ಡಾ. ಬಾಬಾಸಾಹೇಬ ಅಂಬೇಡ್ಕರ್ ಭಾರತ ದೇಶಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ- ನ್ಯಾಯವಾದಿ ಬಾಹುಸಾಹೇಬ ಕಾಂಬಳೆ

ವಿಜಯಪುರ ಆ. ೧೫- ಮನು ಸಂವಿಧಾನವನ್ನು ಮುರಿದು ಎಲ್ಲರಿಗೂ ಶಿಕ್ಷಣ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನತೆಯನ್ನು ನೀಡುವ ಮೂಲಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಬಹುಜನ ಚಳವಳಿಯ ನೇತಾರ ಹಾಗೂ ನ್ಯಾಯವಾದಿ ಬಾಹುಸಾಹೇಬ ಕಾಂಬಳೆ ಹೇಳಿದರು.
ನಗರದ ಸಾರಿಪುತ್ರ ಬುದ್ಧವಿಹಾರದಲ್ಲಿ ನಡೆದಿರುವ ವರ್ಷಾವಾಸ ಕಾರ್ಯಕ್ರಮ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ `ಭಾರತಕ್ಕೆ ಡಾ. ಅಂಬೇಡ್ಕರ್‌ರ ಕೊಡುಗೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮನು ಸಂವಿಧಾನವು ಬ್ರಾಹ್ಮಣ ಮಹಿಳೆಯರೂ ಸೇರಿದಂತೆ ಈ ದೇಶದ ಕೆಳವರ್ಗಗಳಿಗೆ ಶಿಕ್ಷಣವನ್ನು ನಿರಾಕರಿಸಿತ್ತು. ಆದರೆ ಸ್ವತಂತ್ರ ಭಾರತದ ಸಂವಿಧಾನದಲ್ಲಿ ಶಿಕ್ಷಣವನ್ನು ಕಡ್ಡಾಯ ಮತ್ತು ಮೂಲಭೂತ ಹಕ್ಕನ್ನಾಗಿ ಪರಿವರ್ತಿಸುವ ಮೂಲಕ ಡಾ. ಅಂಬೇಡ್ಕರ್ ಅವರು ಬಹುಮುಖ್ಯ ಕೊಡುಗೆಯನ್ನು ನೀಡಿದ್ದಾರೆ ಎನ್ನುವುದನ್ನು ಈ ವರ್ಗಗಳು ಮರೆಯಬಾರದು ಎಂದು ಹೇಳಿದರು.
ಮನುವಿನ ಪ್ರಕಾರ ಶ್ರೇಷ್ಠ ವರ್ಗವೆನಿಸಿದ್ದ ಬ್ರಾಹ್ಮಣರು ಕೂಡ ಮಹಿಳೆಯರನ್ನು ಅಕ್ಷರಲೋಕದಿಂದ ದೂರ ಇಡಲಾಗಿತ್ತು. ಬ್ರಾಹ್ಮಣರು ಬಿಟ್ಟರೆ ಬೇರಾರೂ ವಿದ್ಯೆ ಕಲಿಯಬಾರದು ಎಂಬ ಮನುವಿನ ನಿಯಮವನ್ನು ಮುರಿದ ಡಾ. ಅಂಬೇಡ್ಕರರು ಕೇವಲ ದಲಿತರಿಗೆ ಮಾತ್ರವಲ್ಲ, ದೇಶದ ಎಲ್ಲ ವರ್ಗಗಳಿಗೂ ಅಕ್ಷರಲೋಕದ ಬಾಗಿಲನ್ನು ತೆರೆದರು. ಈ ದೇಶದ ಯಾರೂ ಕೂಡ ಡಾ. ಅಂಬೇಡ್ಕರ್ ಅವರ ಈ ಮಹತ್ಕಾರ್ಯವನ್ನು ಮರೆಯಬಾರದು ಎಂದರು.
