ಡಿ.19ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ

ಚೆನ್ನೈ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಅಲೀಗಢ ಮುಸ್ಲಿಂ ವಿವಿ ಹಿಂಸಾಚಾರ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ 80 ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಮದ್ರಾಸ್ ವಿವಿ ಕ್ಯಾಂಪಸ್‌ಗೆ ಮಂಗಳವಾರ ಪೊಲೀಸರು ಪ್ರವೇಶಿಸಿದ್ದಾರೆ. ಸಿಎಎ ವಿರುದ್ಧ ಸತತ ಎರಡನೇ ದಿನ ಕೂಡಾ ಹಲವು ಶೈಕ್ಷಣಿಕ ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆ ಮುಂದುವರಿದಿದೆ.

ಗುರುವಾರ ರಾಷ್ಟ್ರಾದ್ಯಂತ ಎಲ್ಲ ಶೈಕ್ಷಣಿಕ ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆ ನಡೆಸಲು ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿವೆ. ಹೈದರಾಬಾದ್‌ನ ಮೌಲಾನಾ ಆಝಾದ್ ಉರ್ದು ವಿವಿಯಲ್ಲಿ ಸತತ ಎರಡನೇ ದಿನವೂ ಪ್ರತಿಭಟನೆ ಮುಂದುವರಿದಿದ್ದು, ಬೋಧಕ ಸಿಬ್ಬಂದಿ ಕೂಡಾ ಪ್ರತಿಭಟನೆಗೆ ಕೈಜೋಡಿಸಿದ್ದಾರೆ. ಪರೀಕ್ಷೆಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳು, ಪೊಲೀಸರು ಪ್ರವೇಶಿಸದಂತೆ ವಿವಿ ಪ್ರವೇಶದ್ವಾರ ಮುಚ್ಚಿದ್ದಾರೆ.

ಮಂಗಳವಾರ ರಾತ್ರಿ ಉಸ್ಮಾನಿಯಾ ವಿವಿ ವಿದ್ಯಾರ್ಥಿಗಳು ಮುಂಬತ್ತಿ ಬೆಳಕಿನ ಪ್ರತಿಭಟನಾ ಮೆರವಣಿಗೆ ನಡೆಸಿದರು. “ನಾವು ಜಾತ್ಯತೀತತೆ ಪರ ಮತ್ತು ಜೆಎಂಐ ಹಾಗೂ ಎಎಂಯು ವಿದ್ಯಾರ್ಥಿಗಳಿಗೆ ಬೆಂಬಲಾರ್ಥವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದು ವಿದ್ಯಾರ್ಥಿಗಳು ಹೇಳಿದರು.

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ವಿದ್ಯಾರ್ಥಿಗಳು ಕೂಡಾ ತರಗತಿ ಬಹಿಷ್ಕರಿಸಿದ್ದಾರೆ. ಐಐಟಿ ಮುಂಬೈ ವಿದ್ಯಾಥಿಗಳು ಸರಣಿ ಮೌನ ಪ್ರತಿಭಟನೆ ನಡೆಸಿದ ಬಳಿಕ ಬುಧವಾರ ಕ್ಯಾಂಪಸ್‌ನಲ್ಲಿ ಪ್ರತಿಭಟನಾ ಸಭೆ ನಡೆಸಲು ನಿರ್ಧರಿಸಿದ್ದಾರೆ. ಇದರಲ್ಲಿ ಸಂವಿಧಾನದ ಪ್ರಮುಖ ಸಂದೇಶವನ್ನು ಓದಲಾಗುವುದು ಎಂದು ಅಂಬೇಡ್ಕರ್ ಪೆರಿಯಾರ್ ಫುಲೆ ಅಧ್ಯಯನ ವರ್ತುಲದ ಪ್ರತಿನಿಧಿಗಳು ಹೇಳಿದ್ದಾರೆ.

ಈ ಮಧ್ಯೆ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಐಶ್ ಘೋಷ್ ಹೇಳಿಕೆ ನೀಡಿ, ಪ್ರತಿಭಟನೆ ಕೇವಲ ಎಎಂಯು, ಜೆಎಂಐ ಮತ್ತು ಜೆಎನ್‌ಯುಗೆ ಸೀಮಿತವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಡಿ. 19ರಂದು ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದಾರೆ.

Please follow and like us:
error