ದತ್ತು ಯೋಜನೆಯ ಆರೋಗ್ಯ ಶಿಬಿರ ಕಾರ್ಯಕ್ರಮ – 2025 ರೊಳಗಾಗಿ ಕ್ಷಯಮುಕ್ತ ಭಾರತದ ಕನಸು ಪ್ರಾರಂಭ

ಕ್ಷಯ ಮುಕ್ತ ಸಮಾಜಕ್ಕೆ ಎಲ್ಲರೂ ಶ್ರಮಿಸೋಣ : ಪರಣ್ಣ ಮುನವಳ್ಳಿ
ಕ್ಷಯ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲಾ ಖಾಸಗಿ ವೈದ್ಯರು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಬದ್ಧರಾಗಿ ಶ್ರಮಿಸಬೇಕು ಎಂದು ಗಂಗಾವತಿಯ ಶಾಸಕರಾದ ಪರಣ್ಣ ಮುನವಳ್ಳಿ ಅವರು ಹೇಳಿದರು.
ಗಂಗಾವತಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ವೆಂಕಟಗಿರಿಯ ಆಗೋಲಿ ಗ್ರಾಮದಲ್ಲಿ ಗುರುವಾರ (ಜ.21) ದಂದು ಕ್ಷಯಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಸಮುದಾಯದ ಪಾತ್ರ ಮನಗಂಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಟಿ.ಬಿ. ವಿಭಾಗ ಕೊಪ್ಪಳ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ರೋಟರಿ ಕ್ಲಬ್ ಭಾರತೀಯ ವೈದ್ಯಕೀಯ ಸಂಘ, ನಿಮಾ ಗಂಗಾವತಿ ಇವರ ಸಹಯೋಗದಲ್ಲಿ ಜರುಗಿದ ದತ್ತು ಯೋಜನೆ ಅಡಿಯ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಯವರ 2025ರ ಒಳಗಾಗಿ ಕ್ಷಯಮುಕ್ತ ಭಾರತದ ಕನಸು ಮೊದಲು ಗಂಗಾವತಿ ಕ್ಷೇತ್ರದ ಪರಿಣಿತ ತಜ್ಞ ವೈದ್ಯಕೀಯ ಸಿಬ್ಬಂದಿ ಅವರಿಂದ ಶುರುವಾಗಿರುವುದು ಹೆಮ್ಮೆಯ ವಿಷಯ. ಡಾಕ್ಟರ್ ನಾಮದೇವ ಇವರು ಗ್ರಾಮವನ್ನು ದತ್ತು ತೆಗೆದುಕೊಂಡು ಜನರ ಆರೈಕೆ ಮಾಡುತ್ತಿರುವುದು ಅಭಿನಂದನೀಯ. ನನ್ನ ಕ್ಷೇತ್ರದಿಂದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಖಾಸಗಿ ವೈದ್ಯರು ಹಾಗೂ ಸ್ವಯಂಸೇವಾ ಸಂಸ್ಥೆಗಳು ಸಕ್ರಿಯವಾಗಿ ಕ್ಷಯ ನಿರ್ಮೂಲನೆಯಲ್ಲಿ ಭಾಗವಹಿಸಿದಲ್ಲಿ ಗಂಗಾವತಿ ತಾಲ್ಲೂಕನ್ನು ಕ್ಷಯಮುಕ್ತ ತಾಲ್ಲೂಕು ಮಾಡುವ ಮೂಲಕ ಪ್ರಧಾನ ಮಂತ್ರಿಯವರ ಕನಸನ್ನು ನನಸಾಗಿಸೋಣ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಲಿಂಗರಾಜ್ ಟಿ. ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷಯ ನಿರ್ಮೂಲನೆ ವಿಚಾರದಲ್ಲಿ ಆರೋಗ್ಯ ಇಲಾಖೆಯಿಂದ ಆಗುತ್ತಿರುವ ಗ್ರಾಮ ದತ್ತು ಯೋಜನೆ ಬಹುವಿಶೇಷ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಕೆಲಸ ನಿರ್ವಹಿಸಿದಾಗ ಇಲಾಖೆಯಿಂದ ಇನ್ನೂ ಹೆಚ್ಚಿನ ಕಾರ್ಯ ಮಾಡಲು ಸಾಧ್ಯವೆಂದು ಹೇಳಿದರು.