ಮನು ಸಂವಿಧಾನದ ಪ್ರಕಾರ ಕ್ಷತ್ರಿಯರು ಮಾತ್ರ ರಾಜ್ಯಭಾರ ಮಾಡಬೇಕು. ರಾಜ್ಯಾಧಿಕಾರವು ಕೇವಲ ಕ್ಷತ್ರಿಯರ ಬಳಿಯೇ ಇರಬೇಕಾಗಿತ್ತು. ಒಬ್ಬ ರಾಜ ರಾಣಿಯ ಹೊಟ್ಟೆಯಿಂದಲೇ ಹುಟ್ಟಿ ಬರಬೇಕಾಗಿತ್ತು. ಆದರೆ ಡಾ. ಅಂಬೇಡ್ಕರ್ ಅವರು ಕೊಟ್ಟ ಮತಾಧಿಕಾರದ ಮೂಲಕ ರಾಜನು ಮತಪೆಟ್ಟಿಗೆಯ ಮೂಲ ಹುಟ್ಟಿಬರುವಂತಾಗಿದೆ. ಮತದ ಮೂಲಕ ಯಾರು ಬೇಕಾದರೂ ರಾಜ್ಯಾಧಿಕಾರವನ್ನು ಹಿಡಿಯುವಂಥ ಹೊಸ ವ್ಯವಸ್ಥೆಯನ್ನು ದೇಶಕ್ಕೆ ಪರಿಚಯಿಸಿದ ಅಂಬೇಡ್ಕರ್ ಅವರ ಸಂವಿಧಾನದ ಕಾರಣವಾಗಿಯೇ ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಕೂಡ ಇಂದು ದೇಶದ ಪ್ರಧಾನ ಮಂತ್ರಿಯಾಗಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ವೈಶ್ಯರು ಮಾತ್ರ ವ್ಯಾಪಾರ ಮಾಡಬೇಕೆಂಬುದು ಮನುವಿನ ನಿಯಮವಾಗಿತ್ತು. ಅವರು ಮಾತ್ರ ಸ್ವಂತ ಆಸ್ತಿ ಹೊಂದಿರಬೇಕೆಂಬ ಕಾನೂನು ಇತ್ತು. ಜಾತಿಗೊಂದು ವೃತ್ತಿಗಳಿದ್ದವು. ಈ ನಿಯಮವನ್ನು ಬದಲಾಯಿಸಿದ ಡಾ. ಅಂಬೇಡ್ಕರ್ ದೇಶದ ಎಲ್ಲ ನಾಗರಿಕರು ಯಾವುದೇ ಉದ್ಯೋಗ, ವ್ಯಾಪಾರ ಮಾಡಬಹುದು ಎಂಬ ನಿಯಮವನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ದೇಶದ ಎಲ್ಲ ವರ್ಗಗಳಿಗೆ ಔದ್ಯೋಗಿಕ ಸ್ವಾತಂತ್ರ್ಯವ್ನನು ನೀಡಿದರು. ಎಲ್ಲ ಜಾತಿ ಜನಾಂಗದವರೂ ಕೂಡ ಸ್ವಂತ ಆಸ್ತಿ ಹೊಂದುವ ಹಕ್ಕು ನೀಡಿದ ಅಂಬೇಡ್ಕರ್ ಮಹಾನ್ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದರು ಎಂದು ನ್ಯಾಯವಾದಿ ಕಾಂಬಳೆ ಹೇಳಿದರು.
ದಲಿತರಷ್ಟೇ ಶೋಷಣೆಗೊಳಗಾಗಿದ್ದ ಮಹಿಳೆಯರಿಗೆ ಸಂವಿಧಾನದ ಮೂಲಕ ಸಮಾನತೆಯನ್ನು ತಂದುಕೊಟ್ಟವರು ಡಾ. ಅಂಬೇಡ್ಕರ್. ಎಲ್ಲ ಮಹಿಳೆಯರು ಶಿಕ್ಷಣ ಪಡೆಯುವ, ತಮಗೆ ಇಚ್ಛೆ ಬಂದ ಉದ್ಯೋಗ ಮಾಡುವ ಹಕ್ಕುಗಳನ್ನು ನೀಡಿದವರು ಡಾ. ಅಂಬೇಡ್ಕರ್. ಹಿಂದೂ ಕೋಡ್ ಬಿಲ್ ಮಂಡನೆಗೆ ಅವಕಾಶ ಸಿಕ್ಕದೇ ಇದ್ದಾಗ ತಮ್ಮ ಮಂತ್ರಿ ಪದವಿಯನ್ನೇ ತ್ಯಾಗಮಾಡಿದವರು ಅವರು. ಮಹಿಳೆಯರ ಹಕ್ಕುಗಳಿಗಾಗಿ ಅಧಿಕಾರವನ್ನೇ ಧಿಕ್ಕರಿಸಿ ಬಂದ ಈ ದೇಶದ ಏಕೈಕ ನಾಯಕ ಡಾ. ಅಂಬೇಡ್ಕರ್ ಅವರನ್ನು ಆದರೆ ಇಂದು ಯಾವ ಮಹಿಳಾ ಸಂಘಟಗಳು ಮತ್ತು ಮಹಿಳಾ ಹೋರಾಟಗಾರ್ತಿಯರು ಸ್ಮರಿಸದೇ ಇರುವುದು ವಿಪರ್ಯಾಸ ಎಂದು ಹೇಳಿದರು.
ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ ಮಹಾನ್ ನಾಯಕ ಡಾ. ಅಂಬೇಡ್ಕರ್ ಅವರನ್ನು ರಾಷ್ಟ್ರನಾಯಕ ಎಂದು ಒಪ್ಪಿಕೊಳ್ಳದೇ ಅವರನ್ನು ದಲಿತ ಜಾತಿಗೆ ಮಾತ್ರ ಸೀಮಿತಗೊಳಿಸಿ ಅವರ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಲಾಗಿದೆ. ಡಾ. ಅಂಬೇಡ್ಕರ್ ಅವರು ಕೇವಲ ದಲಿತ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡದೆ ದೇಶದ ಎಲ್ಲ ವರ್ಗಗಳ ಹಿತಕ್ಕಾಗಿ ಶ್ರಮಿಸಿದ್ದಾರೆ ಎಂಬುದನ್ನು ಯಾರೂ ಅಲ್ಲಗಳೆಯಲಾಗದು ಎಂದು ಬಾಹುಸಾಹೇಬ ಕಾಂಬಳೆ ಹೇಳಿದರು.
ಶತಮಾನಗಳಿಂದ ಮೇಲ್ವರ್ಗಗಳ ಶೋಷಣೆಗೆ ಒಳಗಾಗಿದ್ದ ಶೋಷಿತ ವರ್ಗಗಳು ಈ ದೇಶವನ್ನು ಆಳಬೇಕು ಎಂಬ ಡಾ. ಅಂಬೇಡ್ಕರ್‌ರ ಕನಸು ಇವತ್ತಿಗೂ ಕನಸಾಗಿಯೇ ಉಳಿದಿದೆ. ಅವರು ಬರೆದ ಸಂವಿಧಾನವನ್ನು ಜಾರಿಗೊಳಿಸುವ ಸ್ಥಾನದಲ್ಲಿ ಮತ್ತೆ ಮೇಲ್ವರ್ಗಗಳ ಜನರೇ ಇದ್ದಾರೆ. ಶೋಷಿತರು ಕೂಡ ತಮಗೆ ಸಿಕ್ಕ ಮತಾಧಿಕಾರನ್ನು ಸರಿಯಾದ ದಿಕ್ಕಿನಲ್ಲಿ ಚಲಾಯಿಸುವಲ್ಲಿ ವಿಫಲರಾಗಿರುವುದು ಈ ವರ್ಗಗಳು ರಾಜ್ಯಾಧಿಕಾರದಿಂದ ವಂಚಿತರಾಗುವಂತೆ ಮಾಡಿದೆ ಎಂದು ವಿಷಾದಿಸಿದ ಅವರು ಡಾ. ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಎಲ್ಲ ಶೋಷಿತ ವರ್ಗಗಳು ಚಿಂತಿಸಬೇಕು ಎಂದು ಕರೆ ನೀಡಿದರು.
