ಡಾ. ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿವಸ : ಜಿಲ್ಲಾಡಳಿತದಿಂದ ಪುಷ್ಪ ನಮನ


ಕೊಪ್ಪಳ ಡಿ. : ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಹಣ ದಿವಸದ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಅರ್ಪಿಸಲಾಯಿತು.
ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಮಾತನಾಡಿ, ಯಾರಿಗೆ ಈ ಸಮಾಜದಲ್ಲಿ ಅವಕಾಶಗಳು ಇದ್ದಿಲ್ಲ ಅಂತಹವರಿಗೆ ಕಾನೂನಿನ ಮೂಲಕ ಅವಕಾಶಗಳನ್ನು ಹುಟ್ಟು ಹಾಕಿದ್ದು ಅಂಬೇಡ್ಕರ್‌ರವರು. ಉದಾಹರಣೆಗೆ ಲೇಬರ್ ಆಕ್ಟ್ ಅತೀ ದೊಡ್ಡ ಕಾನೂನು ಆಗಿದೆ ಎಂಬುವುದು ನಾವು ಇಂದು ನೋಡಬಹುದಾಗಿದೆ. ಮಹಿಳೆಯರ ಹಕ್ಕುಗಳಿಗಾಗಿ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ್ದಾರೆ. ಅಂಬೇಡ್ಕರ್‌ರವರು ಹಾಕಿಕೊಟ್ಟ ಮಾರ್ಗದಲ್ಲಿ ಅಧಿಕಾರಿ, ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಅಂದಾಗ ಮಾತ್ರ ಸಾರ್ವಜನಿಕರೆಲ್ಲರಿಗೂ ಸುಲಭವಾಗಿ ಸೇವೆಯನ್ನು ಒದಗಿಸಬಹುದಾಗಿದೆ. ಅಂಬೇಡ್ಕರ್‌ರವರ ಬಗ್ಗೆ ಕೇವಲ ಮಾತನಾಡುವುದು ಅಷ್ಟೆ ಅಲ್ಲ ಬದಲಾಗಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಮುಖ್ಯ. ಸರ್ಕಾರಿ ಕಛೇರಿಗಳಿಗೆ ಹೋದರೆ ನಮಗೆ ಸೇವೆ ದೊರೆಯುತ್ತದೆ ಎಂಬ ಭಾವನೆಯು ಸಾರ್ವಜನಿಕರಲ್ಲಿ ಮೂಡಬೇಕು. ಇಂತಹ ವ್ಯವಸ್ಥೆ ಜಾರಿಗೆ ಎಲ್ಲಾ ನೌಕರರು ಸಹಕರಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಉಮಾದೇವಿ ಸೊನ್ನದ್, ಸಮಾಜ ಕಲ್ಯಾಣ ಇಲಾಖೆ ಉಪನಿದೇರ್ಶಕ ಬಿ. ಕಲ್ಲೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ವಾರ್ತಾ ಇಲಾಖೆಯ ಎಂ. ಅವಿನಾಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದು, ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಪೂರ್ವಕವಾಗಿ ಭಕ್ತಿ ನಮನ ಸಲ್ಲಿಸುವುದರ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಹಣ ದಿನಾಚರಣೆಯನ್ನು ಆಚರಿಸಲಾಯಿತು.

Please follow and like us:
error