ದಲಿತ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಖಂಡಿಸಿ ಧರಣಿ ಪ್ರತಿಭಟನೆ

ಕೊಪ್ಪಳ. ಸೆ:೩೦: ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಅಸಂತಾಪುರ ಗ್ರಾಮದ ದಲಿತ ಯುವತಿ ರೇಣುಕಾ ತಂದೆ ಭೀಮಪ್ಪ ಮಾದರ ಪಿ.ಯು.ಸಿ. ಪ್ರಥಮ ವರ್ಷದ ತರಗತಿಯಲ್ಲಿ ಓದುತ್ತಿದ್ದು, ಕಂಪ್ಯೂಟರ ತರಬೇತಿಗಾಗಿ ಸಿಂದಗಿಗೆ ಹೋಗಿ ಬರುವಾಗ ಬಸ್ಸಿನಿಂದ ಇಳಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಭಯಭೀತಿಯನ್ನುಂಟು ಮಾಡಿದೆ. ದಲಿತರು ಅದರಲ್ಲಿಯೂ ಮಹಿಳೆಯರು ಓದಲು ಪರ ಊರಿಗೆ ಹೋಗದಂತ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಮನವಿಯಲ್ಲಿ ಅತ್ಯಾಚಾರ ಕೊಲೆ ಮಾಡಿದವರು ಯಾರೇ ಇರಲಿ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಶಿಕ್ಷೆ ಸಿಗುವಂತೆ ಮಾಡದೆ ಹೋದರೆ ಇಂತಹ ಅತ್ಯಾಚಾರ ಕೊಲೆ ಪ್ರಕರಣಗಳಿಗೆ ತೆರೆ ಎಳೆಯುವದು ಸಾಧ್ಯವಿಲ್ಲ. ಈ ಘಟನೆಯನ್ನು ಕೊಪ್ಪಳದ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಉಗ್ರವಾಗಿ ಖಂಡಿಸಿ ದಿ: ೩೦-೦೯-೨೦೧೯ ರಂದು ಬಸವೇಶ್ವರ ವೃತ್ತದಲ್ಲಿ ಸಾಂಕೇತಿಕ ಧರಣಿ ನಡೆಸಿ ಸರಕಾರಕ್ಕೆ ಈ ಮನವಿ ಮೂಲಕ ಒತ್ತಾಯಿಸಲಾಯಿತು.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ ಗ್ರಾಮದ ದಲಿತ ಯುವಕ ರಾಘವೇಂದ್ರನ ಕೊಲೆ ಪ್ರಕರಣ, ನವಲಿ ಗ್ರಾಮದ ಮರಳು ಮಾಫಿಯಾಕ್ಕೆ ಮೂರು ಮಕ್ಕಳ ಬಲಿ ಪ್ರಕರಣ, ಕೊಪ್ಪಳ ತಾಲೂಕಿನ ತಿಗರಿ ಗ್ರಾಮದ ದಲಿತರನ್ನು ಸಾಮೂಹಿಕ ವಿವಾಹದಿಂದ ಹೊರಗಿಟ್ಟ ಪ್ರಕರಣಗಳನ್ನು ತನಿಖೆಗೊಳಪಡಿಸಿ, ಬೇರೆ ವಿಭಾಗದ ಡಿ.ವಾಯ್.ಎಸ್.ಪಿ. ಹಾಗೂ ಸಿ.ಪಿ.ಐ.ಗಳಿಂದ ತನಿಖೆ ನಡೆಸಬೇಕು. ನ್ಯಾಯದ ಜೊತೆ ತೊಂದರೆಗೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು. ಕೊಪ್ಪಳ ಜಿಲ್ಲೆಯಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯದ ಎಲ್ಲಾ ಪ್ರಕರಣಗಳನ್ನು ಸಮಗ್ರ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಲು ಒತ್ತಾಯಿಸಿದರು.
