ತುಂಬಿದ ಹಿರೇಹಳ್ಳ ಜಲಾಶಯಕ್ಕೆ ಸಂಸದ ಸಂಗಣ್ಣ ಕರಡಿ ಬಾಗೀನ ಅರ್ಪಣೆ

| ರಾಜ್ಯ ಸರ್ಕಾರದ ವಿರುದ್ಧ ಕಿಡಿ
ಜಲಾಶಯಗಳು ರೈತರ ಬದುಕು ಬದಲಿಸುತ್ತವೆ

ಕೊಪ್ಪಳ: ಜಲಾಶಯಗಳಿಗೂ ನಮ್ಮ ನೆಮ್ಮದಿಯ ಬದುಕಿಗೂ ಹತ್ತಿರದ ಸಂಬಂಧವಿದೆ. ಎಲ್ಲಿಯೋ ಬಿದ್ದ ಮಳೆ ನೀರು, ಹರಿದುಬಂದು ಜಲಾಶಯ ಸೇರಿ, ಬೆಳೆಯಾಗಿ ಮತ್ತೆ ಎಲ್ಲೆಲ್ಲಿಗೋ ತಲುಪುತ್ತದೆ. ರೈತರ ಹಣೆಬರಹ ಬದಲಿಸುವ ಶಕ್ತಿ ಜಲಾಶಯಗಳಿಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಹಲವಾರು ವರ್ಷಗಳ ಬಳಿಕ ಇದೇ ಮೊದಲ ಬಾರಿ ಭರ್ತಿಯಾದ ತಾಲೂಕಿನ ಮುದ್ಲಾಪುರ ಗ್ರಾಮದ ಬಳಿ ಇರುವ ಹಿರೇಹಳ್ಳ ಜಲಾಶಯಕ್ಕೆ ಭಾನುವಾರ ಬಾಗೀನ ಅರ್ಪಿಸಿ ಅವರು ಮಾತನಾಡಿದರು.
ನೀರಿನ ಯೋಗ್ಯ ಬಳಕೆಯತ್ತಲೂ ನಾವು ಗಮನ ಹರಿಸಬೇಕಿದೆ. ನೀರಿನ ಕೊರತೆ ಇದ್ದ ಕಡೆ ಬತ್ತ ಬೆಳೆಯುವ ಬದಲು, ಅತಿ ಕಡಿಮೆ ನೀರು ಬಳಸಿ, ಹೆಚ್ಚಿನ ದರ ತರುವ ಇತರ ಬೆಳೆಗಳನ್ನು ಬೆಳೆಯಬೇಕು. ವೈಜ್ಞಾನಿಕ ಪದ್ಧತಿ ಅನುಸರಿಸಿದರೆ, ನೀರಿನ ಬಳಕೆ ಕಡಿಮೆ ಮಾಡಬಹುದು. ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕು ಎಂದ ಸಂಸದರು, ನೀರು ಪೋಲು ಮಾಡಬೇಡಿ. ಬಂಗಾರವನ್ನಾದರೂ ಖರೀದಿಸಿ ತರಬಹುದು. ಆದರೆ, ನೀರನ್ನು ತರಲಾಗದು ಎಂದು ಎಚ್ಚರಿಸಿದರು.

