ಡಿ.5ರಂದು ಕರ್ನಾಟಕ ಬಂದ್‌ಗೆ ಬೆಂಬಲಿಸಿ: ಕನ್ನಡಪರ ಸಂಘಟನೆಗಳು

 

ಕೊಪ್ಪಳ: ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಶಾಸಕ ಬಸನಗೌಡ ಯತ್ನಾಳ ಕನ್ನಡದ್ರೋಹಿ ನಡವಳಿಕೆ , ಕನ್ನಡಪರ ಸಂಘಟನೆಗಳ ವಿರುದ್ದ ಅವಹೇಳನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ಡಿ.5ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಸಾರ್ವಜನಿಕರು ಬೆಂಬಲಿಸುವಂತೆ ಕನ್ನಡಪರಸಂಘಟನೆಗಗಳವರು  ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ   ಮಾಹಿತಿ ನೀಡಿದ ಹೋರಾಟಗಾರರು ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಬಂದ್ ಕರೆಯ ಮೇರೆಗೆ ಕೊಪ್ಪಳ ಜಿಲ್ಲೆಯ ಎಲ್ಲ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿದ್ದು, ಜನರು ಸಹಕಾರ ನೀಡಬೇಕೆಂದು ಕೋರಿದರು.

ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಡಿ.5ರಂದು ಜಿಲ್ಲಾಧಿಕಾರಿಗಳ ಕಚೇರಿಗೆ, ತಾಲೂಕು ಕೇಂದ್ರಗಳಲ್ಲಿ ತಹಶಿಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ ಎಂದರು. ಈ ಹೋರಾಟ ಯಾವುದೇ ಸಮಾಜದ ವಿರುದ್ಧವಲ್ಲ, ಬದಲಾಗಿ ಸರಕಾರ ರಾಜಕೀಯ ಲಾಭಕ್ಕಾಗಿ ಒಡೆದು ಆಳುವ ನೀತಿ ವಿರುದ್ಧ. ಶಾಂತಿಯುತ ಪ್ರತಿಭಟನೆಯೇ ನಮ್ಮ ಮೊದಲ ಆದ್ಯತೆ. ಸಿಎಂ ಅವರ ಸರ್ವಾಧಿಕಾರಿ ಧೋರಣೆ ಸರಿಯಲ್ಲ . ಹಾಗೆಯೇ ಆಡಳಿತ ಪಕ್ಷದ ಶಾಸಕರು ಕನ್ನಡಿಗರ ಮತ ಬೇಕಿಲ್ಲ ಎಂದು ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಅವರು ಕಿಡಿ ಕಾರಿದರು.

ಸಿಎಂ ಬಿಎಸ್ ವೈ ನಮ್ಮ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕುವ, ಗೊಡ್ಡು ಬೆದರಿಕೆ ಒಡ್ಡುವ ಕೆಲಸ ಕೈ ಬಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಬುದ್ಧತೆ ಮೆರೆಯಬೇಕು ಎಂದು ಅವರು ಆಗ್ರಹಿಸಿದರು. ಯಾವುದೇ ರೀತಿ ಬೆದರಿಕೆಗಳಿಗೆ ಕನ್ನಡಪರ ಸಂಘಟನೆಗಳವರು ಹೆದರುವುದಿಲ್ಲ  ಬಂದ್ ವೇಳೆ ವೈದ್ಯಕೀಯ ಸೇವೆ, ಆ್ಯಂಬುಲೆನ್ಸ್, ದಿನಪತ್ರಿಕೆ, ಹಾಲು, ಔಷಧಿ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳ ಸೇವೆಗಳಿಗೆ ತೊಂದರೆ ಆಗಲ್ಲ‌. ಸಾರ್ವಜನಿಕರು ಅಗತ್ಯ ಇದ್ದಾಗ ಮಾತ್ರ ಹೊರಗಡೆ ಬನ್ನಿ, ಇಲ್ಲವಾದಲ್ಲಿ ಮನೆಯಲ್ಲೇ ಇದ್ದುಕೊಂಡು ಪ್ರತಿಭಟನೆಗೆ ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕರವೇ ಯುವಸೈನ್ಯದ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿ, ಕಲ್ಯಾಣ ಕರವೇ ರಾಜ್ಯಾಧ್ಯಕ್ಷ ಜೀಲಾನ್‌ಸಾಬ್, ಕರವೇ ಯುವಶಕ್ತಿಯ ಆರ್.ವಿಜಯಕುಮಾರ್, ಧೀರ ಕರವೇ ರಾಜ್ಯಾಧ್ಯಕ್ಷ ವಿರೂಪಾಕ್ಷಗೌಡ ,ಪಂಪಣ್ಣ ನಾಯಕ ಮತ್ತಿತರರು ಇದ್ದರು.

Please follow and like us:
error