ತಮ್ಮ ಮೇಲಿನ ದಾಳಿಗಳನ್ನು ಪ್ರತಿಭಟಿಸಲು ನಿದ್ದೆಯಲ್ಲೂ ಎಚ್ಚರವಾಗಿರುವಂತೆ ಜನತೆಯನ್ನು ಕಾವ್ಯ ಜಾಗೃತಗೊಳಿಸುತ್ತದೆ-ಪ್ರೊ , ಕಾಶೀನಾಥ ಅಂಬಲಗೆ

ಎಐಡಿವೈಓ ಸಂಘಟಿತ ‘ ರಾಜ್ಯ ಮಟ್ಟದ ಆನ್ಲೈನ್ ಕವಿಗೋಷ್ಠಿ

Koppal  ವೈಜ್ಞಾನಿಕ ಬದುಕು ನಡೆಸುತ್ತಾ , ಸರ್ವಸಮಾನತೆಯ ಸಂದೇಶವನ್ನು ಎತ್ತರದ ಧ್ವನಿಯಲ್ಲಿ ಜನರ ಎದುರು ಮಂಡಿಸಲು ನಮ್ಮ ಕಾವ್ಯ ಬಯಸುತ್ತದೆ . ತಮ್ಮ ಮೇಲಿನ ದಾಳಿಗಳನ್ನು ಪ್ರತಿಭಟಿಸಲು ನಿದ್ದೆಯಲ್ಲೂ ಎಚ್ಚರವಾಗಿರುವಂತೆ ಜನತೆಯನ್ನು ಜಾಗೃತಗೊಳಿಸುತ್ತದೆ . ” ಎಂದು ಕಲಬುರ್ಗಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಸಾಹಿತಿ ಪ್ರೊ , ಕಾಶೀನಾಥ ಅಂಬಲಗೆಯವರು ಹೇಳಿದರು. ಎಐಡಿವೈಓ ಕರ್ನಾಟಕ ರಾಜ್ಯ ಸಮಿತಿಯು ಡಿಸೆಂಬರ್ 5 ರಂದು ಸಂಜೆ 6 ಕ್ಕೆ ಯುವಜನರ ಬದುಕು – ಬವಣೆ : ಕಾವ್ಯಾಭಿವ್ಯಕ್ತಿಯಾಗಿ ನಡೆಸಿದ , ದೆಹಲಿಯ ರೈತ ಹೋರಾಟಕ್ಕೆ ಸಮರ್ಪಿತ ರಾಜ್ಯ ಮಟ್ಟದ ಆನ್ ಲೈನ್ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಪಂಜಾಬಿ ಕವಿಯ ‘ ಗೆಳೆಯ ಕವಿತೆಗಳಿಲ್ಲದಿದ್ದರೆ ಮಗುವನ್ನು ಆಶೀರ್ವದಿಸಲಾಗುವುದಿಲ್ಲ . ಯುದ್ದಗಳ ನಿಲ್ಲಿಸಲಾಗುವುದಿಲ್ಲ .ಕವಿತೆಗಳಿಲ್ಲದಿದ್ದರೆ ಮನೆ ಮನೆಯಾಗಿರುವುದಿಲ್ಲ ,ಮನುಷ್ಯ ಮನುಷ್ಯನಾಗುವುದಿಲ್ಲ ‘ ಎಂಬ ಸಾಲುಗಳಂತೆ ಎಂತಹ ಸಂಕಷ್ಟದ ಕಾಲದಲ್ಲೂ ಮನುಷ್ಯನನ್ನು ಪೊರೆಯುವ ತಾಕತ್ತು ಕಾವ್ಯಕ್ಕೆ ಇದೆ . ಕರೊನಾದಂತಹ ನೋವಿನ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ನಮ್ಮ ಸರ್ಕಾರಗಳು ಕಾರ್ಮಿಕ – ರೈತ ವಿರೋಧಿ ಕಾನೂನುಗಳನ್ನು ರೂಪಿಸಿದ ಕ್ರಮ ಕುರಿತು ನಮ್ಮ ಕಾವ್ಯ ಧಿಕ್ಕಾರ ಹೇಳುತ್ತದೆ . ದೆಹಲಿಯಲ್ಲಿ ಹೋರಾಟನಿರತ , ಎಲ್ಲರಿಗೂ ಅನ್ನಕೊಡುವ ಶ್ರಮಿಕ ರೈತರೊಂದಿಗೆ ನಿಲ್ಲುವ ನಮ್ಮ ಕಾವ್ಯ ಅವರ ನೋವಿಗೆ ಸ್ಪಂದಿಸದೇ ಇರದು.ವೈಜ್ಞಾನಿಕ ಮನೋಭಾವ ಸಂವಿಧಾನದ ಆಶಯವಾಗಿದೆ .