ಈಗಾಗಲೇ ಕ್ಷಯರೋಗ ಕಾರ್ಯಕ್ರಮದಲ್ಲಿ ಹೊಸ-ಹೊಸ ಆವಿಷ್ಕಾರಗಳ ಮುಖಾಂತರ ನಮ್ಮ ಜಿಲ್ಲೆಯ ಕೀರ್ತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯವರೆಗೆ ಕೊಂಡೊಯ್ದಿರುವ ಕೀರ್ತಿ ಕ್ಷಯರೋಗ ನಿರ್ಮೂಲನ ಅಧಿಕಾರಿಗಳಿಗೆ ಸಲ್ಲುತ್ತದೆ. ಹಾಗೂ ಮುಂದಿನ ದಿನಗಳಲ್ಲಿ ಸಾರ್ವಜನಿಕರು ತಮ್ಮ ಮನೆಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಬಂದಾಗ ಉತ್ತಮ ಸ್ಪಂದನೆ ಮಾಡುವ ಮುಖಾಂತರ ಕ್ಷಯ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.
ಕ್ಷಯರೋಗ ನಿರ್ಮೂಲನ ಅಧಿಕಾರಿಗಳಾದ ಡಾ. ಮಹೇಶ ಎಂ.ಜಿ ಮಾತನಾಡಿ, ಕ್ಷಯರೋಗ ನಿರ್ಮೂಲನೆಯಲ್ಲಿ ಖಾಸಗಿಯವರ ಹಾಗೂ ಸಂಘಸAಸ್ಥೆಗಳ ಮತ್ತು ಸಾರ್ವಜನಿಕರ ಸಹಕಾರ ಅಗತ್ಯ. ಮಾನವ ಸೇವೆ ಮಾಧವನ ಸೇವೆ ಎನ್ನುವಂತೆ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಕ್ಷಯರೋಗದಂತಹ ಭೀಕರ ಖಾಯಿಲೆ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಬೇಕು. ಇಲಾಖೆಯಿಂದ ಈಗಾಗಲೇ ಸುಮಾರು 45ಕ್ಕೂ ಹೆಚ್ಚು ಹಳ್ಳಿಗಳನ್ನು ಖಾಸಗಿ ವೈದ್ಯರು ದತ್ತು ಪಡೆದಿರುವುದು, ಗವಿಸಿದ್ದೇಶ್ವರ ಶ್ರೀಗಳವರು ರಾಯಭಾರಿಯಾಗಿ ಕಾರ್ಯಕ್ರಮ ನಿರ್ವಹಿಸುತ್ತಿರುವುದು, ಟಿ.ಬಿ ಚಾಂಪಿಯನ್ಸ್ ಬಳಕೆ ಮಾಡಿಕೊಂಡಿರುವುದು, ಇನ್ನುಳಿದಂತೆ ಕನ್ನಡಪರ ಹಾಗೂ ಆಟೋ ಸಂಘಗಳ ಬಳಕೆ ಮಾಡಿಕೊಂಡು ಜಾಗೃತಿ ಮೂಡಿಸುತ್ತಿರುವುದು, ಖಾಸಗಿ ಆಸ್ಪತ್ರೆಯಲ್ಲಿ ಕ್ಷಯರೋಗಿಗಳಿಗೆ ಅನುಕೂಲವಾಗುವಂತೆ ಕೆಲವು ರಕ್ತ ಪರೀಕ್ಷೆ ಮತ್ತು ಡಿಜಿಟಲ್ ಎಕ್ಸರೇ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಒದಗಿಸುತ್ತಿರುವುದು, ಮತ್ತು ಆರೋಗ್ಯ ಚೇತನ ಸಹಾಯವಾಣಿ ಮೂಲಕ ಪ್ರತಿದಿನ ಸುಮಾರು 200 ಕ್ಕೂ ಹೆಚ್ಚು ಸಂಶಯಾಸ್ಪದ ಮತ್ತು ದೃಢಪಟ್ಟ ರೋಗಿಗಳಿಗೆ ಸಮಾಲೋಚನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹಲವು ಆವಿಷ್ಕಾರಗಳಿಂದ ಕೊಪ್ಪಳ ಜಿಲ್ಲೆಯು ಕ್ಷಯರೋಗ ನಿರ್ಮೂಲನೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲೇ ಮೊದಲನೇ ಸ್ಥಾನದಲ್ಲಿದೆ. ಈ ಎರಡು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ಷಯರೋಗಿಗಳು ಪತ್ತೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಹು ಔಷಧ ನಿರೋಧಕ ಕ್ಷಯರೋಗಿಗಳ ಪ್ರಮಾಣ ಹಾಗೂ ಕ್ಷಯರೋಗಿಗಳ ಮರಣ ಪ್ರಮಾಣ ಕಡಿಮೆ ಮಾಡುವುದು ಗುರಿ ಹೊಂದಲಾಗಿದೆ. ಕ್ಷಯರೋಗ ನಿರ್ಮೂಲನೆಯಲ್ಲಿ ಇನ್ನೂ ಹತ್ತು ಹಲವು ಕಾರ್ಯಕ್ರಮಗಳನ್ನು ಸಮುದಾಯಕ್ಕೆ ಒದಗಿಸುತ್ತ ಕ್ಷಯಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಖಾಸಗಿ ವೈದ್ಯರು, ಸ್ವಯಂಸೇವಾ ಸಂಸ್ಥೆಗಳು, ಜನಪ್ರತಿನಿಧಿಗಳ ಸಹಕಾರ ಅತೀ ಮುಖ್ಯವಾಗಿದೆ ಎಂದು ಹೇಳಿದರು.
ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಈಶ್ವರ ಸವಡಿ ಮಾತನಾಡಿ, ಇಡೀ ವಿಶ್ವವೇ ಕೊಪ್ಪಳದ ಕಡೆಗೆ ಮುಖ ಮಾಡುವಂತೆ ಮಾಡಿರುವ ಕ್ಷಯರೋಗ ಕಾರ್ಯಕ್ರಮ ಹಾಗೂ ಕೋವಿಡ್ ಸಂದರ್ಭದಲ್ಲೂ ಕೂಡ ರಾಜ್ಯದಲ್ಲಿಯೇ ಅತಿ ಹೆಚ್ಚು ಕ್ಷಯರೋಗ ಪ್ರಕರಣಗಳನ್ನು ಕಂಡುಹಿಡಿದು ಕ್ಷಯರೋಗ ಹರಡುವಿಕೆಯನ್ನು ಕಡಿಮೆ ಮಾಡಿರುವ ಕೀರ್ತಿ ಇಲಾಖೆಗೆ ಸಲ್ಲುತ್ತದೆ ಎಂದು ತಿಳಿಸಿದರು.
ಶಿಬಿರದಲ್ಲಿ ಐನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಗಂಗಾವತಿ ಐ.ಎಂ.ಎ. ಸದಸ್ಯರುಗಳಾದ ಡಾ. ಹನುಮಂತಪ್ಪ, ನಾಗರಾಜ್, ಅಮರ್ ಪಾಟೀಲ್, ಅರ್ಜುನ್ ಹೊಸಳ್ಳಿ, ಶರಣಪ್ಪ ಚಕೋತಿ, ವೀರೇಶ್, ರಾಘವೇಂದ್ರ, ಅಂಜುಮ್ ಹಾಗೂ ಇತರರು ಭಾಗವಹಿಸಿ ಅವಶ್ಯಕ ಚಿಕಿತ್ಸೆ ಮಾಡಿದರು. ಮತ್ತು ಸುಮಾರು ಮೂವತ್ತು ಸಂಶಯಾಸ್ಪದ ಕ್ಷೇತ್ರಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಕ್ಷಯರೋಗ ವಿಭಾಗದ ಗೋಪಾಲಕೃಷ್ಣ, ದಾನನಗೌಡ, ಮಲ್ಲಿಕಾರ್ಜುನ, ನಾಗರಾಜ್, ಹುಸೇನಭಾಷಾ, ಮೊಹಮ್ಮದ್ ಇಬ್ರಾಹಿಂ, ಅಶೋಕ್, ರಾಘವೇಂದ್ರ ಜೋಷಿ ಹಾಗೂ ಗ್ರಾಮದ ಎಲ್ಲಾ ಚುನಾಯಿತ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ವೆಂಕಟಗಿರಿಯ ಎಲ್ಲಾ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
Please follow and like us:
error