ಹಿರಿಯ ಮುಖಂಡರಾದ ಪೀರಪ್ಪ ನಡುವಿನಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಪ್ರವಾಸೋದ್ಯಮ ಅಧಿಕಾರಿ ಮಹೇಶ್ ಕ್ಯಾತನ್ ವೇದಿಕೆ ಮೇಲಿದ್ದರು. ಪ್ರಾಸ್ತಾವಿಕ ಮಾತನಾಡಿದ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಸಂತೋಷ ಶಹಾಪುರ ಸ್ವಾಗತಿಸಿದರು. ಪತ್ರಕರ್ತ ಅನಿಲ ಹೊಸಮನಿ ವಂದಿಸಿದರು.
ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎಚ್. ನಾಡಗಿರಿ, ಗೌರವಾಧ್ಯಕ್ಷ ಬಸವಂತ ಗುಣದಾಳ, ಹಿರಿಯರಾದ ಬಸವರಾಜ ಬ್ಯಾಳಿ, ಕೆ.ಎಂ. ಶಿವಶರಣ, ಎಂ.ಬಿ. ಹಳ್ಳದಮನಿ, ವೆಂಕಟೇಶ ವಗ್ಯಾನವರ್, ಸದಾಶಿವ ಕುಬಕಡ್ಡಿ, ಯಶವಂತ ಪೂಜಾರಿ, ಜಿ.ಬಿ. ಢವಳಗಿ, ಬಸವರಾಜ ಚಲವಾದಿ, ಶಿವಾನಂದ ಹೊಸಮನಿ, ಸಾಬು ಚಲವಾದಿ, ಮನೋಹರ ಕಾಂಬಳೆ, ರುದ್ರಪ್ಪ ಬನಸೋಡೆ, ಬಿ.ಬಿ. ಕಗ್ಗೋಡ ಬಸವರಾಜ ವಡ್ಡಿ, ಸುಜಯ ಹಳ್ಳದಕೇರಿ, ಉಪಾಸಕಿಯರಾದ ಡಾ. ಸುಜಾತಾ ಚಲವಾದಿ, ಸುಲೋಚನಾ ಚಲವಾದಿ, ಸಿದ್ದಮ್ಮ ಚಲವಾದಿ, ಶಾರದಾ ಹೊಸಮನಿ, ಭಾಗ್ಯಶ್ರೀ ವಗ್ಯಾನವರ, ರೇಣುಕಾ ಶಹಾಪುರ, ಭಾರತಿ ಹೊಸಮನಿ, ಸವಿತಾ ದೊಡಮನಿ, ಬಸಮ್ಮ ನಡುವಿನಮನಿ ಸೇರಿದಂತೆ ಬೌದ್ಧ ಉಪಾಸಕ ಉಪಾಸಕಿಯರು ಉಪಸ್ಥಿತರಿದ್ದರು.
ಬುದ್ಧವಿಹಾರ ನಿರ್ಮಾಣ ಸಮಿತಿ ಮತ್ತು ಭಾರತೀಯ ಬೌದ್ಧ ಮಹಾಸಭಾ ಆಶ್ರಯದಲ್ಲಿ ಸಾರಿಪುತ್ರ ಬುದ್ಧವಿಹಾರದಲ್ಲಿ ಜುಲೈ ೧೬ರಿಂದ ಆರಂಭವಾಗಿರುವ ವರ್ಷಾವಾಸ ಕಾರ್ಯಕ್ರಮವು ಅಕ್ಟೋಬರ್ ೧೩ ವರೆಗೆ ನಡೆಯಲಿದೆ. ಪ್ರತಿದಿನ ಸಂಜೆ ೭ ಗಂಟೆಯಿಂದ ೮ ಗಂಟೆಯ ವರೆಗೆ ಸಾಮೂಹಿಕ ಪ್ರಾರ್ಥನೆ ಮತ್ತು ಪ್ರತಿ ರವಿವಾರ ಮುಂಜಾನೆ ೧೧ ಗಂಟೆಗೆ ವಿಶೇಷ ಪ್ರಾರ್ಥನೆ ಮತ್ತು ವಿಶೇಷ ಉಪನ್ಯಾಸ ನಡೆಯಲಿವೆ. ಅಕ್ಟೋಬರ್ ೧೪ರಂದು ಸಮಾರೋಪ ಸಮಾರಂಭ ನಡೆಯಲಿದೆ.

Please follow and like us:
error