ಚಪ್ಪಾಳೆ ತಟ್ಟುವುದು , ದೀಪ ಬೆಳಗಿಸುವುದು, ಹೂ ಹಾರಿಸುವುದರಿಂದ ಕರೋನಾ ಓಡಿಸುತ್ತೇವೆ ಎಂಬ ಅವೈಜ್ಞಾನಿಕ ನಡೆಗೆ ನಮ್ಮ ಕಾವ್ಯ ನಾಚಿಕೆಪಡುತ್ತದೆ ,ಹಾಗೂ ಇಂತಹ ಸರ್ಕಾರಗಳ ಕಿವಿ ಹಿಂಡಿ ,ಬುದ್ ದಿ ಹೇಳಿ ದಾರಿಗೆ ತರುವ ಧೈರ್ಯ ತೋರುತ್ತದೆ .”ಎಂದು ಹೇಳಿದರು, “ 23 ರ ಹರೆಯದಲ್ಲಿ ಸಮಾನತೆಯ ಕನಸಿನೊಂದಿಗೆ ಗಲ್ಲಿಗೇರಿದ ಮಾಹಾನ್ ಓದುಗ , ಹೋರಾಟಗಾರ ಭಗತ್‌ಸಿಂಗ್‌ರ ಆಶಯ ಇಡೇರಿಸುವ ಧೈರ್ಯ – ಸಾಹಸಗಳನ್ನು ಇಂದಿನ ಯುವಜನತೆ ತೋರಬೇಕಾಗಿದೆ .ಅಂತಹ ಆತ್ಮಬಲವನ್ನು ಯುವಜನತೆಯಲ್ಲಿ ಬಿತ್ತುವ ಕೆಲಸವನ್ನು ಎಐಡಿವೈಓ ಮಾಡುತ್ತಿದೆ .ನಾವೆಲ್ಲ ಅದರೊಂದಿಗೆ ಒಂದಾಗಿ ಧ್ವನಿ ಬೆರೆಸಬೇಕು ” ಎಂದು ಪ್ರೊ , ಕಾಶೀನಾಥ ಅಂಬಲಗಿಯವರು ಕರೆ ನೀಡಿದರು . ಹಾಗೂ ಅಂತಿಮ ಶಾಂತಿ ‘ಎಂಬ ಅವರದೇ ಗಜಲ್‌ನ್ನು ವಾಚಿಸಿದರು . ಅತಿಥಿ ಕವಿಗಳಾಗಿ ಭಾಗವಹಿಸಿದ ಚಿತ್ರದುರ್ಗದ ನಿಸಾರ್ ಅಹಮದ್ ಅವರು ಜಿ.ಎಸ್.ಶಿವರುದ್ರಪ್ಪನವರ ‘ ಪ್ರಜ್ಞೆ ( ಕುಂಡದ ಗಿಡಕ್ಕೆ ಏನು ಗೊತ್ತುಂಟೊ ತಾಯ್ಕೆಲದ ಜಲದ ಜೀವಂತ ಪ್ರಜ್ಞೆ ಎಂಬ ಕವಿತೆಯನ್ನು ಹಾಗೂ ತಮ್ಮ ‘ ಭರವಸೆ ‘ ಎಂಬ ಕವನವನ್ನು ವಾಚಿಸಿದರು . ತುಮಕೂರಿನ ಎಸ್.ಎನ್ .ಸ್ವಾಮಿಯವರು ‘ವಿಚಾರಣೆ ನಡೆಸುವರು ಒಂದು ದಿನ ‘ ಎಂಬ ಅನುವಾದಿತ ಕವನ ಹಾಗೂ ಗೋಪಾಲಕೃಷ್ಣ ಅಡಿಗರ ‘ ಆಗಬೋಟಿ ‘ ಕವನ ವಾಚಿಸಿದರು. ದೆಹಲಿಯಲ್ಲಿರುವ ರಮೇಶ ಅರೋಲಿಯವರು ತೆಲುಗಿನ ಗೋರಟ್ಟಿಯ ವೆಂಕಣ್ಣರವರ ‘ ಬಾರೆ ಹಣ್ಣು ಸವಿಯಾಂಗ ‘ಹಾಗೂ ನಿನ್ನ ಹೆಸರಿಟ್ಟುಕೊಂಡವೋ ಮಂಡಲಾ ‘ ಎಂಬ ಕವಿತೆಯನ್ನು ವಾಚಿಸಿದರು .ಬೆಳಗಾವಿಯ ವಿದ್ಧಲ ದಳವಾಯಿಯವರು ಸರಜೂ ಕಾಟ್ಕರ್‌ರವರ ಅನುವಾದಿತ ಕವಿತೆ ‘ ಇಂದು ಈ ಕೈಗಳಿಗೆ ಪುರಸೊತ್ತಿಲ್ಲ ‘ ಹಾಗೂ ‘ ಒಂದು ನೇಗಿಲ ಸಾಲು ‘ ಎಂಬ ತಮ್ಮ ಕವಿತೆಗಳನ್ನು ವಾಚಿಸಿದರು.ಕವಿಗಳಾಗಿ ಭಾಗವಹಿಸಿದ್ದ ಕೊಪ್ಪಳದ ಅಲ್ಲಾಗಿರಿರಾಜ ಕನಕಗಿರಿ ಅವರು`ನೀವು ಎದೆಗೆ ಗುಂಡು ಹೊಡೆದರೆ ‘ ( ಸರ್ಕಾರ ರೂಕ್ಕ ಮುದ್ರಿಸಬಹುದೇ ಹೊರತು ತುಂಡು ರೊಟ್ಟಿಯನ್ನಲ್ಲ ನೆನಪಿರಲಿ ) ಎಂಬ ಕವಿತೆ ವಾಚಿಸಿದರು .

