ದೇಶಭಕ್ತಿಯ ಹೆಸರಿನಲ್ಲಿ ಸರಕಾರದ ಅಂಧಭಕ್ತಿ ನಿಜವಾದ ದೇಶದ್ರೋಹ: ಡಾ. ಕನ್ಹಯ್ಯ ಕುಮಾರ್

ಮಂಗಳೂರು, ಆ.10: ಪ್ರಜಾಪ್ರಭುತ್ವದ ಪಾಠ ಮನೆಗಳಿಂದಲೇ ಆರಂಭವಾದಾಗ ಯುವ ಸಮುದಾಯ ಪ್ರಶ್ನಿಸುವ ಮನೋಭಾವದೊಂದಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿಯಲು ಸಾಧ್ಯ ಎಂದು ಡಾ. ಕನ್ಹಯ್ಯ ಕುಮಾರ್ ಅಭಿಪ್ರಾಯಿಸಿದ್ದಾರೆ.

ಅವರು ಇಂದು ನಗರದ ಸಹೋದಯದ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ದಿವಂಗತ ಬಿ.ವಿ. ಕಕ್ಕಿಲ್ಲಾಯ ಅವರ ಶತಾಬ್ಧಿ ಕಾರ್ಯಕ್ರಮದಲ್ಲಿ ‘ಕವಲು ದಾರಿಯಲ್ಲಿ ಭಾರತದ ಯುವಜನರು’ ಎಂಬ ವಿಷಯದಲ್ಲಿ ಮಾತನಾಡಿದರು.

ನಮ್ಮಂತಹ ಯುವ ಸಮುದಾಯವಿಂದು ನಮ್ಮದೇ ಗ್ರಾಮ, ಜಿಲ್ಲೆ ಅಥವಾ ರಾಜ್ಯದ ಇತಿಹಾಸವನ್ನು, ಸ್ವಾತಂತ್ರ ಹೋರಾಟಗಾರರ ಬಗ್ಗೆ ಅಧ್ಯಯನ ಮಾಡುವುದಾಗಲಿ, ಅರಿಯುವ ಪ್ರಯತ್ನವನ್ನೂ ಮಾಡುವುದಿಲ್ಲ. ಇಂತಹ ವ್ಯವಸ್ಥೆಯಲ್ಲಿ ನಮಗೆ ಇತರ ರಾಜ್ಯಗಳ, ದೇಶದ ಇತಿಹಾಸ ಬಗ್ಗೆ ತಿಳಿದಿರಲು ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದರು.

ಸ್ವಾತಂತ್ರ ಬಳಿಕ ಕಳೆದ 70 ವರ್ಷಗಳಲ್ಲಿ ದೇಶದಲ್ಲಿ ಬಹಳಷ್ಟು ಕ್ಷೇತ್ರಗಳಲ್ಲಿ ಬದಲಾವಣೆಗಳಾಗಿವೆ. ಅಭಿವೃದ್ಧಿ ಆಗಿದೆ. ಆದರೆ ಆಗಬೇಕಾಗಿದ್ದ ಪ್ರಮಾಣದಲ್ಲಿ ಆಗಿಲ್ಲ ಎನ್ನುವುದು ನಿಜ. ಇಂದಿನ ಯುವ ಸಮುದಾಯ ಯಾವ ಮಟ್ಟವನ್ನು ಏರಬೇಕಾಗಿತ್ತೋ ಆ ಮಟ್ಟಕ್ಕೆ ತಲುಪಿಲ್ಲ ಎಂಬುದು ವಾಸ್ತವ. ಇದಕ್ಕೆ ಕಾರಣ ಬಾಲ್ಯದಲ್ಲೇ ಹೆತ್ತವರು ಮಕ್ಕಳಿಗೆ ರಾಜನೀತಿ, ರಾಜಕಾರಣಿಗಳ ಬಗ್ಗೆ ಕೆಟ್ಟದಾಗಿ ಬಿಂಬಿಸಿರುವುದು. ಪ್ರಶ್ನಿಸುವ ಹಕ್ಕಿನಿಂದ ದೂರ ಸರಿಸಿರುವುದು ಎಂದವರು ಹೇಳಿದರು.

