚಾತ್ತಾಪದಲ್ಲಿದ್ದಾರೆ. ಧರ್ಮ ಯಾವುದೇ ಇರಲಿ, ರಾಜಕೀಯ ಬೆರೆಸುವ ಕೆಲಸವಾಗಬಾರದು. ರಾಜಕಾರಣಿಗಳು ಜನಸೇವೆಗೆ ಮುಂದಾಗಬೇಕೇ ಹೊರತು ಧರ್ಮದಲ್ಲಿ ರಾಜಕಾರಣ ಬೆರೆಸಬಾರದು ಎಂದು ಶ್ರೀಗಳು ಹೇಳಿದರು.