ದೆಹಲಿಯ ಕೋಮುಗಲಭೆಯಿಂದ ತತ್ತರಿಸಿದ್ದು ಕೂಡಲೆ ಶಾಂತಿ ನೆಲಸುವಂತೆ ಕ್ರಮಕ್ಕೆ ಒತ್ತಾಯಿಸಿ ಮನವಿ


ಕೊಪ್ಪಳ.ಮಾ.೨. ನಮ್ಮ ದೇಶದ ರಾಜಧಾನಿಯಾದ ದೆಹಲಿಯಲ್ಲಿ ಕೋಮುಗಲಭೆಯಿಂದ ತತ್ತರಿಸಿದ್ದು ಕೂಡಲೇ ಶಾಂತಿ ನೆಲೆಸುವಂತೆ ಕ್ರಮಕೈಗೊಳ್ಳಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಯವರಿಗೆ ಕರ್ನಾಟಕ ಮುಸ್ಲಿಂ ಜಮಾಅತ್‌ನ ಜಿಲ್ಲಾ ಸಮಿತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ದೆಹಲಿಯ ಈಶಾನ್ಯ ಭಾಗದಲ್ಲಿ ಕಳೆದ ಒಂದು ವಾರದಿಂದ ನಡೆದ ಹಿಂಸೆ, ದೊಂಬಿಗಳು, ಜಗತ್ತನೇ ತಲ್ಲಣಗೊಳಿಸುತ್ತಿವೆ, ಸಾವಿಗೆ ಈಡಾದವರು ಯಾವುದೇ ಜಾತಿ ಧರ್ಮದವರಾಗರಲಿ ಅವರು ನಮ್ಮ ಅಣ್ಣ ತಮ್ಮಂದಿರೇ, ಕೈಯಲ್ಲಿ ಗನ್ನು, ಲಾಂಗ್, ಮಚ್ಚು, ಕಲ್ಲುಗಳನ್ನು ಹಿಡಿದು ಬೀದಿ ಬೀದಿಯಲ್ಲಿ ತಿರುಗಿ ಮುಗ್ಧ ಜೀವಗಳೊಂದಿಗೆ ರಕ್ತದ ಓಕಳಿಯಾಡಿದ್ದಾರೆ, ದ್ವೇಷ ಅಸುಯೆಯಲ್ಲಿ ದೆಹಲಿ ಧಗ ಧಗ ಉರಿದು ನರಕವಾಗಿದೆ. ೪೦ಕ್ಕೂ ಸಾವುಗಳು ಸಂಭಸಿವೆ, ನೂರಾರು ಜನರಿಗೆ ಗಾಯಗಳಾಗಿವೆ, ಕೆಲವರು ಮನೆ ಮಠಗಳನ್ನು ಕಳೆದುಕೊಂಡು ಮಕ್ಕಳ ಮರಿಗಳೊಂದಿಗೆ, ಬೀದಿಗೆ ಬಿದ್ದಿದ್ದಾರೆ. ಹಾಗೂ ಮಸೀದಿ, ದರ್ಗಾ, ಮಂದಿರಗಳನ್ನೂ ದ್ವಂಸಗೊಳಿಸಿ ಅಲ್ಲಿಯ ರಾಜಕಾರಣಿಗಳ ಪ್ರಚೋದನಕಾರಿ ಭಾಷಣದಿಂದ ಜನ ಉದ್ರಿಕ್ತಗೊಂಡಿದ್ದಾರೆ. ಪೋಲಿಸರು, ಅಧಿಕಾರಿಗಳು ಸ್ವಾರ್ಥ ರಾಜಕಾರಣಿಗಳ ಕೈಗೊಂಬೆಯಾಗಿ ಪರಿಸ್ಥಿತಿಯನ್ನು ನಿಭಾಯಿಸುವುದನ್ನು ಬಿಟ್ಟು ಸಾವುನೋವುಗಳಿಗೆ ಸಾಕ್ಷಿಯಾಗಿದ್ದಾರೆ.
ಅನೇಕ ಸಣ್ಣ ಪುಟ್ಟ ವ್ಯಾಪಾರಿಗಳು ಶಾಶ್ವತವಾಗಿ ಬದುಕನ್ನು ಕಳೆದುಕೊಂಡಿದ್ದಾರೆ. ಶಾಲೆಗಳಿಗೆ ಹೋಗುವ ಮಕ್ಕಳು ಭಯ ಭೀತರಾಗಿದ್ದಾರೆ, ನಮ್ಮ ರಾಜಧಾನಿಯಲ್ಲಿ ಈ ರೀತಿಯಾಗಿ ಅಮಾಯಕರುನ್ನು ಕೊಲ್ಲುವುದು, ಹಿಂಸೆ, ದೊಂಬಿ, ಲಾಂಗ್, ಲಂಗುಲಗಾಮಿಲ್ಲದೆ ನಡೆಯುತ್ತಿರುವುದು ವಿಶ್ವದ ಮುಂದೆ ನಮ್ಮ ರಾಷ್ಟ್ರ ತಲೆತಗ್ಗಿಸುವಂತಾಗಿದೆ. ಕೊಪ್ಪಳ ಜಿಲ್ಲಾ ಕರ್ನಾಟಕ ಮುಸ್ಲಿಂ ಜಮಾಅತ್ ಇದನ್ನು ಬಲವಾಗಿ ಖಂಡಿಸುತ್ತದೆ. ಹಿಂದೂ, ಮುಸ್ಲಿಂ, ಕ್ರೈಸ್ತರ ಮಧ್ಯೆ ಕಿಡಿ ಹತ್ತಿಸಿ ಅವರ ಹೆಣದ ಹುರಿಯಲ್ಲಿ ಚಳಿಕಾಯಿಸುವ ಪಟ್ಟ ಭದ್ರ ಹಿತಾಸಕ್ತಿಗಳ ಮಟ್ಟ ಹಾಕಬೇಕಾಗಿದೆ, ಭಾರತಾಂಬೆಯ ಕಣ್ಣಿರನ್ನು ಒರೆಸಬೇಕಾಗಿದೆ. ದೆಹಲಿಯಲ್ಲಿ ಶಾಂತಿ ನೆಲೆಸಬೇಕಾಗಿದೆ, ಅಮಾಯಕರ ಬದುಕು ಮತ್ತೆ ಕಟ್ಟಿಕೊಡಬೇಕಾಗಿದೆ.