ನಮ್ಮ ವ್ಯವಸ್ಥೆಯಲ್ಲಿ ನಮಗೆ ನಮ್ಮ ಹಕ್ಕುಗಳ ಬಗ್ಗೆ ಕಲಿಸಲಾಗುತ್ತಿಲ್ಲ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ವಿಷಯಗಳನ್ನು ಆಯ್ದುಕೊಂಡು ಮುಂದೆ ಹೋಗಲು ಪ್ರೇರೇಪಿಸುವ ಬದಲು ಭವಿಷ್ಯದ ಮಾರುಕಟ್ಟೆಯ ಬೇಡಿಕೆಗಳನ್ನು ಹೇಗೆ ಪೂರೈಸಿಕೊಳ್ಳಲು ಸಾಧ್ಯ ಎಂಬುದನ್ನು ಮಾತ್ರವೇ ಹೇಳಿಕೊಡಲಾಗುತ್ತದೆ. ಈ ಮೂಲಕ ಮಕ್ಕಳನ್ನು ಕೇವಲ ಯಂತ್ರಗಳನ್ನಾಗಿಸಲಾಗಿದೆ. ಅದರಿಂದಾಗಿಯೇ ಯುವ ಜನಾಂಗ ಮತಚಲಾವಣೆ ಮಾಡುತ್ತದೆಯಾದರೂ ಓಟಿನ ಮಹತ್ವದ ಬಗ್ಗೆ ಅರಿವಿಲ್ಲವಾಗಿದೆ. ರಾಜಕೀಯ ಪ್ರಬುದ್ಧತೆಯನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಡಾ. ಕನ್ಹಯ್ಯ ಕುಮಾರ್ ವಿಶ್ಲೇಷಿಸಿದರು.

ಇಂದಿನ ಯುವ ಪೀಳಿಗೆ ಮಾಹಿತಿಯ ಕೊರತೆಯನ್ನು ಅನುಭವಿಸುತ್ತಿದೆಯಾದರೂ ನಾವು ನಿರಾಶವಾದಿಗಳಾಗಬೇಕಿಲ್ಲ. ಇಂದಿನ ಪರಿಸ್ಥಿತಿಗೆ ಭೂತಕಾಲ, ಇತಿಹಾಸ ಕಾರಣವಾಗಿರಬಹುದು. ಇಂದಿನ ನಮ್ಮ ನಡವಳಿಕೆ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದನ್ನು ಅರಿತು ನಾವು ಮುನ್ನಡೆಯಬೇಕಿದೆ ಎಂದು ಯುವಕರಿಗೆ ಡಾ. ಕನ್ಹಯ್ಯ ಕರೆ ನೀಡಿದರು.

ಬಿಜೆಪಿ ಇರುವುದರಿಂದಲೇ ಜಾತ್ಯತೀತೆಯ ಅರ್ಥ ತಿಳಿಯುವಂತಾಗಿದೆ. ವೈವಿಧ್ಯತೆಯನ್ನು ಹೊಂದಿರುವ ಈ ದೇಶದಲ್ಲಿ ಪ್ರಜಾಪ್ರಭುತ್ವದ ಮಹತ್ವ ಅರಿಯುವಂತಾಗಿದೆ. ಬಿಜೆಪಿ ಇಲ್ಲವಾಗಿದ್ದರೆ ಇಂದು ಕೂಡಾ ದೇಶದಲ್ಲಿ ಹಲವಾರು ಸಮಸ್ಯೆಗಳು ರಾಜಕೀಯ ಪ್ರಶ್ನೆಗಳಾಗುತ್ತಿರಲಿಲ್ಲ. ಈ ಪ್ರಶ್ನೆಗಳಿಂದಾಗಿಯೇ ಇಂದು ಜನರು ರಾಜಕೀಯ ವ್ಯಕ್ತಿಗಳ ನೈಜತೆಯನ್ನು ಅರಿಯಲು ಸಾಧ್ಯವಾಗಿದೆ ಎಂದು ಡಾ. ಕನ್ಹಯ್ಯ ನುಡಿದರು.

