ತರಕಾರಿ ಮಾರುಕಟ್ಟೆಗೆ  ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಅಮರೇಶ ಕರಡಿ ಮನವಿ


ಕೊಪ್ಪಳ: ತಾಲ್ಲೂಕಿನ ಬೆಳವಿನಾಳ ಗ್ರಾಮದ ಹೊರವಲಯದಲ್ಲಿ ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣವಾದ ನೂತನ ಎಪಿಎಂಸಿ ಉಪಮಾರುಕಟ್ಟೆಗೆ ಅಗತ್ಯ ಸೌಲಭ್ಯಗಳಿಲ್ಲದೆ, ರೈತರು, ವ್ಯಾಪಾರಸ್ಥರು ಪರದಾಡುವಂತೆ ಆಗಿದ್ದು, ಸಕಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಕೆಡಿಪಿ ಸದಸ್ಯ ಅಮರೇಶ ಕರಡಿ ಒತ್ತಾಯಿಸಿದ್ದಾರೆ.

ಮಾರುಕಟ್ಟೆಗೆ ಗ್ರಾಮದಲ್ಲಿ 35 ಎಕರೆ ಪ್ರದೇಶದ ಜಾಗ ಗುರುತಿಸಿ ಈ ಹಿಂದೆ 1.34 ಕೋಟಿ ವೆಚ್ಚದಲ್ಲಿ ಆವರಣಗೋಡೆಯನ್ನು ನಿರ್ಮಾಣ ಮಾಡಿದ್ದನ್ನು ಬಿಟ್ಟರೆ ಯಾವುದೇ ಸೌಲಭ್ಯಗಳು ಇಲ್ಲ. ಈಗ ರೂ. 4 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ವಿವಿಧ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಆದ್ದರಿಂದ ಎಪಿಎಂಸಿ,  ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮೂಲ ಸೌಲಭ್ಯ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಲಾಗಿದೆ ಎಂದರು. ಈ ಕುರಿತು ಸಂಸದರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆಯನ್ನು ಕೂಡಾ ನೀಡಿದ್ದಾರೆ ಎಂದರು.

ಮಾರುಕಟ್ಟೆಗೆ ಹೋಗಲು ನೇರ ರಸ್ತೆ ಸಂಪರ್ಕವಿಲ್ಲ. ಗ್ರಾಮದ ಇಕ್ಕಟ್ಟಾದ ರಸ್ತೆಯಲ್ಲಿ ನಸುಕಿನ ಜಾವ ತರಕಾರಿ ಹೊತ್ತ ರೈತರ ವಾಹನಗಳು ಬರುತ್ತಿವೆ. ಇದರಿಂದ ಗ್ರಾಮಸ್ಥರಿಗೆ ಕಿರಿಕಿರಿಯಾಗಲಿದೆ. ಈ ಗ್ರಾಮವು ಹಾಲವರ್ತಿ ಗಣಿಬಾದಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡಿಎಂಎಫ್ ಅನುದಾನದಡಿಯಲ್ಲಿ ರಸ್ತೆ, ವಿದ್ಯುತ್ ಐಮಾಕ್ಸ್, ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಿಲು ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸಧ್ಯ ಮಾರುಕಟ್ಟೆಯಲ್ಲಿ 28 ವ್ಯಾಪಾರಿಗಳು ವ್ಯಾಪಾರಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಗಂಜ್ ನಲ್ಲಿರುವ ಎಪಿಎಂಸಿ ಮಾರುಕಟ್ಟೆ ದಟ್ಟಣೆಯಿಂದ ಕೂಡಿದ್ದು, ತರಕಾರಿ ಮತ್ತು ಸೊಪ್ಪು ಮಾರಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಇಲ್ಲಿ ಉಪಮಾರುಕಟ್ಟೆಯನ್ನು ಆರಂಭಿಸಿದ್ದಾರೆ. ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಮಾರುಕಟ್ಟೆ ಸ್ಥಾಪನೆಯಾಗಿರುವುದು ಸೂಕ್ತ. ಆದ್ದರಿಂದ ಕಾಲಮಿತಿಯೊಳಗೆ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಹೇಳಿದರು.

ವಿದ್ಯುತ್ ಸಂಪರ್ಕ ಇಲ್ಲದೇ ತೊಂದರೆಯಾಗುತ್ತಿದ್ದು, ಪ್ರಾಂಗಣಕ್ಕೆ ಬೆಳಕು ಬೀರುವ ಹೈಮಾಸ್ಟ್ ದೀಪವನ್ನು ತಕ್ಷಣ ಅಳವಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು. ಮಾರುಕಟ್ಟೆ ಸ್ಥಳಕ್ಕೆ ಭೇಟಿ ನೀಡಿ ರೈತರ ಮತ್ತು ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸಿದರು, ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡು ತಕ್ಷಣ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ತರಕಾರಿ ಮತ್ತು ಸೊಪ್ಪು ಮಾರಾಟ ಮಾಡುವ ರೈತರು, ವ್ಯಾಪಾರಸ್ಥರಿಗೆ ಎಲ್ಲ ಸೌಲಭ್ಯಗಳನ್ನು ಜಿಲ್ಲಾಡಳಿತದ ನೆರವಿನೊಂದಿಗೆ ಕಲ್ಪಿಸಲು ಸಂಬಂಧಿಸಿದವರೊಂದಿಗೆ ಚರ್ಚೆ ನಡೆಸಲಾಗುವುದು. ತಮ್ಮ ಉತ್ಪನ್ನಗಳನ್ನು ಇಲ್ಲಿ ತಂದು ಮಾರಾಟ ಮಾಡುವ ಮೂಲಕ ಹೆಚ್ಚಿನ ಸದುಪಯೋಗವನ್ನು ಪಡೆದುಕೊಳ್ಳಬೇಕು. ಶೀಘ್ರದಲ್ಲಿ ಈ ಕುರಿತು ಎಪಿಎಂಸಿ ಉಪಮಾರುಕಟ್ಟೆ ಸಮಸ್ಯೆಗಳ ಕುರಿತು ಸಚಿವರ ಗಮನಕ್ಕೆ ತರಲಾಗುವುದು ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯರಾದ ಬಸವರಾಜ ಈಶ್ವರಗೌಡ, ಮಲ್ಲಪ್ಪ ಕವಲೂರು, ವ್ಯಾಪಾರಸ್ಥ ಮಂಜುನಾಥ ಅಂಗಡಿ,  ಮಲ್ಲಿಕಾರ್ಜುನ, ಬಸವರಾಜ ಹೊಸಪೇಟೆ, ಖಾಜಾವಲಿ, ರೈತರಾದ ರಾಮಾಂಜನೇಯ, ನಾಗನಗೌಡ ಮುಂತಾದವರು ಇದ್ದರು.

Please follow and like us:
error