ಸರ್ಕಾರ ಎಚ್ಚರಿಸಲು ಪ್ರತಿಭಟಿಸಿ:
ನೀರಾವರಿಗೆ ಇಷ್ಟೊಂದು ಮಹತ್ವ ಇದ್ದರೂ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಈ ಕ್ಷೇತ್ರವನ್ನು ಕಡೆಗಣಿಸಿದೆ. ಪ್ರತಿಭಟನೆ ನಡೆಸುವ ಮೂಲಕವೇ ಸರ್ಕಾರವನ್ನು ಎಚ್ಚರಿಸಬೇಕಾದ ಪರಿಸ್ಥಿತಿಯಿದೆ. ನೀರು, ವಿದ್ಯುತ್ ಸಂಪರ್ಕ- ಹೀಗೆ ಪ್ರತಿಯೊಂದು ಸೌಲಭ್ಯ ಪಡೆಯಲೂ ಪ್ರತಿಭಟನೆ ನಡೆಸಿ ಎಂದು ಕರೆ ಕೊಟ್ಟರು.
ಕೇಂದ್ರ ಸರ್ಕಾರ ಎಷ್ಟೊಂದು ಜನಪರ ಕೆಲಸಗಳನ್ನು ಮಾಡುತ್ತಿದೆ. ಜನ್‌ಧನ್ ಯೋಜನೆಯನ್ನು ಜಾತಿ ಆಧರಿಸಿ ಮಾಡಲಿಲ್ಲ. ನದಿ ಜೋಡಣೆ ಯೋಜನೆ ಜಾರಿಯಾದರೆ, ನಮ್ಮ ಜಲಾಶಯಗಳಿಗೆ ವರ್ಷಪೂರ್ತಿ ನೀರು ಹರಿದುಬರುತ್ತದೆ. ಪಕ್ಕದ ಆಂಧ್ರ, ತೆಲಂಗಾಣ ಸರ್ಕಾರಗಳು ಹೆಚ್ಚಿನ ಯೋಜನೆಯನ್ನು ಕೇಂದ್ರದಿಂದ ಪಡೆಯುತ್ತಿವೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಸ್ತಾವನೆಗಳನ್ನು ಸಲ್ಲಿಸಲಿಕ್ಕೇ ಮುಂದಾಗುತ್ತಿಲ್ಲ. ತನ್ನ ಜವಾಬ್ದಾರಿ ನಿರ್ವಹಿಸದೇ, ಕೇಂದ್ರದ ವಿರುದ್ಧ ದೂರುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅವರು ಕಿಡಿಕಾರಿದರು.
ರಾಜ್ಯದ ಮರಳು ಖಜಾನೆಯನ್ನು ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆಯುತ್ತಿದೆ. ಆ ಮೂಲಕ ಚುನಾವಣೆಗೆ ಹಣ ಸಜ್ಜು ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಗಣ್ಣ ಕರಡಿ, ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ. ಪ್ರಗತಿ ತಂತಾನೇ ಹರಿದುಬರುತ್ತದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸುವ ಮೂಲಕ ಉತ್ತಮ ಪ್ರಗತಿಯನ್ನು ನಮ್ಮದಾಗಿಸಿಕೊಳ್ಳೋಣ ಎಂದರು.
ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಮಾಜಿ ಶಾಸಕ ಪರಣ್ಣ ಮನವಳ್ಳಿ, ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ ಚಂದ್ರಶೇಖರ, ಜಿ.ಪಂ. ಸದಸ್ಯ ರಾಮಣ್ಣ ಚೌಡ್ಕಿ, ಗ್ರಾಪಂ ಅಧ್ಯಕ್ಷ ಸಣ್ಣ ಮರಿಯಪ್ಪ, ಎಪಿಎಮ್‌ಸಿ ಸದಸ್ಯ ಬಸವರಾಜ ಈಶ್ವರಗೌಡ್ರ, ತಾ.ಪಂ ಮಾಜಿ ಸದಸ್ಯ ವಿರುಪಾಕ್ಷಪ್ಪ , ಮನೋಹರರಾವ್ ದೇಸಾಯಿ, ಬಸವರಾಜ ಬಂಡಿ, ಶಾಮಣ್ಣ, ವಿಜಯಕುಮಾರ ನಾಯಕ, ವಿರೂಪಾಕ್ಷಪ್ಪ ಬಾರಕೇರ, ತಾ.ಪಂ. ಮಾಜಿ ಸದಸ್ಯ ರಾಮಣ್ಣ, ಉದಯ, ರೈತಸಂಘದ ಅದ್ಯಕ್ಷ ದೇವಪ್ಪ ಯತ್ತಿನಮನಿ ಸೇರಿದಂತೆ ಇನ್ನಿತರರು ಇದ್ದರು.

Please follow and like us:
error