ಡಾ. ಬಿ.ವಿ. ಕಕ್ಕಿಲ್ಲಾಯರು ಸ್ವಾತಂತ್ರ ಹೋರಾಟದ ಸಂದರ್ಭ ಬ್ರಿಟಿಷರಿಂದ ಅಂದು ದೇಶದ್ರೋಹಿಯ ಪಟ್ಟ ಪಡೆದಿದ್ದರು. ಇಂದು ತಮ್ಮ ಹಕ್ಕು, ಬೇಡಿಕೆಗಳಿಗಾಗಿ ಹೋರಾಟ ಮಾಡುವವರನ್ನು ಪೊಲೀಸರಿಂದ ಬಂಧಿಸಿ ದೇಶದ್ರೋಹಿಗಳೆಂಬ ಪಟ್ಟ ಕಟ್ಟಲಾಗುತ್ತದೆ. 100 ವರ್ಷಗಳಲ್ಲಿ ಆಗಿರುವ ಬದಲಾವಣೆ ಇಷ್ಟು ಮಾತ್ರ. ಇಂದು ಬ್ರಿಟಿಷರು ಬಂಧಿಸುವುದಿಲ್ಲ. ಬದಲಾಗಿ ನಮ್ಮದೇ ದೇಶದ ಸರಕಾರದ ಪೊಲೀಸರು ಬಂಧಿಸಿ ನಮ್ಮದೇ ದೇಶದ ಜನರನ್ನು ದೇಶದ್ರೋಹಿಗಳೆಂದು ಕರೆಯುತ್ತಾರೆ ಎಂದವರು ಹೇಳಿದರು.

ಇಂದು ಆಲ್ ಇಂಡಿಯಾ ಸ್ಟೂಡೆಂಟ್ ಫೆಡರೇಶನ್‌ನ ಸದಸ್ಯರನ್ನು, ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರನ್ನು ಅವರ ಸಂಘಟನೆಯನ್ನು ದೇಶದ್ರೋಹಿಗಳನಾಗಿಸಲಾಗುತ್ತಿದೆ. ಇದಕ್ಕೆ ನಾವು ಮತ್ತು ನಮ್ಮ ಹಿಂದಿನ ತಲೆಮಾರೇ ಕಾರಣ. ರಾಜಕೀಯ ಗ್ರಹಿಕೆಯನ್ನು ಹೊಂದಿದ್ದವರು ಕೂಡಾ ಆ ಕಾಲದಲ್ಲಿ ಈ ಪ್ರಶ್ನೆ ಮಾಡಿಲ್ಲದಿರುವುದು ಇದಕ್ಕೆಲ್ಲಾ ಕಾರಣ. ಹಾಗಾಗಿ ಇಂದು ನಾವು ಒಗ್ಗಟ್ಟಾಗಬೇಕಾಗಿದೆ. ಜನಸಮುದಾಯ ಚಳವಳಿಯಾಗಿ ನಮ್ಮ ಹಕ್ಕುಗಳನ್ನು ಪ್ರಶ್ನಿಸುವಂತಾಗಬೇಕಿದೆ ಎಂದವರು ಹೇಳಿದರು.

ಅರ್ಥಶಾಸ್ತ್ರದ ಮೇಲೆ ಧರ್ಮಶಾಸ್ತ್ರದ ಹೊರೆ

ಇಂದು ಅರ್ಥ ಶಾಸ್ತ್ರಕ್ಕೆ ಧರ್ಮಶಾಸ್ತ್ರ ಹೊರೆಯನ್ನು ಹೇರಲಾಗಿದೆ. ಹಾಗಾಗಿಯೇ ಇಂದು ಪ್ರಧಾನ ಮಂತ್ರಿಯಾದವರಿಗೆ ಅರ್ಥ ವ್ಯವಸ್ಥೆ ಇಂದು ಯಾವ ಪರಿಸ್ಥಿತಿಯಲ್ಲಿದೆ ಎಂದು ತಿಳಿದಿದ್ದರೂ, ಅದಕ್ಕೆ ಪರಿಹಾರವೇ ಇಲ್ಲವೆನ್ನುವಾಗ ಧರ್ಮಗಳ ಆಧಾರದಲ್ಲಿ  ಆಡಳಿತ ನಡೆಸುವುದನ್ನು ರೂಢಿಸಿಕೊಂಡಿದ್ದಾರೆ. ಈ ರಾಜಕೀಯ ವ್ಯವಸ್ಥೆ ಬಗ್ಗೆ ಆತಂಕ ಪಡಬೇಕಾಗಿಲ್ಲ. ಆಶಾವಾದಿಗಳಾಗಿದ್ದು, ಇತಿಹಾಸದ ಸತ್ಯಗಳೊಂದಿಗೆ ವಾಸ್ತವವನ್ನು ಯುವ ಜನರ ಮುಂದಿಡುವ ಕಾರ್ಯವನ್ನು ನಾವಿಂದು ಮಾಡಬೇಕಾಗಿದೆ ಎಂದವರು ಹೇಳಿದರು.