ಕುಮಾರಿ ರೇಣುಕಾ ತಂದೆ ಭೀಮಪ್ಪ ಮಾದರ ಅತ್ಯಾಚಾರ, ಕೊಲೆ ಪ್ರಕರಣ ಸಿ.ಓ.ಡಿ.ಗೆ. ವಹಿಸಬೇಕು. ದಲಿತರ ಮೇಲಿನ ದೌರ್ಜನ್ಯ, ಜಾತಿ ನಿಂದನೆ, ಲೈಂಗಿಕ ಕಿರುಕುಳ, ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತ್ಯೇಕ ವಿಶೇಷ ನ್ಯಾಯಾಲಯ ಸ್ಥಾಪಿಸಲು ಒತ್ತಾಯ. ಕುಮಾರಿ ರೇಣುಕಾ ತಂದೆ ಭೀಮಪ್ಪ ಮಾದರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲಿನ ಡಿ.ವಾಯ್.ಎಸ್.ಪಿ. ಮತ್ತು ಸಿ.ಪಿ.ಐ.ಯನ್ನು ಅಮಾನತ್‌ಗೊಳಿಸಿ ವಿಚಾರಣೆಗೊಳಪಡಿಸಬೇಕು. ಹಾಗೂ ಬೇರೆ ಡಿ.ವಾಯ್.ಎಸ್.ಪಿ., ಸಿ.ಪಿ.ಐ.ಯಿಂದ ತನಿಖೆಯಾಗಬೇಕು. ಅತ್ಯಾಚಾರ ದೌರ್ಜನ್ಯಕ್ಕಿಡಾದ, ಕೊಲೆಗಿಡಾದ ಆಯಾ ಸಂತ್ರಸ್ಥ ದಲಿತ ಕುಟುಂಬಗಳಿಗೆ ಶೀಘ್ರ ಸರಕಾರಿ ನೌಕರಿ, ೦೫-೦೦ ಎಕರೆ ಕೃಷಿ ಯೋಗ್ಯ ಭೂಮಿ ಮತ್ತು ಸೂಕ್ತಪರಿಹಾರ ನೀಡಬೇಕು. ಜಿಲ್ಲೆಯ ದಲಿತ ಪ್ರಕರಣಗಳಲ್ಲಿ ನಿರ್ಲಕ್ಷವಹಿಸಿದ ಮತ್ತು ಕರ್ತವ್ಯ ಲೋಪ ವೆಸಗಿದ ಜಿಲ್ಲಾ ಸಮಾಜ ಕಲ್ಯಾಣ ಆಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದಲಿತರ ಕುಟುಂಬಗಳಿಗಾಗಿರುವ ನಷ್ಟವನ್ನು ಭ್ರಷ್ಟ ಅಧಿಕಾರಿಯಿಂದಲೇ ಭರಿಸಬೇಕು. ಜಿಲ್ಲೆಯಲ್ಲಿ ಅಸ್ಪೃಷತೆ, ಜೀತ ಕಾರ್ಮೀಕ ಪದ್ಧತಿ, ಬಾಲ್ಯ ವಿವಾಹ ಪದ್ಧತಿ, ದೇವದಾಸಿ ಪದ್ಧತಿ ಜೀವಂತವಿದ್ದು, ಪೋಲಿಸ್ ಇಲಾಖೆಯು ಸ್ವಯಂ ಪ್ರೇರಣೆಯಿಂದ ಪ್ರಕರಣಗಳನ್ನು ದಾಖಲಿಸಲು ಒತ್ತಾಯ. ಕುಷ್ಟಗಿ ತಾಲೂಕಿನ ಹಿರೇತೆಮ್ಮಿನಾಳ ಗ್ರಾಮದ ಕನಕಪ್ಪ ತಂದೆ ಹುಲಗಪ್ಪ ಪೂಜಾರಿ ಕೊಲೆ ಪ್ರಕರಣವು ಸಮಗ್ರ ತನಿಖೆಯಾಗಬೇಕು ಎಂದು ತಿಳಿಸಿದರು.
ಪ್ರಗತಿಪರ ಸಂಘಟನೆಯ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ ಶೀಲವಂತರ್, ಅಲ್ಲಮ ಪ್ರಭು ಬೆಟ್ಟದೂರು, ವಿಠ್ಠಪ್ಪ ಗೋರಂಟ್ಲಿ, ಎಸ್.ಎ.ಗಫಾರ್. ಡಾ||ವಿ.ಬಿ.ರಡ್ಡೇರ, ವಕೀಲರುಗಳಾದ ಕೆ.ಎಸ್.ಮೈಲಾರಪ್ಪ ಕವಲೂರು, ಮಾರುತಿ ಚಾಮ್ಲಾಪೂರ, ವೀರುಪಾಕ್ಷಪ್ಪ ಕಟ್ಟಿಮನಿ, ಹಿರಿಯ ದಲಿತ ಮುಖಂಡ ಆನಂದ ಭಂಡಾರಿ, ಡಾ||.ಬಿ.ಜ್ಞಾನಸುಂದರ, ರಮೇಶ ಪಿ ಚಿಕೇನಕೊಪ್ಪ, ಯೇಸೂಫ್ ಡಾಣಾಪೂರ, ಬಸವರಾಜ ಆಕಳವಾಡಿ, ಈಶಣ್ಣ ಕೋರ್‍ಲಳ್ಳಿ, ಮೈಲಪ್ಪ ಬಿಸರಳ್ಳಿ, ಮಹಾಂತೇಶ ಕೊತಬಾಳ, ಹನುಮೇಶ ಮ್ಯಾಗಳಮನಿ, ಖಾಸಿಂ ಸರದಾರ, ಗಾಳೆಪ್ಪ ಮುಂಗೋಲಿ ಮುಂತಾದ ಅನೇಕ ಮುಖಂಡರು ಭಾಗವಹಿಸಿದ್ದರು.

Please follow and like us:
error