ವಿಜಯಪುರದ ನಟರಾಜ ಕುಂಬಾರರವರು ‘ ದೌಪದಿಯ ಸ್ವಗತ ‘ , ಬೆಳಗಾವಿಯ ನದಿಮ್ ಸನದಿಯವರು ‘ ಚರಿತ್ರೆಯ ಮಹಾ ಮುಟ್ಟಾಳರು ನಾವು, ಶಿರಸಿಯ ಗಣೇಶ ಹೊಸ್ಮನೆಯವರು ‘ ಜೀವ ನಿರ್ಭರ ಬದುಕು’.ಶಿಗ್ಗಾವ್‌ನ ರಮಜಾನ್ ಕಿಲ್ಲೆದಾರರವರು ಒಮ್ಮೆ ಮನುಷ್ಯನಾಗು’ , ರಾಯಚೂರಿನ ಶಿವಶಂಕರ ಶಿಗೆಹಳ್ಳಿಯವರು“ ನಮ್ಮ ರಟ್ಟೆಯ ಕಸುವಿಗೆ ನೆಲವಾಳುವ ತಾಕತ್ತು ‘,ಮಸ್ಕಿಯ ಶರೀಫ್ ಹಸಮಕಲ್‌ರವರು ‘ ಪ್ಯಾಕೇಜ್ ಕಾಲ ‘ ಎಂಬ ಕವನಗಳನ್ನು ವಾಚಿಸಿದರು . ತುಮಕೂರಿನ ಬಾ.ಹ.ರಮಾಕುಮಾರಿಯವರು ‘ ಧರ್ಮ , ದೇವರು ಮತ್ತು ನಾವು ‘ , ಮೈಸೂರಿನ ಯತಿರಾಜ್ ಬ್ಯಾಲಳ್ಳಿಯವರು ‘ ದೀಪಗಳ ನೋಡಿದೆ ‘ , ಬಳ್ಳಾರಿಯ ಸುಚೇತಾ ಪೈ ಅವರು ‘ ತಿಂಗಳ ಅತಿಥಿ ‘ , ಹುಬ್ಬಳ್ಳಿಯ ನಾಗರಾಜ ತಳುಗೇರಿ ಅವರು’ ಹೊತ್ತು ಸರಿಯುತ್ತಿದೆ – ಕತ್ತು ಅದರುತ್ತಿದೆ ‘ , ರಾಯಚೂರಿನ ಚನ್ನಬಸವ ಜಾನೇಕಲ್‌ರವರು ‘ ಕಳೆದು ಹೋದ ಕವಿತೆ ‘ , ವಿಜಯಪುರದ ಭೀಮು ಕೊಂಡಗೂಳಿ ಅವರು ‘ ನಾವೇ ನಾಳಿನ ಹಿರಿಕರು ‘ಎಂಬ ಕವಿತೆಗಳನ್ನು ವಾಚಿಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಲೋಕಾಯುಕ್ತದ ನಿವೃತ್ತ ಸಹಾಯಕ ನಿಯಂತ್ರಕರಾದ ಹಾಗೂ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಸಲಹೆಗಾರರಾದ ಶ್ರೀ ಟಿ .ಎಂ.ವೆಂಕಟೇಶರವರು ಮಾತನಾಡಿ “ ಆಳ್ವಿಕರ ಕಟುಕ ಧೋರಣೆಯ ವಿರುದ್ದ ರೈತರು ಸಮರಶೀಲ ಹೋರಾಟಕ್ಕೆ ಮುಂದಾಗಿದ್ದಾರೆ . ನಮ್ಮ ಯುವಜನರು ತಮ್ಮ ಕಾವ್ಯದ ಮೂಲಕ ಅವರೊಂದಿಗೆ ನಿಂತಿರುವುದು ನಿಜಕ್ಕೂ ಶ್ಲಾಘನೀಯ . ಇತಿಹಾಸದಲ್ಲಿ ನೋಡಿದಂತೆ ಯುವಜನರು ಯಾವತ್ತು ಹೋರಾಟದ ಮುಂಚೂಣಿಯಲ್ಲಿರುತ್ತಾರೆ.