ವೇದಿಕೆಯಲ್ಲಿ ಅಮರ್‌ಜೀತ್ ಕೌರ್ ಉಪಸ್ಥಿತರಿದ್ದರು. ಡಾ. ಶ್ರೀನಿವಾಸ ಕಕ್ಕಿಲ್ಲಾಯ ಕಾರ್ಯಕ್ರಮ ನಿರ್ವಹಿಸಿದರು.

ದೇಶಭಕ್ತಿಯ ಹೆಸರಿನಲ್ಲಿ ಅಂಧ ಭಕ್ತಿಯೇ ದೇಶದ್ರೋಹ

ದೇಶಭಕ್ತಿಯ ಹೆಸರಿನಲ್ಲಿ ಸರಕಾರದ ಅಂಧ ಭಕ್ತಿ ಮಾಡುತ್ತಿರುವ ಜನರು ಅವರು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ದೇಶದ ಮೇಲೆ ಪ್ರೀತಿ ಇದ್ದರೆ, ಅಶಕ್ತರಲ್ಲಿ ಪ್ರಶ್ನೆ ಎತ್ತುವುದಲ್ಲ, ಬದಲಾಗಿ ಬಲಾಢ್ಯರಲ್ಲಿ ಪ್ರಶ್ನೆ ಎತ್ತಬೇಕಿದೆ. ಪ್ರಜಾಪ್ರಭುತ್ವವೆಂದರೆ ವಿಪಕ್ಷಕ್ಕೆ ಪ್ರಶ್ನೆ ಕೇಳುವುದಲ್ಲ. ಬದಲಾಗಿ ಸರಕಾರವನ್ನು ಪ್ರಶ್ನಿಸಬೇಕಿರುವುದು. ಅಧಿಕಾರಕ್ಕೆ ಬಂದ ಬಳಿಕ ಜನರು ಅವರ ಭಕ್ತಿ ಮಾಡುವ ಬದಲು ಅವರ ಬಳಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಬೇಕು. ಈ ಪ್ರಕ್ರಿಯೆ ನಮ್ಮ ಮನೆಯಲ್ಲಿ ಆರಂಭವಾಗಬೇಕಿದೆ. ನಮ್ಮ ಶಿಕ್ಷಣ ಸಂಸ್ಥೆ, ಉದ್ಯೋಗದ ಸ್ಥಳಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಈ ಪ್ರಜಾಪ್ರಭುತ್ವದ ನಡವಳಿಕೆಗಳನ್ನು ಕಲಿಸಬೇಕಾಗಿದೆ. ತಂದೆಯನ್ನು ಪ್ರಶ್ನಿಸುವ ಅಧಿಕಾರ ಮಗನಿಗಿಲ್ಲದಿದ್ದರೆ, ಪತಿಯನ್ನು ಪ್ರಶ್ನಿಸುವ ಅಧಿಕಾರ ಪತ್ನಿಗಿಲ್ಲದಿರುವಾಗ ನೆರೆಹೊರೆಯನ್ನು ಪ್ರಶ್ನಿಸುವ ಅಧಿಕಾರಿ ನೆರೆಯವನಿಗೆ ಇಲ್ಲದಾಗ ಸಮಾಜ ಪ್ರಜಾಪ್ರಭುತ್ವವಾಗಲು ಹೇಗೆ ಸಾಧ್ಯ. ಇಂತಹ ವ್ಯವಸ್ತೆಯಲ್ಲಿ ಸಂವಿಧಾನದಲ್ಲಿ ಅದೆಷ್ಟು ಒಳ್ಳೆಯ ಅಂಶಗಳನ್ನು ಬರೆಯಲಾಗಿದ್ದರೂ ಅದರೂ ಕೇವಲ ಪುಸ್ತಕಕ್ಕೆ ಮಾತ್ರವೇ ಸೀಮಿತವಾಗಿ ಬಿಡುತ್ತದೆ ಎಂದು ಡಾ. ಕನ್ಹಯ್ಯ ಕುಮಾರ್ ಅಭಿಪ್ರಾಯಿಸಿದರು.