ಸಾವಾದವರು ಯಾವುದೇ ಧರ್ಮದ ಜಾತಿಗೆ ಸೇರಿದವರಿರಲಿ ಅವರು ನಮ್ಮ ಮನೆಯ ಅಣ್ಣ ತಮ್ಮಂದಿರೆಂದು ಭಾವಿಸಿ ಶಾಂತಿ ಸಹಬಾಳ್ವೆ ಪುನರ್ ನಿರ್ಮಿಸಬೇಕಾಗಿದೆ. ಹಿಂಸೆಯಿಂದ ಏನೇನು ಸಾಧಿಸಲು ಸಾಧ್ಯವಿಲ್ಲ ಎಂದು ಜಗತ್ತಿಗೆ ಹೇಳಿಕೊಟ್ಟ ಮಹಾತ್ಮ ಗಾಂಧೀಜಿ ಹುಟ್ಟಿದ ನಾಡಿನಲ್ಲಿ ಜನಿಸಿದವರು, ಬುದ್ಧನ ಶಾಂತಿ ಮಂತ್ರದಿಂದ ಬದುಕುತ್ತಿರುವ ಭಾರತ ನಮ್ಮದು, ಡಾ|| ಬಿ.ಆರ್. ಅಂಬೇಡ್ಕರವರ ಆಶಯದಂತೆ ಜೀವಿಸುವ ಪುಣ್ಯ ಭೂಮಿ ನಮ್ಮದು, ಇಂತಹ ನೆಲದಲ್ಲಿ ಕೋಮು ಭಾವನೆ ಸೃಷ್ಟಿಸಿ ಶಾಂತಿಗೆ ಭಂಗ ತರುತ್ತಿರುವ ದುಷ್ಟರನ್ನು ಸದೆಬಡಿಯಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ಒತ್ತಾಯ ಪಡಿಸುತ್ತದೆ. ಹಾಗೂ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಮಹಿಳೆಯರು ಎನ್.ಪಿ.ಆರ್., ಎನ್.ಆರ್.ಸಿ., ಸಿ.ಎ.ಎ., ವಿರೋಧಿಸಿ ಶಾಂತಿಯುತ ಧರಣಿಯಲ್ಲಿ ನಿರತರಾಗಿದ್ದು, ಅವರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕು, ಮತ್ತು ದೊಂಬಿ ಗಲಭೆಯಲ್ಲಿ ಮೃತ ಹೊಂದಿದವರಿಗೆ ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು, ಮನೆಗಳನ್ನು ಕಳೆದುಕೊಂಡವರಿಗೆ ಪುನರವಸತಿ ನಿರ್ಮಾಣ ಮಾಡಬೇಕು. ಸಣ್ಣ ಪುಟ್ಟ ವ್ಯಾಪರಸ್ಥರಿಗೆ ಭಸ್ಮವಾದ ಅಂಗಡಿ-ಮುಂಗಟ್ಟು, ವಾಹನ, ಆಟೋರಿಕ್ಷಾ, ಟ್ಯಾಕ್ಸಿ ಮಾಲಿಕರುಗಳಿಗೆ ಪರಿಹಾರ ಒದಗಿಸಬೇಕು, ದೆಹಲಿಯ ಎಲ್ಲಾ ನಿವಾಸಿಗಳಿಗೆ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್‌ನ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಎಮ್. ಕಾಟನ್ ಪಾಶಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯ್ಯದ ಅಲಿ, ಜಿಲ್ಲಾ ಉಪಾಧ್ಯಕ್ಷರುಗಳಾದ ಮೌಲಾನಾ ಖಾಜಾಪಾಶಾ ಮುಲ್ಲಾ, ಮಹೆಬೂಬ ಮುಲ್ಲಾ, ಖಜಾಂಚಿ ಮಹಮ್ಮದ ಆರೀಫ್, ಜಿ.ಸಂ.ಸ. ಕಾರ್ಯದರ್ಶಿ ಸೈಯ್ಯದ ಜಮೀರ್ ಖಾದ್ರಿ, ಸಲೀಂ ಅಳವಂಡಿ, ಮಾನವಿ ಪಾಶಾ, ಅಬೂಬಕರ ಟೈಲರ್, ಮೌಲಾನಾ ಅಬುಲ್ ಹಸನ್ ಖಾಜಿ ಅಶ್ರಫಿ, ಹಿರೇಮನಿ ವಕೀಲರು, ಗುಲಾಮ್ ಹುಸೇನ ಖಾಜಿ ನೂರಿ, ಮುಂತಾದವರು ಉಪಸ್ಥಿತರಿದ್ದರು.

Please follow and like us:
error