ನ್ಯಾಯ – ನೀತಿ ,ಯಕ್ಕಾಗಿ ಜೀವವನ್ನೇ ನೀಡಲು ಹಿಂಜರಿಯರು . ಅಂತಹ ಆದರ್ಶಗಳಾದ ಭಗತ್‌ಸಿಂಗ್,ಖುದಿರಾಮ್ , ನೇತಾಜಿ ನಮ್ಮ ಮುಂದಿದ್ದಾರೆ.ಸಾಹಿತ್ಯ ಪ್ರತಿ ಹೋರಾಟಕ್ಕೂ ಸ್ಫೂರ್ತಿ ಕೊಡುವ ಕೆಲಸ ಮಾಡುತ್ತದೆ . ಎಲ್ಲ ಕಲಾಪ್ರಕಾರಗಳು ಇರುವುದು ಜನತೆಗಾಗಿ , ಇಂದು ನಿರುದ್ಯೋಗ ಯುವಜನರನ್ನು ಕಾಡುತ್ತಿದೆ . ಕರೋನಾ ಕಾಲದಲ್ಲಿ ವಲಸೆ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಆದರೆ ಸರ್ಕಾರಗಳು ಮಾತ್ರ ಕಾರ್ಪೋರೇಟ್ ಮನೆತನಗಳ ಪರವಾಗಿ ಕೆಲಸ ಮಾಡುತ್ತಿವೆ . ಇಂತಹ ಕಾಲದಲ್ಲಿ ಯುವಜನತೆ ಶೋಷಿತ ಜನತೆಯ ಪರವಾಗಿ ನಿಲ್ಲಬೇಕು . ವಾಚಿಸಿದ ಎಲ್ಲ ಕವನಗಳೂ ಇಂದಿನ ಜನ – ಜೀವನದ ಬಗ್ಗೆ ಸ್ಪಂದಿಸಿದ್ದು ನಮಗೆ ಆ ಭರವಸೆ ಮೂಡಿಸಿವೆ .ಆಳ್ವಿಕರು ಜಾತಿ – ಧರ್ಮಗಳ ಕುಂಡದಲ್ಲಿ ನಮ್ಮನ್ನು ಬಂಧಿಸುತ್ತಿದ್ದಾರೆ .ಆದರೆ ನಾವು ಬಂಧನವನ್ನು ಒಡೆದು ಒಗ್ಗಟ್ಟಾಗಿ ಪ್ರತಿಭಟಿಸಬೇಕು .ಪ್ರಗತಿಶೀಲ ಸಾಂಸ್ಕೃತಿಕ ಚಳುವಳಿ ಬೆಳೆಯಲಿ.” ಎಂದು ಕರೆ ನೀಡಿದರು . ಎಐಡಿವೈಓ ನ ರಾಜ್ಯ ಸೆಕ್ರೆಟರಿಯೆಟ್ ಸದಸ್ಯರಾದ ಚನ್ನಬಸವ ಜಾನೆಕಲ್ಲರವರು ರೈತರ ಹೋರಾಟಕ್ಕೆ ಬೆಂಬಲವಾಗಿ ಗೊತ್ತುವಳಿಯನ್ನು ಮಂಡಿಸಿದರು . ಇನ್ನೋರ್ವ ಸೆಕ್ರೆಟರಿಯೆಟ್ ಸದಸ್ಯರಾದ ಹರೀಶ ಎಚ್.ರವರು ಗೊತ್ತುವಳಿಯನ್ನು ಅನುಮೋದಿಸಿದರು . ಎಲ್ಲ ನೋಡುಗರು ಆನ್ಲೈನ್ ಕಾಮೆಂಟ್ ಮಾಡುವ ಮೂಲಕ ಬೆಂಬಲಿಸಿದರು.ಸಾವಿರಾರು ಜನರು ಈ ಆನ್ಲೈನ್ ಕವಿಗೋಷ್ಠಿಯನ್ನು ವೀಕ್ಷಿಸಿದರು . ಪ್ರಾಸ್ತಾವಿಕವಾಗಿ ಮಾತನಾಡಿದ ಎಐಡಿವೈಓನ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ವಿಜಯಕುಮಾರ್‌ರವರು ಕಾರ್ಯಕ್ರಮವನ್ನು ನಿರೂಪಿಸಿದರು .

Please follow and like us:
error