ಜೆಎನ್‌ಯು ತಲುಪಿದ್ದರಿಂದ ರಾಜಕೀಯ ಪ್ರವೇಶಿಸಿದೆ

‘‘ನನ್ನ ಪೋಷಕರೂ ನಾನು ಇಂಜಿನಿಯರ್ ಆಗಬೇಕೆಂದು ಬಯಸಿದ್ದರು. ಅದಕ್ಕಾಗಿ ಮುಂದೆ ಬಂದಾಗ ಇಂಜಿನಿಯರಿಂಗ್ ಮಾರುಕಟ್ಟೆ ನೆಲಕಚ್ಚಿತ್ತು. ಆಗ ನಾನು ಐಟಿಐ ಕಾಲೇಜಿನಲ್ಲಿ ಎಸಿ, ಫ್ರಿಡ್ಜ್ ರಿಪೇರಿ ಮಾಡುವ ಡಿಪ್ಲೊಮಾ ಮಾಡಲು ಮುಂದಾದೆ. ನಾನೂ ವಿದೇಶಕ್ಕೆ ಹೋಗಿ ಸುಖವಾಗಿರಬಹುದೆಂಬ ಕಲ್ಪನೆ ಮೂಡಿತ್ತು. ಉದ್ಯೋಗ ವೈದ್ಯನದ್ದಾಗಿರಲಿ ಅಥವಾ ಕಸ ಗುಡಿಸುವವನದ್ದಾಗಿರಲಿ ಎಲ್ಲವೂ ಮಹತ್ವದ್ದೇ ಎಂಬುದರ ಬಗ್ಗೆ ಆಲೋಚನೆ ಇರಲಿಲ್ಲ. ಆದರೆ ಡಿಪ್ಲೊಮಾ ಪಡೆದು ಇಂಜಿನಿಯರ್ ಆದರೆ ಅದೇನೋ ಖುಷಿ ಕೊಡಲಿಲ್ಲ. ಹಾಗಾಗಿ ಯುಪಿಎಸ್‌ಸಿ ಬರೆಯೋಣವೆಂದುಕೊಂಡೆ. ಅದಕ್ಕಾಗಿ ಹೊಸದಿಲ್ಲಿಗೆ ಬಂದೆ. ಅದಕ್ಕಾಗಿ ತಯಾರಿ ಮಾಡುತ್ತಿದ್ದಾಗ, ನಾನು ಕೊನೆಗೆ ಜೆಎನ್‌ಯು ತಲುಪಿದೆ. ಅಲ್ಲಿ ತಲುಪಿದ್ದರಿಂದಲೇ ನಾನು ಇಂದು ರಾಜಕೀಯ ಕ್ಷೇತ್ರ ಪ್ರವೇಶಿಸಲು ಕಾರಣವಾಯಿತು ಎಂದು ಡಾ. ಕನ್ಹಯ್ಯ ಹೇಳಿದರು.

