ದುಡಿಯೋಣ ಬಾ ಅಭಿಯಾನ

ಕೊಪ್ಪಳ,  : ಯಲಬುರ್ಗಾ ತಾಲ್ಲೂಕು ಪಂಚಾಯತಿ ವತಿಯಿಂದ ಮಾರ್ಚ್ 15 ರಿಂಧ ಮೂರು ತಿಂಗಳವರೆಗೆ ದುಡಿಯೋಣ ಬಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಜಯರಾಮ್ ಚವ್ಹಾಣ್ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ನರೇಗಾ ಕೂಲಿಕಾರರು ಮಾರ್ಚ-15 ರಿಂದ ಜೂನ್-15 ರವರೆಗೆ 60 ದಿನಗಳ ಕಾಲ ಕೂಲಿ ಕೆಲಸವನ್ನು ಮಾಡಬಹುದು. ಇದರಿಂದಾಗಿ ರೂ. 16,500 ಗಳನ್ನು ಕೂಲಿಕಾರರು ಪಡೆಯಬಹುದು. ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳು ಜೀವನ ನಿರ್ವಹಣೆಗಾಗಿ ವಲಸೆ ಪ್ರವೃತ್ತಿಯನ್ನು ಅವಲಂಬಿಸಿವೆ. ವಲಸೆ ಪ್ರವೃತ್ತಿಯನ್ನು ತಡೆಯಲು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜನರಿಗೆ ಸ್ಥಳೀಯವಾಗಿ ಅಕುಶಲ ಕೆಲಸ ಒದಗಿಸಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಯಾವುದೇ ಉದ್ಯೋಗ ದೊರೆಯದೇ ಇರುವ ಕಾರಣ, ಯೋಜನೆಯಡಿ ನಿರಂತರವಾಗಿ ಕೆಲಸ ಒದಗಿಸುವುದು ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೆ ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮಾರ್ಚ-15 ರಿಂದ 3 ತಿಂಗಳ ವರೆಗೆ ‘ದುಡಿಯೋಣ ಬಾ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು, ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು, ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವುದು, ಕಾಮಗಾರಿ/ಕೆಲಸ ಬೇಡಿಕೆ ಸಲ್ಲಿಸುವ ವಿಧಾನವನ್ನು ಸರಳಗೊಳಿಸುವುದು ಅಭಿಯಾನದ ಉದ್ದೇಶವಾಗಿದೆ.
ಅಭಿಯಾನದ ವೇಳಾಪಟ್ಟಿಯಂತೆ ಮಾರ್ಚ-15 ರಿಂದ ಮಾರ್ಚ-22 ರ ವರೆಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮುಖಾಂತರ ಅಂಗನವಾಡಿ, ಆಶಾ, ಸಂಜೀವಿನಿ ಸ್ವ-ಸಹಾಯ ಸಂಘದ ಸದಸ್ಯರು, ರೈತ ಸಂಘಗಳು, ಬಿ.ಎಫ್.ಟಿ, ಮೇಟ್ ಮತ್ತು ಸಾಮಾಜಿಕ ಲೆಕ್ಕ ಪರಿಶೋಧನಾ ವಿ.ಆರ್.ಪಿ ಗಳನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜಾಗೃತಿ ಕಾರ್ಯಕ್ರಮದಲ್ಲಿ ಒಂದು ದಿನಕ್ಕೆ ರೂ.275 ಕೂಲಿಯಂತೆ ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ 100 ದಿನ ಕೂಲಿ ಕೆಲಸ, ಈ ಬೇಸಿಗೆ ಅವಧಿಯಲ್ಲಿ 60 ದಿನ ಕೆಲಸ ಮಾಡಿದರೆ ರೂ.16,500 ಗಳನ್ನು ಪಡೆಯಲು ಇರುವ ಅವಕಾಶದ ಬಗ್ಗೆ ಪ್ರಚಾರ ಮಾಡಲಾಗುವುದು. ಕರಪತ್ರ /ಪೋಸ್ಟರ್‌ಗಳನ್ನು ಅಂಟಿಸುವುದು, ಹೊಸ ಜಾಬ್‌ಕಾರ್ಡ್ಗಾಗಿ ನಮೂನೆ-1 ರ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮತ್ತು ಒಂದೇ ಬಾರಿಗೆ 3 ತಿಂಗಳ ಕೆಲಸದ ಬೇಡಿಕೆ ಪಡೆಯುವುದು ಹಾಗೂ ಕೆಲಸದ ಬೇಡಿಕೆ ಸಲ್ಲಿಸಲು ಗ್ರಾಮ ಪಂಚಾಯತಿಯಲ್ಲಿ ಕಾಮಗಾರಿ ಬೇಡಿಕೆ ಪೆಟ್ಟಿಗೆ ಇಡಲಾಗಿದೆ.