ಸಂವಿಧಾನಕ್ಕೆ ಜೈ ಎನ್ನಿ: ವಿದ್ಯಾರ್ಥಿನಿಯ ಸವಾಲಿಗೆ ಕನ್ಹಯ್ಯ ಪ್ರತ್ಯುತ್ತರ

ಕಾರ್ಯಕ್ರಮದಲ್ಲಿ ಸಂವಾದದ ವೇಳೆ ವಿದ್ಯಾರ್ಥಿನಿಯೊಬ್ಬರು ಎದ್ದು ನಿಂತು ನೀವು ಜೈ ಶ್ರೀರಾಮ್ ಎನ್ನಬೇಕು ಮತ್ತು ದೇಶವೆಲ್ಲಾ ಒಂದೇ ಎಂಬ ಪರಿಕಲ್ಪನೆಯಡಿ ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕನ್ಹಯ್ಯ ಕುಮಾರ್ “ನಮ್ಮಲ್ಲಿ ಜೈಶ್ರೀರಾಮ್ ಎಂದು ಹೇಳುವುದಿಲ್ಲ ಬದಲಾಗಿ ಜೈ ಸೀತಾರಾಮ್ ಎನ್ನುತ್ತಾರೆ. ಮತ್ತೆ ನೀವು ಬೇಕಾದರೆ ಜೈ ಶ್ರೀರಾಮ್ ಎನ್ನಬಹುದು, ಅದಕ್ಕೆ ನಿಮಗೆ ಸ್ವಾತಂತ್ರವಿದೆ. ಜೈ ಹನುಮಾನ್ ಏನು ಬೇಕಾದರೂ ಹೇಳಬಹುದು. ಯಾಕೆಂದರೆ ಈ ಮಾತುಗಳನ್ನು ಹೇಳಲು ನಮಗೆ ನಮ್ಮ ಸಂವಿಧಾನ ಅಧಿಕಾರ, ಅನುಮತಿ ನೀಡುತ್ತದೆ. ಅದಕ್ಕಾಗಿ ನೀವು ಸಂವಿಧಾನಕ್ಕೆ ಜೈ ಹೇಳಿ” ಎಂದರು.

“ದೇಶ ಒಂದೇ ಅದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಹುಟ್ಟಿ ಬೆಳೆದ ಸಂಸ್ಕೃತಿಯಲ್ಲಿ ಯಾವುದೇ ದೇವರನ್ನು ಒಬ್ಬರಾಗಿ ಗುರುತಿಸಲಾಗಿಲ್ಲ. ರಾಮನ ಜತೆ ಸೀತೆ, ಕೃಷ್ಣನ ಜತೆ ರಾಧೆಯನ್ನು ಆರಾಧಿಸಲಾಗುತ್ತದೆ. ನಾನು ಪಿಎಚ್‌ಡಿ ಮಾಡಿದ್ದೇನೆ. ವಿದ್ಯಾರ್ಥಿನಿಯಾಗಿರುವ ನೀವೂ ಪಿಎಚ್‌ಡಿ ಮಾಡಬೇಕೆಂಬುದು ನನ್ನ ಆಶಯ. ನೀವು ಪಿಎಚ್‌ಡಿ ಮಾಡುವಾಗ ರಾಮಾಯಣದ ಮೇಲೆಯೇ ಮಾಡಿ ಎಂಬುದು ನನ್ನ ಆಶಯ. ದೇಶದಲ್ಲಿ ಸುಮಾರು 300ಕ್ಕೂ ಅಧಿಕ ರಾಮಾಯಣಗಳಿವೆ. ಹಿಮಾಚಲ ಪ್ರದೇಶದಲ್ಲಿ ತ್ರಿಲೋಕ್‌ ನಾಥ ಮಂದಿರದಲ್ಲಿ ಭಗವಾನ್ ಬುದ್ಧನ ಮೂರ್ತಿಯ ತಲೆಯ ಮೇಲೆ ಶಿವನ ಮೂರ್ತಿ ಇದೆ. ಅಲ್ಲಿ ಹಿಂದೂ ಸಾಧುಗಳು ಬಂದು ಪೂಜೆ ಮಾಡುತ್ತಾರೆ. ಬಳಿಕ ಬೌದ್ಧ ಸನ್ಯಾಸಿಗಳು ಪೂಜಿಸುತ್ತಾರೆ. ಇದು ಭಾರತದ ವಿಶೇಷತೆ, ವೈವಿಧ್ಯತೆ. ಇದು ದೇಶ ನನ್ನದು. ಈ ದೇಶವನ್ನು ನಾನು ಪ್ರೀತಿಸುತ್ತೇವೆ. ನನ್ನ ಪಾಲಿಗೆ ದೇಶದ ಮೇಲಿನ ಪ್ರೀತಿ ಎಂದರೆ ಅದು ತೋರಿಕೆಯ ವಸ್ತು ಅಲ್ಲ” ಎಂದು ಡಾ. ಕನ್ಹಯ್ಯ ಹೇಳಿದರು.

Please follow and like us:
error