ಮಾರ್ಚ್.23 ರಿಂದ ಮಾರ್ಚ್.31 ರ ವರೆಗೆ ಉದ್ಯೋಗ ಚೀಟಿ ವಿತರಿಸುವುದು, ಕಾಮಗಾರಿಗಳನ್ನು ಪ್ರಾರಂಭಿಸಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುವುದು, ಮೇಟ್ ಗಳಿಗೆ ತರಬೇತಿ ನೀಡಿ ಏಪ್ರಿಲ್.01 ರಂದು ಎನ್‌ಎಂಆರ್ ಹಾಕಿ ಕೆಲಸ ನೀಡಲಾಗುವುದು. ಏಪ್ರಿಲ್-1 ರಿಂದ ಜೂನ್ -15 ರ ವರೆಗೆ ಪ್ರತಿ ಸೋಮವಾರ ಕೆಲಸದ ಬೇಡಿಕೆ ಪೆಟ್ಟಿಗೆ ತೆರೆಯುವುದು, ಕೆಲಸದ ಬೇಡಿಕೆ ಸಲ್ಲಿಸಿದ ಕೂಲಿಕಾರರ ವಿವರಗಳನ್ನು ನಮೂದಿಸಿ 2 ದಿನಗಳಲ್ಲಿ ಕೆಲಸ ನೀಡುವುದು. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಶಿಶುಪಾಲನೆ ಸೌಲಭ್ಯಗಳನ್ನು ಕಲ್ಪಿಸುವುದು, ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸುವುದು. ಇದರ ಮೇಲುಸ್ತುವಾರಿಯನ್ನು ತಾಲ್ಲೂಕು ಮತ್ತು ಜಿಲ್ಲಾ ಹಂತದ ಅಧಿಕಾರಿಗಳಿಂದ ನಿರಂತರವಾಗಿ ಮಾಡಲಾಗುವುದು.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು/ಎಸ್.ಡಿ.ಎ, ಬಿಲ್ ಕಲೆಕ್ಟರ್, ತಾಂತ್ರಿಕ ಸಹಾಯಕರು, ಬಿ.ಎಫ್.ಟಿ, ಅಂಗನವಾಡಿ/ಆಶಾ ಕಾರ್ಯಕರ್ತೆಯರು, ಸ್ವ- ಸಹಾಯ ಸಂಘದ ಪ್ರತಿನಿಧಿಗಳನ್ನು ಒಳಗೊಂಡು ಸಮಿತಿಯನ್ನು ರಚಿಸಲಾಗುವುದು.
ಅಭಿಯಾನದಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಟ 50 ಬದು ನಿರ್ಮಾಣ, ಕೃಷಿ ಹೊಂಡ, ಸೋಕ್ ಪಿಟ್ ಕಾಮಗಾರಿಗಳನ್ನು ಪ್ರಾರಂಭಿಸುವುದು. ಸಮಗ್ರ ಕೆರೆ ಅಭಿವೃದ್ಧಿ ಮಾದರಿಯಲ್ಲಿ ಕೆರೆ ಹೂಳು ತೆಗೆಯುವುದು, ಕೆರೆ ಏರಿ ಕೋಡಿ ದುರಸ್ತಿ, ನಾಲಾ ಸುಧಾರಣೆ ಮತ್ತು ಕೆರೆ ಅಂಚಿನಲ್ಲಿ ಅರಣ್ಯೀಕರಣ, ರಸ್ತೆ ಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್, ಕೃಷಿ ಅರಣ್ಯೀಕರಣ, ರೈತರ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಮುಂಗಡ ಗುಂಡಿ ತೆಗೆಯುವುದು, ರಿಚಾರ್ಜ ಪಿಟ್ ತೆಗೆಯುವ ಕಾಮಗಾರಿಯನ್ನು ಕೈಗೊಳ್ಳಲಾಗುವುದು.
ಆಸಕ್ತ ಕೂಲಿಕಾರರು ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯತಿಗಳಿಗೆ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು/ಎಸ್.ಡಿ.ಎ, ಬಿಲ್ ಕಲೆಕ್ಟರ್, ತಾಂತ್ರಿಕ ಸಹಾಯಕರು, ಬಿ.ಎಫ್.ಟಿ, ಅಂಗನವಾಡಿ/ ಆಶಾ ಕಾರ್ಯಕರ್ತೆಯರು, ಸ್ವ- ಸಹಾಯ ಸಂಘದ ಪ್ರತಿನಿಧಿಗಳನ್ನು ಹಾಗೂ ಉಚಿತ ದೂರವಾಣಿ ಸಂಖ್ಯೆ-18004258666 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error